ದೇಶದಲ್ಲಿ ತಯಾರಾದ ಕೆಮ್ಮಿನ ಔಷಧಿಗಳ ಸೇವನೆಯಿಂದ ಕೆಲವು ಹೊರದೇಶಗಳಲ್ಲಿ ಮಕ್ಕಳು ಸಾವನ್ನಪ್ಪಿವೆಯೆಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಭಾರತವು ತನ್ನ ಫಾರ್ಮಾಸ್ಯೂಟಿಕಲ್ ಕೈಗಾರಿಕಾ ನೀತಿಯನ್ನು ಬದಲಾಯಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿದೆಯೆಂದು ಪ್ರಧಾನಿ ಕಾರ್ಯಾಲಯದ ದಾಖಲೆಗಳಿಂದ ತಿಳಿದುಬಂದಿದೆ.
ಮಕ್ಕಳ ಸಾವಿಗೆ ಕಾರಣವಾದ ಕೆಮ್ಮಿನ ಔಷಧಿಗಳನ್ನು ರಫ್ತು ಮಾಡುವ ಬಗ್ಗೆ ಪರಿಹಾರ ಮಾರ್ಗವೊಂದನ್ನು ಕಂಡುಹಿಡಿಯಲು ಹೈದರಾಬಾದ್ನಲ್ಲಿ ಚಿಂತನಾ ಶಿಬಿರವೊಂದನ್ನು ಆಯೋಜಿಸಲಾಗಿದೆಯೆಂದು ಪ್ರಧಾನಿ ಕಾರ್ಯಾಲಯವು ಮೇ 15ರಂದು ಬಿಡುಗಡೆಗೊಳಿಸಿದ ದಾಖಲೆಯಲ್ಲಿ ತಿಳಿಸಿದೆ.
ಫೆಬ್ರವರಿಯಲ್ಲಿ ಹೈದರಾಬಾದ್ನಲ್ಲಿ ನಡೆದ ಚಿಂತನಾ ಅಧಿವೇಶನದಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವ್ಯ , ಕೇಂದ್ರ ಹಾಗೂ ರಾಜ್ಯ ಸರಕಾರ ಮಟ್ಟದ ನಿಯಂತ್ರಣಾಧಿಕಾರಿಗಳು ಪಾಲ್ಗೊಂಡಿದ್ದರು ಎಂದು ಆರೋಗ್ಯ ಔಷಧಿಗಳ ಉತ್ಪಾದನೆಗೆ ಸಂಬಂಧಿಸಿದ ಮಹತ್ವದ ವಿಷಯಗಳನ್ನು ಹಾಲಿ ನೀತಿಯಲ್ಲಿ ಕಡೆಗಣಿಸಲಾಗಿದೆ ಎಂದು ವರದಿ ಹೇಳಿದೆ. ಜಾಗತಿಕ ಮಟ್ಟದಲ್ಲಿ ಜೆನೆರಿಕ್ ಔಷಧಿಗಳ ಅತಿ ದೊಡ್ಡ ಪೂರೈಕೆದಾರನಾಗಿರುವ ಭಾರತವು ಔಷಧ ನೀತಿಯಲ್ಲಿನ ಬದಲಾವಣೆಯ ಮೂಲಕ 41 ಶತಕೋಟಿ ಡಾಲರ್ ಮೊತ್ತದ ಫಾರ್ಮಾಸ್ಯೂಟಿಕಲ್ ಉದ್ಯಮದ ಮೇಲಿನ ನಿಗಾವಣೆಯನ್ನು ಹೆಚ್ಚಿಸಲಿದೆ ಎಂದು ಮೂಲಗಳು ತಿಳಿಸಿವೆ.
ಕೆಮ್ಮಿನ ಔಷಧಿಗಳು ಹಾಗೂ ಔಷಧ ತಯಾರಿಕೆಗೆ ಬಳಸುವ ಕಚ್ಚಾವಸ್ತುಗಳ ಪರೀಕ್ಷೆಯನ್ನು ಹೆಚ್ಚಿಸುವ ಬಗ್ಗೆಯೂ ಪರಿಶೀಲಿಸಲಾಗುವುದೆಂದು ಮೂಲಗಳು ತಿಳಿಸಿವೆ.
ಕೆಮ್ಮಿನ ಔಷಧಿಗಳ ಕುರಿತ ವಿವಾದಕ್ಕೆ ಸಂಬಂಧಿಸಿ ಮೊದಲ ಬಾರಿಗೆ ಪ್ರಧಾನಿ ಕಾರ್ಯಾಲಯವು ಸ್ಪಂದಿಸಿರುವುದು ಇದೇ ಮೊದ ಸಲವಾಗಿದೆ. ಆದಾಗ್ಯೂ ಈ ಬಗ್ಗೆ ಪ್ರಧಾನಿ ಕಾರ್ಯಾಲಯ ಅಥವಾ ಆರೋಗ್ಯ ಸಚಿವಾಲಯ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲವೆಂದು ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಭಾರತದ ಔಷಧಿ ನಿಯಂತ್ರಣ ಸಂಸ್ಥೆಯಾದ ಕೇಂದ್ರೀಯ ಔಷಧಿ ಮಾನದಂಡ ನಿಯಂತ್ರಣ ಸಂಸ್ಥೆ (ಸಿಡಿಎಸ್ಸಿಓ)ಯು ಕೆಮ್ಮಿನ ಸಿರಪ್ಗಳನ್ನು ರಫ್ತು ಮಾಡುವ ಮೊದಲು ಪರೀಕ್ಷೆಗೆ ಒಳಪಡಿಸುವ ಪ್ರಸ್ತಾವನೆಯನ್ನು ಇರಿಸಿತ್ತು ಎಂದು ಮಂಗಳವಾರ ಮಾಧ್ಯಮಸಂಸ್ಥೆಯು ತಿಳಿಸಿದೆ.
ಭಾರತೀಯ ಔಷಧಿ ಉತ್ಪಾದಕಸಂಸ್ಥೆಯೊಂದು ತಯಾರಿಸಿದ ಕೆಮ್ಮಿನ ಸಿರಪ್ಗಳಲ್ಲಿ ವಿಷಕಾರಿಯೆಂದು ಪರಿಗಣಿಸಲಾದ ಡಿಥಿಲೆನ್ ಗ್ಲೈಕೊಲ್ ಹಾಗೂ ಇಥಿಲಿನ್ ಗ್ಲಿಕೊಲ್ ಅಂಶಗಳು ಒಳಗೊಂಡಿರುವುದು ಗಾಂಬಿಯಾ ದೇಶದಲ್ಲಿ 70ಕ್ಕೂ ಅಧಿಕ ಮಕ್ಕಳ ಸಾವಿಗೆ ಕಾರಣವಾಯಿತೆಂದು ವಿಶ್ವಸಂಸ್ಥೆ ಕಳೆದ ವರ್ಷ ವರದಿ ಮಾಡಿತ್ತು. ಆದರೆ ಭಾರತವು ತನ್ನ ದೇಶದಲ್ಲಿ ಉತ್ಪಾದನೆಯಾದ ಕೆಮ್ಮಿನ ಔಷಧಿಗಳಿಗೂ, ಈ ಸಾವುಗಳಿಗೂ ಸಂಬಂಧವಿರುವುದನ್ನು ನಿರಾಕರಿಸಿತ್ತು.





