HEALTH TIPS

ವಿರೋಧ ಪಕ್ಷಗಳು ಒಂದಾದರೆ ಬಿಜೆಪಿ ಸೋಲು ಖಚಿತ: ರಾಹುಲ್‌ ಗಾಂಧಿ

                 ವದೆಹಲಿ/ಸಾಂತಕ್ಲಾರ: 'ಭಾರತದಲ್ಲಿನ ಒಂದು ಗುಂಪಿನ ಜನರು ಜಗತ್ತಿನಲ್ಲಿ ಎಲ್ಲವೂ ತಮಗೇ ತಿಳಿದಿದೆ. ದೇವರಿಗಿಂತಲೂ ಹೆಚ್ಚು ತಿಳಿವಳಿಕೆ ಇದೆ ಎಂದುಕೊಂಡಿದ್ದಾರೆ. ಇದೊಂದು ಕಾಯಿಲೆ. ನಮ್ಮ ಪ್ರಧಾನಿಯೂ ಇಂಥ ಪ್ರಭೇದದ ಜನರಲ್ಲಿ ಒಬ್ಬರು' ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವ್ಯಂಗ್ಯವಾಡಿದರು.

               ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸಾಗರೋತ್ತರ ಭಾರತೀಯ ಕಾಂಗ್ರೆಸ್‌ ಮಂಗಳವಾರ ಆಯೋಜಿಸಿದ್ದ 'ಪ್ರೀತಿಯ ಅಂಗಡಿ' (ಮೊಹಬ್ಬತ್‌ ಕಿ ದುಕಾನ್‌) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿವಿಧ ಕ್ಷೇತ್ರಗಳು, ಸಂಘಟನೆಯವರು ಇದರಲ್ಲಿ ಭಾಗವಹಿಸಿದ್ದರು.

'ಬಹಳ ದೊಡ್ಡದಾಗಿರುವ ಈ ಜಗತ್ತಿನ ಬಗ್ಗೆ ಒಬ್ಬ ವ್ಯಕ್ತಿ ತಿಳಿದುಕೊಳ್ಳುವುದು ಎಂದರೆ ಅದು ಬಹಳ ಕಷ್ಟದ ಕೆಲಸ. ಆದರೆ, ಆ ಗುಂಪಿನ ಜನರು ಮಾತ್ರ ದೇವರಿಗಿಂತ ಹೆಚ್ಚಿನ ತಿಳಿವಳಿಕೆ ನಮಗೆ ಇದೆ ಅಂದುಕೊಂಡಿದ್ದಾರೆ. ದೇವರೊಂದಿಗೆ ಕುಳಿತು, ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದನ್ನು ಬೇಕಾದರೂ ವಿವರಿಸುತ್ತಾರೆ' ಎಂದರು.


                'ಈಗ ನೀವು ಮೋದಿ ಅವರನ್ನು ದೇವರೊಂದಿಗೆ ಕುಳ್ಳಿರಿಸಿ. ಈ ಜಗತ್ತು ಹೇಗೆ ಕೆಲಸ ಮಾಡುತ್ತದೆ ಎಂಬ ಕುರಿತು ಬಹುಶಃ ಮೋದಿ ಅವರು ದೇವರಿಗೆ ವಿವರಿಸಬಹುದು. ನಂತರ ದೇವರಿಗೇ ಆತನ ಸೃಷ್ಟಿಯ ಬಗ್ಗೆ ಗೊಂದಲ ಉಂಟಾಗಬಹುದು' ಎಂದರು.

                   'ಇತಿಹಾಸಕಾರರಿಗೆ ಇತಿಹಾಸವನ್ನು, ವಿಜ್ಞಾನಿಗಳಿಗೆ ವಿಜ್ಞಾನವನ್ನು, ಸೇನೆಗೆ ಯುದ್ಧ ಮಾಡುವುದನ್ನು... ಹೀಗೆ ಯಾರಿಗೆ ಏನು ಬೇಕೊ ಎಲ್ಲವನ್ನೂ ಈ ಗುಂಪಿನ ಜನರು ಹೇಳಿಕೊಡುತ್ತಾರೆ. ಆದರೆ, ನಿಜ ಏನೆಂದರೆ ಅವರಿಗೆ ಏನೂ ತಿಳಿದಿರುವುದಿಲ್ಲ. ಯಾಕೆಂದರೆ, ಅವರು ಕೇಳಿಸಿಕೊಳ್ಳಲು ಸಿದ್ಧರಿಲ್ಲ' ಎಂದರು.

