ಕಾಸರಗೋಡು: ಬೇಸಿಗೆ ರಜೆಯ ನಂತರ ಕೇರಳ ರಾಜ್ಯಾದ್ಯಂತ ಗುರುವಾರ ಶಾಲೆ ಪುನರರಂಭಗೊಂಡಿದ್ದು, ವಿಶಿಷ್ಟ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳನ್ನು ಶಾಲೆಗಳಿಗೆ ಬರಮಾಡಿಕೊಳ್ಳಲಾಯಿತು. ಕಾಸರಗೋಡು ಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವ ಬೇಕಲ ಸನಿಹದ ತಚ್ಚಂಗಾಡಿನಲಕ್ಲಿ ಜರುಗಿತು.
ತಚ್ಚಂಗಾಡ್ ಸರ್ಕಾರಿ ಪ್ರೌಢಶಾಲಾ ವಠಾರದಲ್ಲಿ ಸಸಿ ನೆಡುವ ಮೂಲಕ ಜಿಲ್ಲಾ ಶಾಲಾ ಪ್ರವೇಶೋತ್ಸವವನ್ನು ಕೇರಳ ಬಂದರು, ಪ್ರಾಚ್ಯವಸ್ತು ಮತ್ತು ವಸ್ತುಸಂಗ್ರಹಾಲಯ ಖಾತೆ ಸಚಿವ ಅಹ್ಮದ್ ದೇವರಕೋವಿಲ್ ಅವರು ಉದ್ಘಾಟಿಸಿದರು.
ಅಕ್ಷರ ಲೋಕಕ್ಕೆ ಹೊಸಬರಾದ ಮಕ್ಕಳನ್ನು ಚಪ್ಪಾಳೆಯೊಂದಿಗೆ ಸಚಿವ ಅಹಮ್ಮದ್ ದೇವರಕೋವಿಲ್ ಬರಮಾಡಿಕೊಂಡರು. ಹೊಸದಾಗಿ ಸಏರ್ಪಡೆಗೊಂಡ ಮಕ್ಕಳಿಗೆ ಅಕ್ಷರ ಟೋಪಿ ತಲೆಗೆ ತೊಡಿಸಿ, ಅಕ್ಷರ ಕಾರ್ಡ್ ನೀಡಿ ಶಾಲೆಗೆ ಬರಮಾಡಿಕೊಲ್ಳಲಾಯಿತು. ಶಾಲೆಗೆ ಹೊಸದಾಗಿ ಸೇರ್ಪಡೆಗೊಂಡ 57 ಮಂದಿ ವಿದ್ಯಾರ್ಥಿಗಳಲ್ಲಿ ಪ್ರತಿ ವಿದ್ಯಾರ್ಥಿ ಹೆಸರಲ್ಲಿ ಶಾಲಾ ವಠಾರದಲ್ಲಿ ಸಸಿಗಳನ್ನು ನೆಡಲಾಯಿತು. ಪ್ರಕೃತಿ ಸಂರಕ್ಷಣೆ ಹಾಗೂ ಪ್ರವೇಶೋತ್ಸವದ ಅಂಗವಾಗಿ ಜಿಲ್ಲಾ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿರುವ 'ಕಲಿಯಲು ಪ್ರಾರಂಭಿಸೋಣ-ಸಸಿಗಳನ್ನು ನೆಡೋಣ'ಎಂಬ ಯೋಜನೆಯನ್ವಯ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಈ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೂನ್ 1 ರಿಂದ 5 ರವರೆಗೆ ವಿವಿಧ ಶಾಲೆಗಳಲ್ಲಿ ಹೊಸದಾಗಿ ಸೇರ್ಪಡೆಗೊಳ್ಳುವ ವಿದ್ಯಾರ್ಥಿಗಳು ಸಸಿಗಳನ್ನು ನೆಡಲಿದ್ದಾರೆ.
ಉದ್ಘಾಟನಾ ಸಮಾರಂಭಕ್ಕೂ ಮುನ್ನ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವೇದಿಕೆಯಲ್ಲಿ ಪ್ರವೇಶೋತ್ಸವ ಗೀತೆಯ ನೃತ್ಯರೂಪಕವನ್ನು ಪ್ರದರ್ಶಿಸಿದರು. ನಂತರ ರಾಜ್ಯಮಟ್ಟದ ಶಾಲಾ ಪ್ರವೇಶೋತ್ಸವದ ದೃಶ್ಯಾವಳಿಗಳನ್ನು ನೇರಪ್ರಸಾರ ಮಾಡಲಾಯಿತು. ಶಾಸಕ ಸಿ.ಎಚ್.ಕುಂಜಂಬು ಉದ್ಘಾಟನಾ ಭಾಷಣ ಮಾಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಚಿತ್ರನಟ ಉನ್ಣಿರಾಜ್ ಚೆರುವತ್ತೂರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.






