ಕಾಸರಗೋಡು: 'ತ್ಯಾಜ್ಯ ಮುಕ್ತ ಕೇರಳ, ಸ್ವಚ್ಛ ಕೇರಳ'ಗುರಿ ಸಾಧಿಸಲು ನಡೆಯುತ್ತಿರುವ ಅಭಿಯಾನದ ಅಂಗವಾಗಿ, ಎಲ್ಲಾ ಸರ್ಕಾರಿ ಮತ್ತು ಅರೆ ಸರ್ಕಾರಿ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ತ್ಯಾಜ್ಯದ ವೈಜ್ಞಾನಿಕ ನಿರ್ವಹಣೆಯನ್ನು ಜಾರಿಗೆ ತರಲು ಮತ್ತು ಮೇ 15ರೊಳಗೆ ಸ್ವಚ್ಛಗೊಳಿಸಲು ತಿಳಿಸಲಾಗಿದೆ.
ಸಾರ್ವಜನಿಕ ಪ್ರದೇಶದಲ್ಲಿ ತ್ಯಾಜ್ಯ ಕಡಿತಗೊಳಿಸಿ, ಶುಚಿತ್ವ ಕಾಪಾಡುವ ಉದ್ದೇಶದಿಂದ ಸ್ವಚ್ಛತಾ ಅಭಿಯಾನ ನಡೆಸಲಾಗುತ್ತಿದೆ.
ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ರಾಜ್ಯದ ಮುಖ್ಯ ಕಾರ್ಯದರ್ಶಿಯವರ ಮೇ 3ರ ಸರ್ಕಾರಿ ಆದೇಶದಂತೆ ಎಲ್ಲಾ ಸಂಸ್ಥೆಗಳು ಸಾಮಾನ್ಯ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು. ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ನೌಕರರ ಮನೆಗಳಲ್ಲಿ ಬಳಕೆದಾರರು ತ್ಯಾಜ್ಯವನ್ನು ಪ್ರತ್ಯೇಕಿಸಿ, ಸಾವಯವ ತ್ಯಾಜ್ಯವನ್ನು ಗೊಬ್ಬರವಾಗಿಸುವ ಮತ್ತು ಅಜೈವಿಕ ತ್ಯಾಜ್ಯವನ್ನು ಶುಲ್ಕದೊಂದಿಗೆ ಹಸಿರು ಕ್ರಿಯಾಸೇನೆಗೆ ಹಸ್ತಾಂತರಿಸಲಾಗುತ್ತಿರುವ ಬಗ್ಗೆ ಆಯಾ ಕಚೇರಿ ಮುಖ್ಯಸ್ಥರ ಎದುರು ಸ್ವಯಂ ಪ್ರಮಾಣೀಕರಿಸಲು ಸೂಚಿಸಲಾಗಿದೆ.
ಕಚೇರಿ ತಪಾಸಣೆಗೆ ತೆರಳುವ ಅಧಿಕಾರಿಗಳು ಆಯಾ ಕಚೇರಿಯಲ್ಲಿ ಸ್ವಚ್ಛತೆ ಮತ್ತು ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿವೆ ಎಂದು ಮೌಲ್ಯಮಾಪನ ಮಾಡಿ ಮೇಲಧಿಕಾರಿಗಳಿಗೆ ವರದಿ ನೀಡಬೇಕು. ಸಂಸ್ಥೆಯ ಮುಖ್ಯಸ್ಥರು ಎಲ್ಲಾ ಕಛೇರಿಗಳು ಹಸಿರು ಸಂಹಿತೆಯನ್ನು ಅನುಸರಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಬಯೋ ಕಾಂಪೆÇೀಸ್ಟಿಂಗ್ ಘಟಕ ಮತ್ತು ಕ್ಲೀನ್ ಕೇರಳ ಕಂಪನಿಯ ಎಂಸಿಎಫ್ ಕಾರ್ಯನಿರ್ವಹಿಸುತ್ತಿರುವ ಬಗ್ಗೆಯೂ ಖಚಿತಪಡಿಸಿಕೊಲ್ಳಬೇಕು ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ನವಕೇರಳ ಕ್ರಿಯಾ ಯೋಜನೆ ಜಿಲ್ಲಾ ಸಂಯೋಜಕ ಕೆ.ಬಾಲಕೃಷ್ಣನ್ ಸರ್ಕಾರದ ಮಾರ್ಗಸೂಚಿಗಳನ್ನು ವಿವರಿಸಿದರು. ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಜಿ.ಶೆರಿ ಸ್ವಚ್ಛ ಸಿವಿಲ್ ಸ್ಟೇಷನ್ ಗ್ರೀನ್ ಸಿವಿಲ್ ಸ್ಟೇಷನ್ ಎಂಬ ಜಿಲ್ಲಾ ಪಂಚಾಯಿತಿ ಯೋಜನೆ ಕುರಿತು ಮಾಹಿತಿ ನೀಡಿದರು. ಸ್ಥಳೀಯಾಡಳಿತ ಇಲಾಖೆ ಸಹಾಯಕ ನಿರ್ದೇಶಕ ಬಿ.ಎನ್.ಸುರೇಶ್ ಸ್ವಾಗತಿಸಿದರು. ಜಿಲ್ಲಾ ಶುಚಿತ್ವಮಿಷನ್ ಕಾರ್ಯಕ್ರಮಾಧಿಕಾರಿ ಕೆ.ವಿ.ರಂಜಿತ್ ವಂದಿಸಿದರು.