  

                                  'ಬೇಕು ಪರ್ಯಾಯ ದೃಷ್ಟಿಕೋನ'

                  '2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ವಿರೋಧ ಪಕ್ಷಗಳು ಒಂದಾದರೆ ಸಾಲದು. ಬಿಜೆಪಿಗಿಂತ ಭಿನ್ನವಾದ ಪರ್ಯಾರ್ಯ ದೃಷ್ಟಿಕೋನ ಬೇಕು' ಎಂದು ರಾಹುಲ್‌ ಗಾಂಧಿ ಅಭಿಪ್ರಾಯಪಟ್ಟರು. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಗೆಲುವನ್ನು ಈ ವೇಳೆ ಉಲ್ಲೇಖಿಸಿದರು. 'ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ವಿರೋಧ ಪಕ್ಷಗಳು ಒಂದು ನೆಲೆಯಲ್ಲಿ ಒಗ್ಗೂಡಿದರೆ ಖಂಡಿತವಾಗಿಯೂ ಬಿಜೆಪಿಯನ್ನು ಮಣಿಸಬಹುದು. ಆದರೆ ಇದು ವಿರೋಧ ಪಕ್ಷಗಳು ಒಗ್ಗೂಡುವಿಕೆಯಿಂದ ಮಾತ್ರ ಸಾಧ್ಯವಿಲ್ಲ. ನಾವು ಪರ್ಯಾಯ ದೃಷ್ಟಿಕೋನವನ್ನು ಚಿಂತನೆಯನ್ನು ಕಂಡುಕೊಳ್ಳಬೇಕಿದೆ' ಎಂದರು. 'ಭಾರತ ಜೋಡೊ ಯಾತ್ರೆಯು ಇಂಥದೊಂದು ದೃಷ್ಟಿಕೋನದ ಹುಡುಕಾಟದ ಮೊದಲ ಹೆಜ್ಜೆ. ಇದೇ ದೃಷ್ಟಿಕೋನದೊಂದಿಗೆ ಎಲ್ಲ ವಿರೋಧ ಪಕ್ಷಗಳು ಒಗ್ಗೂಡಿವೆ. ಭಾರತ ಜೋಡೊ ಯಾತ್ರೆಯ ಪರಿಕಲ್ಪನೆಯನ್ನು ಯಾವ ವಿರೋಧ ಪಕ್ಷವೂ ವಿರೋಧಿಸಿಲ್ಲ' ಎಂದರು. 'ಚುನಾವಣೆಯನ್ನು ಎದುರಿಸಲು ಸಂಪೂರ್ಣ ವಿಭಿನ್ನ ಕಾರ್ಯತಂತ್ರವನ್ನು ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್‌ ತನ್ನದಾಗಿಸಿಕೊಂಡಿತ್ತು. ಹೊಸ ಸಂಕಥನವನ್ನು ಸೃಷ್ಟಿಸಿದ್ದೆವು. ಬಿಜೆಪಿಯು ಕಾಂಗ್ರೆಸ್‌ಗಿಂತ 10 ಪಟ್ಟು ಹೆಚ್ಚಿನ ಹಣವನ್ನು ಚೆಲ್ಲಿತ್ತು. ಆದರೂ ಕಾಂಗ್ರೆಸ್‌ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು' ಎಂದರು.

