HEALTH TIPS

ಎಥೆನಾಲ್‌ ಉತ್ಪಾದನೆಗೆ 29.5 ಲಕ್ಷ ಟನ್‌ ಅಕ್ಕಿ

                 ವದೆಹಲಿ :2019ರಿಂದ 2023ರವರೆಗೆ ಒಟ್ಟು 29.05 ಲಕ್ಷ ಟನ್‌ ಉತ್ತಮ ಗುಣಮಟ್ಟದ ಅಕ್ಕಿಯನ್ನು ಎಥೆನಾಲ್‌ ಉತ್ಪಾದನೆಗೆ ಕೇಂದ್ರ ಸರ್ಕಾರ ನೀಡಿದೆ. ಎಥೆನಾಲ್‌ ಮಿಶ್ರಣ ಯೋಜನೆಯು ನಮ್ಮ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದು ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೇಳಿಕೊಂಡಿದೆ.

              ಮಾನವ ಬಳಕೆಗೆ ಉಪಯುಕ್ತವಲ್ಲದ ಅಕ್ಕಿ, ಜೋಳ ಸೇರಿದಂತೆ ಆಹಾರ ಧಾನ್ಯಗಳನ್ನು ಬಳಸಿ ಎಥೆನಾಲ್‌ ಉತ್ಪಾದನೆಯನ್ನು ಹೆಚ್ಚಿಸಲು ರಾಷ್ಟ್ರೀಯ ಜೈವಿಕ ಇಂಧನ ಯೋಜನೆ 2018ಕ್ಕೆ ಸರ್ಕಾರವು ತಿದ್ದುಪಡಿ ತಂದಿತ್ತು. ಆದರೆ, ಭಾರತ ಆಹಾರ ನಿಗಮದ (ಎಫ್‌ಸಿಐ) ಬಳಿ ಇರುವ ಉತ್ತಮ ಗುಣಮಟ್ಟದ ಹೆಚ್ಚುವರಿ ಅಕ್ಕಿಯನ್ನೂ ಎಥೆನಾಲ್‌ ಉತ್ಪಾದನೆಗೆ ಬಳಸಬಹುದು ಎಂದು 2020ರಲ್ಲಿ ಮತ್ತೊಮ್ಮೆ ತಿದ್ದುಪಡಿ ತರಲಾಗಿದೆ. ಹೀಗಾಗಿ 2022-23ನೇ ಆರ್ಥಿಕ ವರ್ಷದಲ್ಲಿ ಸುಮಾರು 16 ಲಕ್ಷ ಟನ್‌ ಅಕ್ಕಿಯನ್ನು ಎಥೆನಾಲ್‌ ಉತ್ಪಾದನೆಗೆ ಬಳಸಿಕೊಳ್ಳಲಾಗಿದೆ.

                    2020ರಲ್ಲಿ ತಂದಿದ್ದ ತಿದ್ದುಪಡಿಯು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಅಭಿವೃದ್ಧಿ ಹೊಂದುತ್ತಿರುವ, ಇನ್ನೂ ಬಡತನ ಇರುವ ಭಾರತದಂತ ದೇಶದಲ್ಲಿ ತಿನ್ನಲು ಅಕ್ಕಿ ಇಲ್ಲದ ಹೊತ್ತಲ್ಲಿ, ಎಥೆನಾಲ್‌ ಉತ್ಪಾದನೆಗೆ ಗುಣಮಟ್ಟದ ಅಕ್ಕಿ ಕೊಡುವುದರ ಬಗ್ಗೆ ಕಟು ಟೀಕೆ ವ್ಯಕ್ತವಾಗಿತ್ತು. ಎಥೆನಾಲ್‌ಗೆ ಅಕ್ಕಿ ಬಳಸಿದರೆ, ತಿನ್ನಲು ಅಕ್ಕಿಯ ಕೊರತೆ ಉಂಟಾಗುತ್ತದೆ ಎಂಬ ಕಳವಳವೂ ವ್ಯಕ್ತವಾಗಿತ್ತು.

                                               ಏನಿದು ಎಥೆನಾಲ್‌ ಮಿಶ್ರಣ ಯೋಜನೆ?

                   2003ರಲ್ಲೇ ಈ ಯೋಜನೆಗೆ ಚಾಲನೆ ದೊರೆತಿತ್ತು. ಆದರೆ, 2018ರಲ್ಲಿ ಈ ಯೋಜನೆಗೆ ವೇಗ ನೀಡಲಾಯಿತು ಎಂದು ಕೇಂದ್ರ ಹೇಳಿದೆ. ಪೆಟ್ರೋಲ್‌ಗೆ ಎಥೆನಾಲ್‌ ಮಿಶ್ರಣ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶ. ಇದರಿಂದಾಗಿ, ವಾಯು ಮಾಲಿನ್ಯ ಕಡಿಮೆಯಾಗುತ್ತದೆ ಮತ್ತು ಕಚ್ಛಾ ತೈಲ ಆಮದು ಕುಗ್ಗುತ್ತದೆ ಎಂದು ಸರ್ಕಾರ ಹೇಳಿದೆ.

