ನವದೆಹಲಿ: ಚಿತ್ರಕಥೆ ಮೂಲಕವೇ ವಿವಾದ ಎಬ್ಬಿಸಿರುವ 'ದಿ ಕೇರಳ ಸ್ಟೋರಿ' ಸಿನಿಮಾ ವಿಚಾರವಾಗಿ ತಮಿಳುನಾಡು ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಮತ್ತು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ನಡುವೆ ಟ್ವೀಟ್ ಸಮರ ನಡೆದಿದೆ.
'ಕೇರಳ ಸ್ಟೋರಿ' ಸಿನಿಮಾ ಪ್ರದರ್ಶನವನ್ನು ತಮಿಳುನಾಡು ಸರ್ಕಾರ ರದ್ದುಪಡಿಸಿದ ಬೆನ್ನಲ್ಲೇ ಟ್ವೀಟ್ ಮಾಡಿರುವ ಖುಷ್ಬೂ ಸುಂದರ್, 'ಜನರು ಏನು ನೋಡಬೇಕು ಎಂಬುವುದನ್ನು ಅವರೇ ನಿರ್ಧರಿಸಲಿ. ಅವರು ಏನು ನೋಡಬೇಕು ಎಂಬುವುದನ್ನು ನೀವು ನಿರ್ಧರಿಸಲು ಸಾಧ್ಯವಿಲ್ಲ. ಸಿನಿಮಾ ಪ್ರದರ್ಶನವನ್ನು ರದ್ದುಗೊಳಿಸಲು ತಮಿಳುನಾಡು ಸರ್ಕಾರ ಕುಂಟು ನೆಪಗಳನ್ನು ಮುಂದಿಡುತ್ತಿದೆ. ಇದು ನೋಡಲೇ ಬೇಕಾದ ಸಿನಿಮಾ ಎಂದು ಜನರಿಗೆ ತಿಳಿಸಿದ್ದಕ್ಕೆ ಧನ್ಯವಾದಗಳು' ಎಂದು ಬರೆದುಕೊಂಡಿದ್ದರು.
ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಕಪಿಲ್ ಸಿಬಲ್, 'ಜನರು ಏನನ್ನು ನೋಡಬೇಕೆಂದು ಅವರೇ ನಿರ್ಧರಿಸಲಿ ಎಂದು ನೀವು (ಖುಷ್ಬು) ಹೇಳಿದ್ದಿರಿ. ಹಾಗಾದರೆ ಅಮೀರ್ ಖಾನ್ ಅವರ 'ಪಿಕೆ', ಶಾರುಖ್ ಖಾನ್ ಅವರ 'ಪಠಾಣ್' ಹಾಗೂ 'ಬಾಜಿರಾವ್ ಮಸ್ತಾನಿ' ಸಿನಿಮಾಗಳ ಪ್ರದರ್ಶನದ ವಿರುದ್ಧ ಏಕೆ ಪ್ರತಿಭಟನೆ ನಡೆಸಬೇಕಿತ್ತು. ನಿಮ್ಮ ರಾಜಕೀಯ ಬೆಂಬಲವು ದ್ವೇಷಕ್ಕೆ ಉತ್ತೇಜನ ನೀಡುತ್ತಿದೆ' ಎಂದು ಹೇಳಿದರು.
ಕಪಿಲ್ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಖುಷ್ಬೂ ಸುಂದರ್, 'ಕಪಿಲ್ ಅವರೇ.. ಸತ್ಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ನೀವು ಮಾತನಾಡಿರುವುದನ್ನು ನೋಡಿ ತುಂಬಾ ದುಃಖವಾಗಿದೆ. ನೀವು ಹೇಳಿದ ಮೇಲಿನ ಯಾವುದೇ ಸಿನಿಮಾವನ್ನು ಬಿಜೆಪಿ ಸರ್ಕಾರ ಬ್ಯಾನ್ ಮಾಡಿಲ್ಲ. ಒಂದು ವೇಳೆ ನೀವು ನಿಮ್ಮ ಸುಳ್ಳುಗಳನ್ನು ಸಮರ್ಥಿಸಿಕೊಂಡು ಪ್ರತಿಭಟನೆ ಮಾಡುತ್ತಿರುವವನ್ನು ಬೆಂಬಲಿಸಿ ಅವರನ್ನು ಬಿಜೆಪಿಗೆ ಹೋಲಿಸುತ್ತಿದ್ದೀರಾ ಎಂದರೆ ನೀವು ಎಷ್ಟು ಹತಾಶರಾಗಿದ್ದೀರಿ ಎಂದು ತೋರಿಸುತ್ತದೆ' ಎಂದು ಹೇಳಿದರು.