                                             ರಾಹುಲ್‌ ಕುಟುಂಬದ ವಿರುದ್ಧ ಘೋಷಣೆ

                     1984ರ ಸಿಖ್‌ ದಂಗೆಗೆ ಸಂಬಂಧಿಸಿ ಖಾಲಿಸ್ತಾನ ಪರ ಬೆಂಬಲಿಗರ ಗುಂಪೊಂದು ರಾಹುಲ್‌ ಗಾಂಧಿ ಹಾಗೂ ಅವರ ಕುಟುಂಬದ ವಿರುದ್ಧ ಘೋಷಣೆಗಳನ್ನು ಕೂಗಿದ ಘಟನೆ ಬುಧವಾರ ನಡೆಯಿತು. ರಾಹುಲ್‌ ಗಾಂಧಿ ಅವರು ಭಾಷಣ ಮಾಡುತ್ತಿದ್ದ ವೇಳೆ ಒಮ್ಮೆಲೆ ಗುಂಪೊಂದು ಕಾರ್ಯಕ್ರಮದ ಒಳಗೆ ನುಗ್ಗಿತು. ರಾಹುಲ್‌ ಗಾಂಧಿ ಅವರು ನಗುತ್ತಲೇ ಘೋಷಣೆಗಳನ್ನು ಕೂಗುತ್ತಿದ್ದವರನ್ನು 'ಸ್ವಾಗತ.. ಸ್ವಾಗತ.. ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿಗೆ' ಎಂದರು. ನಂತರ ಸಭೆಯಲ್ಲಿದ್ದ ರಾಹುಲ್‌ ಬೆಂಬಲಿಗರು 'ಜೋಡೊ ಜೋಡೊ ಭಾರತ ಜೋಡೊ' ಎಂದು ಘೋಷಣೆಗಳನ್ನು ಕೂಗಿದರು. ರಾಹುಲ್‌ ಅವರೂ ತಮ್ಮ ಬೆಂಬಲಿಗರೊಂದಿಗೆ ಘೋಷಣೆಗಳನ್ನು ಕೂಗಿದರು. 'ನಮ್ಮ ಪಕ್ಷದ ಆಸಕ್ತಿದಾಯಕ ವಿಷಯವೇನೆಂದರೆ ನಮಗೆ ಎಲ್ಲರ ಬಗ್ಗೆಯೂ ಪ್ರೀತಿ ಇದೆ. ಯಾರು ಏನು ಹೇಳುತ್ತಿದ್ದಾರೆ ಎನ್ನುವುದು ಮುಖ್ಯವಲ್ಲ. ಅವರು ಏನು ಹೇಳಿದರೂ ನಾವು ಕೇಳಿಸಿಕೊಳ್ಳಲು ಸಿದ್ಧರಿದ್ದೇವೆ. ನಾವು ಸಿಟ್ಟಾಗುವುದಿಲ್ಲ' ಎಂದು ರಾಹುಲ್‌ ಗಾಂಧಿ ತಮ್ಮ ಭಾಷಣವನ್ನು ಮುಂದುವರಿಸಿದರು. ಈ ಘಟನೆಯ ವಿಡಿಯೊವನ್ನು ಹಂಚಿಕೊಂಡಿರುವ ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥ ಅಮಿತ್‌ ಮಾಳವೀಯ 'ಸಿಖ್‌ ನರಮೇಧ ಕಾರಣಕ್ಕಾಗಿ ಅಮೆರಿಕದಲ್ಲಿ ರಾಹುಲ್‌ ಗಾಂಧಿ ಅವರ ಭಾಷಣಕ್ಕೆ ಅಡ್ಡಿಪ‍ಡಿಸಲಾಯಿತು. ಯಾವ ಥರ ದ್ವೇಷವನ್ನು ಬಿತ್ತಲಾಗಿತ್ತೆಂದರೆ ಇನ್ನುವರೆಗೂ ಅದು ಶಮನವಾಗಿಲ್ಲ' ಎಂದು ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ನ ಸುಪ್ರಿಯಾ ಶ್ರೀನಾಥ್‌ 'ನೀವು ಯಾಕೆ ಖಾಲಿಸ್ತಾನದ ಪರ ಇದ್ದ ಗುಂಪಿನ ಪರ ಮಾತನಾಡುತ್ತಿದ್ದೀರಿ' ಎಂದು ಪ್ರಶ್ನಿಸಿದ್ದಾರೆ.

                                       ರಾಹುಲ್‌ ಭಾಷಣದ ಪ್ರಮುಖ ಅಂಶಗಳು

* ಭಾರತದಲ್ಲಿ ಮುಸ್ಲಿಮರಿಗೆ ಹೇಗೆ ಅಭದ್ರತೆ ಇದೆಯೋ ಹಾಗೆಯೇ ಸಿಖ್ಖರಿಗೆ ಕ್ರೈಸ್ತರಿಗೆ ದಲಿತರಿಗೆ ಮತ್ತು ಆದಿವಾಸಿಗಳಿಗೆ ಇದೆ. ಇಂದು ಮುಸ್ಲಿಮರಿಗೆ ಆಗುತ್ತಿರುವುದು 1980ರಲ್ಲಿ ಉತ್ತರ ಪ್ರದೇಶದಲ್ಲಿ ದಲಿತರಿಗೆ ಆಗಿತ್ತು. ಪ್ರೀತಿಯಿಂದ ಈ ಎಲ್ಲ ಯುದ್ಧವನ್ನು ಗೆಲ್ಲುತ್ತೇವೆ