                2021-22ರ ಹೊತ್ತಿಗೆ ಒಂದು ಲೀಟರ್‌ ಪೆಟ್ರೊಲ್‌ಗೆ ಶೇ 10ರಷ್ಟು (ಇ10) ಎಥೆನಾಲ್‌ ಅನ್ನು ಮಿಶ್ರಣ ಮಾಡಬೇಕು ಎಂಬ ಗುರಿ ಹಾಕಿಕೊಳ್ಳಲಾಗಿತ್ತು. ಈ ಗುರಿಯನ್ನು ಸರ್ಕಾರ ತಲುಪಿದೆ. 2025-26ರ ಹೊತ್ತಿಗೆ ಈ ಪ್ರಮಾಣವು ಶೇ 20ಕ್ಕೆ ತಲುಪುವುದು ಸರ್ಕಾರದ ಮುಂದಿನ ಗುರಿ. ಪ್ರಾಯೋಗಿಕ ಯೋಜನೆಗಾಗಿ ಕೇಂದ್ರಾಡಳಿತ ಪ್ರದೇಶ ಸೇರಿದಂತೆ 11 ರಾಜ್ಯಗಳಲ್ಲಿ ಒಂದು ಲೀಟರ್‌ ಪೆಟ್ರೋಲ್‌ಗೆ ಶೇ 20ರಷ್ಟು (ಇ20) ಎಥೆನಾಲ್‌ ಅನ್ನು ಮಿಶ್ರಣ ಮಾಡಿ ಪೆಟ್ರೋಲ್‌ ಬಂಕ್‌ಗಳ ಮೂಲಕ ಜನರಿಗೆ ನೀಡಲಾಗುತ್ತಿದೆ. 11 ರಾಜ್ಯಗಳಲ್ಲಿ ಕರ್ನಾಟಕವೂ ಸೇರಿದೆ.

                                                 ಪಡಿತರಕ್ಕೆ ಹೆಚ್ಚು ದರ: ಎಥೆನಾಲ್‌ಗೆ ಕಡಿಮೆ ದರ

                ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ಒಎಂಎಸ್‌ಎಸ್‌) ಅಡಿಯಲ್ಲಿ ರಾಜ್ಯಗಳು ಹಾಗೂ ವ್ಯಕ್ತಿಗಳು ಧಾನ್ಯಗಳನ್ನು ಖರೀದಿಸಬಹುದಾಗಿದೆ. ಇಲ್ಲಿ ಖರೀದಿ ಮಾಡಲು ಒಂದು ಕ್ವಿಂಟಾಲ್‌ ಅಕ್ಕಿಗೆ ₹3,400 ದರ ನಿಗದಿ ಮಾಡಲಾಗಿದೆ. ಆದರೆ, ಎಥೆನಾಲ್‌ ಉತ್ಪಾದನೆಗೆ ಅಕ್ಕಿ ಖರೀದಿಸಲು ಒಂದು ಕ್ವಿಂಟಾಲ್‌ಗೆ ₹2,400 ನಿಗದಿಪಡಿಸಲಾಗಿದೆ. ತೀರಾ ಇತ್ತೀಚೆಗೆ ಆಹಾರ ಸಚಿವಾಲಯವು ಈ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ.

                         ಕಡಿಮೆ ಬಡ್ಡಿ ದರ: ದೇಶದಾದ್ಯಂತ ಎಥೆನಾಲ್‌ ಉತ್ಪಾದನೆ ಘಟಕಗಳನ್ನು ತೆರೆಯುವುದನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಹಲವು ವಿನಾಯಿತಿಗಳನ್ನು ನೀಡಿದೆ. ಎಥೆನಾಲ್‌ ಘಟಕ ಪ್ರಾರಂಭಿಸುವುದಾದರೆ ಸರ್ಕಾರವು ಕಡಿಮೆ ಬಡ್ಡಿ ಬರದಲ್ಲಿ ಸಾಲವನ್ನು ನೀಡುತ್ತಿದೆ. ಎಥೆನಾಲ್‌ ಘಟಕಗಳನ್ನು ಖಾಸಗಿಯವರೇ ತೆರೆಯಲು ಸರ್ಕಾರ ಉತ್ತೇಜಿಸುತ್ತಿದೆ. ಇದುವರೆಗೂ ಸರ್ಕಾರಿ ಸ್ವಾಮ್ಯದ ಒಂದೂ ಎಥೆನಾಲ್‌ ಉತ್ಪಾದನಾ ಘಟಕ ದೇಶದಲ್ಲಿ ಇಲ್ಲ. ಇದನ್ನು ಲೋಕಸಭೆಗೆ ನೀಡಿದ ಉತ್ತರದಲ್ಲಿ ಸರ್ಕಾರವೇ ಹೇಳಿಕೊಂಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries