ತಿರುವನಂತಪುರಂ: ಬಿಜೆಪಿಯ ಹಿರಿಯ ನಾಯಕ ಹಾಗೂ ಗೋವಾ ರಾಜ್ಯಪಾಲ ಪಿ ಎಸ್ ಶ್ರೀಧರನ್ ಪಿಳ್ಳೈ ಅವರು ಬರೆದಿರುವ ‘ಎಂತೆ ಪ್ರಿಯ ಕಥಕಲ್’ ಪುಸ್ತಕವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೋಮವಾರ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಸಿಎಂ, ಕೇಂದ್ರ ಸರ್ಕಾರ ಮತ್ತು ಸಂಘ ಪರಿವಾರದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಪಿಳ್ಳೈ ಅವರ ಪುಸ್ತಕವು ದೇಶದ ಕೆಲವು ಮೂಲೆಗಳಿಂದ ಜನರನ್ನು ಒಂದು ಭಾಷೆ ಮತ್ತು ಒಂದು ಸಾಂಸ್ಕøತಿಕ ಸಿದ್ಧಾಂತಕ್ಕೆ ಸೀಮಿತಗೊಳಿಸುವ ಪ್ರಯತ್ನಗಳನ್ನು ತಡೆಯುತ್ತದೆ ಎಂದು ಸಿಎಂ ಶ್ಲಾಘಿಸಿದರು. “ಪಿಳ್ಳೈ ಅವರ ಪುಸ್ತಕ, ಸಂಕ್ಷಿಪ್ತವಾಗಿ, ಇತಿಹಾಸದಲ್ಲಿ ನಿರಂಕುಶಾಧಿಕಾರಿಗಳಿಗೆ ಸ್ಥಾನವಿಲ್ಲ ಎಂದು ಸೂಚಿಸುತ್ತದೆ. ರಾಜಕೀಯ ಮತ್ತು ಸಾಹಿತ್ಯ ಎರಡು ಪ್ರತ್ಯೇಕ ವ್ಯವಸ್ಥೆಗಳು ಎಂಬ ಸಂಪ್ರದಾಯವಾದಿ ದೃಷ್ಟಿಕೋನವನ್ನು ಅವರು ಜಯಿಸಿದ್ದಾರೆ ಎಂದು ಪಿಣರಾಯಿ ಹೇಳಿದರು.
ಇದು ಪಿಳ್ಳೈ ಬರೆದ 194ನೇ ಪುಸ್ತಕ. ತಿರುವನಂತಪುರಂನ ಮೆಸ್ಕಟ್ ಹೋಟೆಲ್‍ನಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಪಿ ಜೆ ಕುರಿಯನ್ ಸಿಎಂ ಅವರಿಂದ ಪುಸ್ತಕದ ಪ್ರತಿಯನ್ನು ಸ್ವೀಕರಿಸಿದರು.
ಪಿಳ್ಳೈ ಅವರು ಈ ಸಂದರ್ಭ ಮಾತನಾಡಿ, ಪುಸ್ತಕವನ್ನು ಬಿಡುಗಡೆ ಮಾಡಿದ್ದಕ್ಕಾಗಿ ಪಿಣರಾಯಿ ಅವರನ್ನು ಶ್ಲಾಘಿಸಿದರು. ಪರಸ್ಪರ ವಿರುದ್ಧ ರಾಜಕೀಯ ಪಕ್ಷವಾದರೂ ಪಿಣರಾಯಿ ಅವರು ಕಾರ್ಯಕ್ರಮಕ್ಕೆ ಬರಲು ಒಪ್ಪಿದ್ದು ಪರಸ್ಪರರ ನಡುವಿನ ಅಭಿಮಾನದಿಂದ ಎಂದರು.