* ಜನಸಂಖ್ಯೆಯ ಸ್ಪಷ್ಟ ಚಿತ್ರಣ ಸಿಗಬೇಕಾದರೆ ಜಾತಿ ಗಣತಿ ಅತ್ಯಗತ್ಯ. ಯುಪಿಎ ಅವಧಿಯಲ್ಲಿ ನಡೆಸಿದ್ದ ಗಣತಿಯ ವಿವರಗಳನ್ನು ಬಿಡುಗಡೆ ಮಾಡಬೇಕು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ನಾವು ಈ ಮಾಹಿತಿಯನ್ನು ಬಿಡುಗಡೆ ಮಾಡುತ್ತೇವೆ

* ಮಾಧ್ಯಮಗಳು ಭಾರತವನ್ನು ಯಾವ ರೀತಿಯಲ್ಲಿ ತೋರಿಸುತ್ತಿದೆಯೋ ಆ ರೀತಿ ವಾಸ್ತವದಲ್ಲಿ ಇಲ್ಲ. ಇದನ್ನು ನಾನು ಭಾರತ ಜೋಡೊ ಯಾತ್ರೆಯಲ್ಲಿ ತಿಳಿದುಕೊಂಡೆ

* ಮಹಿಳೆಯರಿಗೆ ರಾಜಕೀಯಲ್ಲಿ ಪ್ರಾಶಸ್ತ್ಯ ಸಿಗಬೇಕು. ಆದ್ದರಿಂದ ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿ ಮಾಡುವ ಬದ್ಧತೆಯನ್ನು ಕಾಂಗ್ರೆಸ್‌ ಹೊಂದಿದೆ

                               'ಸಂಸತ್‌ ಭವನ ಉದ್ಘಾಟನೆ: ವಿಷಯಾಂತರ ಯತ್ನ'

               'ನೂತನ ಸಂಸತ್‌ ಭವನದ ಉದ್ಘಾಟನೆಯು ನೈಜ ವಿಷಯಗಳಿಂದ ಜನರನ್ನು ಬೇರೆಡೆ ಸೆಳೆಯುವ ತಂತ್ರವಾಗಿತ್ತು' ಎಂದು ರಾಹುಲ್ ಗಾಂಧಿ ದೂರಿದರು. 'ನಿರುದ್ಯೋಗ ಬೆಲೆ ಏರಿಕೆ ಸಮಾಜದಲ್ಲಿ ದ್ವೇಷ ಹೆಚ್ಚಾಗಿರುವುದು ಶಿಕ್ಷಣ ವ್ಯವಸ್ಥೆಯ ಅಧೋಗತಿ ಶಿಕ್ಷಣ ಹಾಗೂ ಆರೋಗ್ಯದ ವೆಚ್ಚ ಹೆಚ್ಚಿರುವುದು- ಇವು ನೈಜ ವಿಚಾರಗಳು. ಈ ಕುರಿತು ಬಿಜೆಪಿ ಚರ್ಚೆ ನಡೆಸುವುದಿಲ್ಲ. ಇದಕ್ಕಾಗಿಯೇ 'ಸೆಂಗೋಲ್‌' ವಿಚಾರವನ್ನು ಮುನ್ನೆಲೆಗೆ ತಂದಿತು' ಎಂದರು. 'ಪ್ರಧಾನಿ ಅವರು 'ಸೆಂಗೋಲ್‌' ಮುಂದೆ ಉದ್ದಂಡ ನಮಸ್ಕಾರ ಮಾಡಿದರು. ನಾನು ಹೀಗೆ ಉದ್ದಂಡ ನಮಸ್ಕಾರ ಮಾಡಿಲ್ಲ ಎಂದು ನಿಮಗೆ ಖುಷಿ ಇದೆ ಅಲ್ಲವಾ?' ಎಂದು ಸಭಿಕರನ್ನು ಕೇಳಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries