ಭುವನೇಶ್ವರ: ಒಡಿಶಾದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಚಾಲನೆ ನೀಡಿದ್ದಾರೆ.
ಈ ರೈಲು ಒಡಿಶಾದ ಪುರಿಯಿಂದ ಪಶ್ಚಿಮ ಬಂಗಾಳದ ಹೌರಾ ನಡುವೆ ಚಲಿಸಲಿದೆ. ಸುಮಾರು 6.5 ತಾಸಿನಲ್ಲಿ 500 ಕಿ.ಮೀ ದೂರವನ್ನು ಕ್ರಮಿಸಲಿದೆ.
ಇದೇ ವೇಳೆ ಒಡಿಶಾದಲ್ಲಿ 8,000 ಕೋಟಿ ಮೌಲ್ಯದ ರೈಲ್ವೆ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ.
ಇದಲ್ಲದೆ ಪುರಿ ಹಾಗೂ ಕಟಕ್ ರೈಲು ನಿಲ್ದಾಣಗಳ ನವೀಕರಣಕ್ಕಾಗಿ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ವಂದೇ ಭಾರತ್ ರೈಲು ಹಾಗೂ ಹಲವು ಯೋಜನೆಗಳಿಗೆ ಹಸಿರು ನಿಶಾನೆ ತೋರಿದ ಪ್ರಧಾನಿ, ಆಧುನಿಕ ಭಾರತವು ತನ್ನದೇ ಆದ ತಂತ್ರಜ್ಞಾನದ ಅವಿಷ್ಕಾರದೊಂದಿಗೆ ದೇಶದ ಮೂಲೆಗಳಿಗೂ ತಲುಪುತ್ತಿದೆ ಎಂದು ಹೇಳಿದ್ದಾರೆ.
ವಂದೇ ಬಾರತ್ ಎಕ್ಸ್ಪ್ರೆಸ್ ಹೌರಾ ಮತ್ತು ಪುರಿ ನಡುವೆ ಧಾರ್ಮಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಹೇಳಿದ್ದಾರೆ.
ಒಡಿಶಾದಲ್ಲಿ ಶೇ 100ರಷ್ಟು ವಿದ್ಯುದ್ದೀಕರಣದ ಜಾಲವನ್ನು ಪ್ರಧಾನಿ ಮೋದಿ ದೇಶಕ್ಕೆ ಸಮರ್ಪಿಸಿದರು. ಇದು ರೈಲು ನಿರ್ವಹಣಾ ವೆಚ್ಚ ಕಡಿಮೆ ಮಾಡುವುದಲ್ಲದೆ ಕಚ್ಚಾ ತೈಲದ ಮೇಲಿನ ಅವಲಂಬನೆ ಕಡಿಮೆ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶದಲ್ಲಿ ಒಟ್ಟು 15 ವಂದೇ ಭಾರತ್ ರೈಲುಗಳು ಕಾರ್ಯಾಚರಿಸುತ್ತಿವೆ.