ತ್ರಿಶೂರ್: ಮಹಿಳಾ ಸಬಲೀಕರಣದ ಪ್ರತಿಪಾದಕರಾಗಿರುವ ಉನ್ನತ ಶಿಕ್ಷಣ ಸಚಿವೆ ಆರ್ ಬಿಂದು ಅವರು ಇರಿಂಞಲಕುಡ ಶ್ರೀ ಕೂಡಲಮಾಣಿಕ್ಯ ದೇವಸ್ಥಾನದ 10 ದಿನಗಳ ಉತ್ಸವದ ಅಂಗವಾಗಿ ಕಥಕ್ಕಳಿ ಪ್ರದರ್ಶಿಸಲು ಭಾನುವಾರ ತಮ್ಮ ಅಧಿಕೃತ ಜವಾಬ್ದಾರಿಯನ್ನು ಬದಿಗಿಟ್ಟು ಬಣ್ಣಬರೆದು ಮರೆದಿರುವರು.
ಸಾಂಪ್ರದಾಯಿಕ ಕೆಂಪು ಮತ್ತು ಬಿಳಿ ಉಡುಪುಗಳನ್ನು ಧರಿಸಿ ವಿಶೇಷ ಬಣ್ಣಗಾರಿಕೆಗಳೊಂದಿಗೆ ಚುಟ್ಟಿ ಬಳಿದು ಬಿಂದು, ದಮಯಂತಿ ಪಾತ್ರದ ಮೂಲಕ ವೀಕ್ಷಕರ ಹೃದಯವನ್ನು ಗೆದ್ದರು, ಅವರ ಕಾಲೇಜು ದಿನಗಳಲ್ಲಿ ತನ್ನ ಬಹು ಮೆಚ್ಚುಗೆಯನ್ನು ಗಳಿಸಿದ ಪಾತ್ರ ಕೂಡಾ ದಮಯಂತಿ.
ಅವರ ಗುರು ಕಲಾನಿಲಯಂ ರಾಘವನ್ ಆಶಾನ್ ಅವರ ಒತ್ತಾಯದ ಮೇರೆಗೆ ದಶಕಗಳ ವಿರಾಮದ ನಂತರ ಅವರು ಈ ಪಾತ್ರವನ್ನು ವಹಿಸಿಕೊಂಡರು. ಆಶಾನ್ ಅವರ ಪುತ್ರಿ ಜಯಶ್ರೀ ಗೋಪಿ ಮತ್ತು ಸಿ ಎಂ ಬೀನಾ ಅವರು ಬಿಂದು ಅವರೊಂದಿಗೆ ತಂಡದಲ್ಲಿ ವಿವಿಧ ಪಾತ್ರ ನಿರ್ವಹಿಸಿದರು.
ಇರಿಂಞಲಕುಡ ಮೂಲದ ಬಿಂದು ಅವರು 13ನೇ ವಯಸ್ಸಿನಿಂದಲೇ ಕಥಕ್ಕಳಿ ತರಗತಿಗಳನ್ನು ತೆಗೆದುಕೊಳ್ಳಲು ಆರಂಭಿಸಿದರು. ಭಾನುವಾರ ದೇವಾಲಯದ ಹೊರಗೆ ಸಾಂಸ್ಕøತಿಕ ಕಾರ್ಯಕ್ರಮಗಳಿಗಾಗಿ ಸ್ಥಾಪಿಸಲಾಗಿದ್ದ ಸಂಗಮ ವೇದಿಕೆಯಲ್ಲಿ ಒಂದೂವರೆ ಗಂಟೆಗಳ ಪ್ರದರ್ಶನವನ್ನು ನೀಡುತ್ತಿದ್ದರು. ಕಥಕ್ಕಳಿ ವಾಚನಗಳಲ್ಲದೆ, ಹತ್ತು ದಿನಗಳ ಉತ್ಸವಗಳಲ್ಲಿ ಸಂಗೀತ ಕಚೇರಿಗಳು, ನೃತ್ಯ ಪ್ರದರ್ಶನ ಇತ್ಯಾದಿಗಳು ನಡೆದಿವೆ.



