ಕೊಚ್ಚಿ: ವಿದ್ಯಾರ್ಥಿನಿ ಜತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ತಮಿಳುನಾಡು ಸರ್ಕಾರಿ ಸಾರಿಗೆ ಬಸ್ ನಿರ್ವಾಹಕನನ್ನು ಅಲ್ಲಿನ ಕುಂದಾರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ತೆಂಕಾಸಿ ಮತ್ತು ಕೇರಳದ ಕೊಲ್ಲಂ ನಡುವೆ ಸಂಚಾರ ಮಾಡುವ ಸರ್ಕಾರಿ ಬಸ್‌ನಲ್ಲಿ ಈ ಘಟನೆ ನಡೆದಿದೆ.
ಸಂತ್ರಸ್ತ ವಿದ್ಯಾರ್ಥಿನಿ ಪುನಲೂರು ಮೂಲದವಳು. ಆಕೆ ಮನೆಗೆ ಮರಳಲು ಪ್ರತಿದಿನ ಇದೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಳು. ಏಪ್ರಿಲ್ 19ರಂದು ಬಸ್ ಕೊಟ್ಟರಾಕರ ಸೇತುವೆ ದಾಟಿದಾಗ ಮದುವೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿ ಆಕೆಯ ಬಳಿ ಬಂದು ಪಕ್ಕದ ಸೀಟಿನಲ್ಲಿ ಕುಳಿತುಕೊಳ್ಳುತ್ತಾನೆ. ಬಳಿಕ ಆಕೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಾನೆ. ಮದುವೆ ಮಾಡಿಕೊಳ್ಳೋಣ ಅಂತಾ ವಿದ್ಯಾರ್ಥಿನಿಯನ್ನು ಪೀಡಿಸುತ್ತಾನೆ. ಆದರೆ, ಆಕೆಗೆ ಇದರಿಂದ ಕಿರಿಕಿರಿ ಉಂಟಾಗುತ್ತದೆ.
ಘಟನೆ ನಡೆದ ಬೆನ್ನಲ್ಲೇ ಸಂತ್ರಸ್ತೆ ಪಾಲಕರಿಗೆ ತಿಳಿಸುತ್ತಾಳೆ. ನಂತರ ಪಾಲಕರೊಂದಿಗೆ ಬಸ್ ಕಂಡಕ್ಟರ್ನನ್ನು ಪ್ರಶ್ನಿಸಲು ಮಾರನೇ ದಿನ ಬರುತ್ತಾರೆ. ಆದರೆ, ಅದೇ ದಿನ ಬಂಧಿತ ಅರಸನ್ಗೆ ಬೇರೆ ಸ್ಥಳಕ್ಕೆ ಕಾರ್ಯ ನಿಯೋಜನೆ ಮಾಡಲಾಗಿತ್ತು. ಇತ್ತೀಚೆಗೆ ವಿದ್ಯಾರ್ಥಿನಿಯ ತಂದೆ ಅದೇ ಬಸ್‌ನಲ್ಲಿ ಪ್ರಯಾಣ ಬೆಳೆಸಿದ್ದರು. ಮಗಳನ್ನು ಬೇರೆ ಸೀಟನಲ್ಲಿ ಕೂರಿಸಿ ತಾವು ಅವಳಿಗೆ ಕಾಣುವಂತೆ ಹಿಂದೆ ಕುಳಿತಿದ್ದರು.
ಈ ವೇಳೆ ವಿದ್ಯಾರ್ಥಿನಿಯ ಬಳಿ ಹೋದ ನಿರ್ವಾಹಕ ಮತ್ತೆ ಮದುವೆ ಒತ್ತಾಯಿಸಿ, ಆಕೆಯೊಂದಿಗೆ ಅನುಚಿತವಾಗಿ ವರ್ತಿಸಲು ಮುಂದಾಗುತ್ತಾನೆ. ಬಳಿಕ ಮಧ್ಯಪ್ರವೇಶಿಸಿದ ತಂದೆ ಮತ್ತು ಆಕೆಯ ಸಂಬಂಧಿಕರು ನಿರ್ವಾಹಕನಿಗೆ ಧರ್ಮದೇಟು ನೀಡಿ ಕುಂದಾರ ಪೊಲೀಸ್ ಠಾಣೆಗೆ ಎಳೆದೊಯ್ದು ಒಪ್ಪಿಸಿದರು. ಪ್ರಕರಣ ದಾಖಲಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.





