ನವದೆಹಲಿ:2020ರಲ್ಲಿ ವಿಶ್ವದಲ್ಲಿಯೇ ಅತ್ಯಂತ ಹೆಚ್ಚಿನ ತಾಯಂದಿರ ಮರಣ,ಮೃತಶಿಶು ಜನನ ಮತ್ತು ನವಜಾತ ಶಿಶುಗಳ ಸಾವುಗಳು ಭಾರತದಲ್ಲಿ ಸಂಭವಿಸಿದ್ದವು ಎಂದು ಮಂಗಳವಾರ ಬಿಡುಗಡೆಗೊಂಡ ವಿಶ್ವಸಂಸ್ಥೆಯ ವರದಿಯು ಹೇಳಿದೆ.
ದಕ್ಷಿಣ ಆಫ್ರಿಕಾದ ಕೇಪ್ಟೌನ್ನಲ್ಲಿ ಅಂತರಾಷ್ಟ್ರೀಯ ತಾಯಂದಿರು ಮತ್ತು ನವಜಾತ ಶಿಶುಗಳ ಆರೋಗ್ಯ ಸಮ್ಮೇಳನದಲ್ಲಿ ಈ ವರದಿಯು ಬಿಡುಗಡೆಗೊಂಡಿದೆ.
ವರದಿಯ ಪ್ರಕಾರ 2020ರಲ್ಲಿ ಭಾರತದಲ್ಲಿ 7,88,000 ತಾಯಂದಿರ ಮರಣಗಳು,ಮೃತಶಿಶುಗಳ ಜನನಗಳು ಮತ್ತು ನವಜಾತ ಶಿಶುಗಳ ಸಾವುಗಳು ಸಂಭವಿಸಿವೆ. ಆ ವರ್ಷ ಇಂತಹ ಸಾವುಗಳಲ್ಲಿ ಶೇ.17ರಷ್ಟು ಪಾಲು ಭಾರತದ್ದಾಗಿತ್ತು. 2020ರಲ್ಲಿ ವಿಶ್ವದಲ್ಲಿಯ ಜೀವಂತ ಜನನಗಳಲ್ಲಿಯೂ ಶೇ.17ರಷ್ಟು ಪಾಲನ್ನು ಭಾರತವು ಹೊಂದಿತ್ತು.
ಭಾರತದಲ್ಲಿ 2020ರಲ್ಲಿ 24,000 ತಾಯಂದಿರ ಮರಣಗಳು,2,97,000 ಮೃತಶಿಶುಗಳ ಜನನಗಳು ಮತ್ತು 4,68,000 ನವಜಾತ ಶಿಶುಗಳ ಸಾವುಗಳು ಸಂಭವಿಸಿವೆ ಎಂದು ಅಂದಾಜಿಸಲಾಗಿದೆ.
ವಿಶ್ವಾದ್ಯಂತ ಇಂತಹ ಸಾವುಗಳಲ್ಲಿ ಶೇ.60ರಷ್ಟು 10 ರಾಷ್ಟ್ರಗಳಲ್ಲಿ ಸಂಭವಿಸಿದ್ದು,ಈ ಪೈಕಿ ಭಾರತವು ಅಗ್ರಸ್ಥಾನದಲ್ಲಿದೆ. ನೈಜೀರಿಯಾ,ಪಾಕಿಸ್ತಾನ್,ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ,ಇಥಿಯೋಪಿಯಾ,ಬಾಂಗ್ಲಾದೇಶ,ಚೀನಾ,ಇಂಡೋನೇಷಿಯಾ, ಅಫಘಾನಿಸ್ತಾನ್ ಮತ್ತು ಯುನೈಟೆಡ್ ರಿಪಬ್ಲಿಕ್ ಆಫ್ ತಾಂಜಾನಿಯಾ ಇತರ ಒಂಭತ್ತು ದೇಶಗಳಾಗಿವೆ.
2020ರಲ್ಲಿ ವಿಶ್ವಾದ್ಯಂತ ಇಂತಹ 45 ಲಕ್ಷ ಸಾವುಗಳು ಸಂಭವಿಸಿದ್ದವು ಎಂದು ತಿಳಿಸಿರುವ ವರದಿಯು,ತಾಯಂದಿರ ಮರಣಗಳು,ಮೃತಶಿಶುಗಳ ಜನನ ಮತ್ತು ನವಜಾತ ಶಿಶುಗಳ ಸಾವುಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಜಾಗತಿಕ ಪ್ರಗತಿಯು ಕಳೆದ ದಶಕದಲ್ಲಿ ನಿಧಾನಗೊಂಡಿದೆ. 2010ರ ದಶಕಕ್ಕಿಂತ ಹೆಚ್ಚಿನ ಪ್ರಗತಿಯನ್ನು 2000 ಮತ್ತು 2010ರ ನಡುವೆ ಸಾಧಿಸಲಾಗಿತ್ತು ಎಂದು ಹೇಳಿದೆ.
ವಿಶ್ವಾದ್ಯಂತ ಗರ್ಭಿಣಿಯರು ಮತ್ತು ನವಜಾತ ಶಿಶುಗಳ ಸಾವುಗಳು ಸ್ವೀಕಾರಾರ್ಹವಲ್ಲದ ಹೆಚ್ಚಿನ ಪ್ರಮಾಣದಲ್ಲಿ ಮುಂದುವರಿದಿವೆ. ಅವರಿಗೆ ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ಕೋವಿಡ್ ಸಾಂಕ್ರಾಮಿಕವು ಇನ್ನಷ್ಟು ಹಿನ್ನಡೆಯನ್ನುಂಟು ಮಾಡಿದೆ ಎಂದು ಹೇಳಿದ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ)ಯ ನಿರ್ದೇಶಕ (ತಾಯಿ,ನವಜಾತ ಶಿಶು,ಮಗು ಮತ್ತು ಹದಿಹರೆಯದವರ ಆರೋಗ್ಯ ವಿಭಾಗ) ಡಾ.ಅಂಶು ಬ್ಯಾನರ್ಜಿ ಅವರು,ಪ್ರತಿಯೋರ್ವ ತಾಯಿ ಮತ್ತು ಮಗು,ಅವರು ಎಲ್ಲಿಯೇ ವಾಸವಿರಲಿ,ಅವರಿಗೆ ಆರೋಗ್ಯ ಮತ್ತು ಬದುಕುಳಿಯುವ ಅತ್ಯುತ್ತಮ ಅವಕಾಶ ದೊರೆಯುವಂತಾಗಲು ಪ್ರಾಥಮಿಕ ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆಗಳು ಅಗತ್ಯವಾಗಿವೆ ಎಂದರು.




.jpeg)
