ನವದೆಹಲಿ: ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಗೆ ಕುಜ ದೋಷ ಇದೆಯೇ ಎಂಬುದನ್ನು ಖಚಿತಪಡಿಸುವಂತೆ ಲಖನೌ ವಿಶ್ವವಿದ್ಯಾಲಯದ ಜ್ಯೋತಿಷ ಶಾಸ್ತ್ರ ವಿಭಾಗಕ್ಕೆ ಸೂಚಿಸಿದ್ದ ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠದ ಆದೇಶಕ್ಕೆ ಸುಪ್ರೀಂ ಕೋರ್ಟ್ ಶನಿವಾರ ತಡೆ ನೀಡಿದೆ.
ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತ ಗೋವಿಂದ್ ರಾಜು ಎಂಬಾತ, ಆಕೆಗೆ ಕುಜ ದೋಷ ಇರುವುದರಿಂದ ವಿವಾಹವಾಗುವುದಿಲ್ಲ ಎಂದು ವಂಚಿಸಿದ್ದ. ಆತನ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ಲಖನೌ ಪೀಠವು ಈ ದೋಷ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸುವಂತೆ ವಿಶ್ವವಿದ್ಯಾಲಯಕ್ಕೆ ಸೂಚಿಸಿತ್ತು.
'ಯುವತಿಗೆ ಕುಜ ದೋಷ (ಮಾಂಗ್ಲಿಕ- ಮಂಗಳ ದೋಷ) ಇದೆ. ಹಾಗಾಗಿ, ಶಾಸ್ತ್ರೋಕ್ತವಾಗಿ ಇಬ್ಬರ ನಡುವೆ ಮದುವೆ ಸಾಧ್ಯವಿಲ್ಲ' ಎಂದು ಆರೋಪಿ ಪರ ವಕೀಲರು ವಾದಿಸಿದ್ದರು.
'ಎರಡೂ ಕಡೆಯವರು ಹತ್ತು ದಿನಗಳೊಳಗೆ ಆಕೆಯ ಜನ್ಮ ಕುಂಡಲಿಯನ್ನು ಜ್ಯೋತಿಷ ಶಾಸ್ತ್ರ ವಿಭಾಗದ ಮುಖ್ಯಸ್ಥರಿಗೆ ಸಲ್ಲಿಸಬೇಕು. ಮೂರು ವಾರದೊಳಗೆ ಮುಖ್ಯಸ್ಥರು ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಬೇಕು' ಎಂದು ಆದೇಶಿಸಿದ ಪೀಠವು ಜೂನ್ 26ಕ್ಕೆ ವಿಚಾರಣೆ ಮುಂದೂಡಿತ್ತು.
ಸ್ವಯಂ ಪ್ರೇರಿತವಾಗಿ ಈ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಪಂಕಜ್ ಮಿತ್ತಲ್ ಅವರಿದ್ದ ರಜಾ ಕಾಲದ ವಿಭಾಗೀಯ ಪೀಠವು, ಸಂತ್ರಸ್ತೆಯ ಜಾತಕದ ಪರೀಕ್ಷೆ ನಡೆಸಬಾರದು ಎಂದು ವಿಶ್ವವಿದ್ಯಾಲಯಕ್ಕೆ ಸೂಚಿಸಿದೆ.
'ಸಂತ್ರಸ್ತೆಯ ಜಾತಕವನ್ನು ವಿ.ವಿಗೆ ಸಲ್ಲಿಸುವಂತೆ ಹೈಕೋರ್ಟ್‌ನ ಪೀಠವು ಏಕೆ ಸೂಚಿಸಿದೆ ಎಂಬುದು ಅರ್ಥವಾಗುತ್ತಿಲ್ಲ' ಎಂದು ಅಭಿಪ್ರಾಯಪಟ್ಟಿತು.
ಕೇಂದ್ರ ಸರ್ಕಾರದ ಪರ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, 'ಲಖನೌ ಪೀಠದ ಆದೇಶವು ಗೊಂದಲಕಾರಿಯಾಗಿದ್ದು, ತಡೆ ನೀಡಬಹುದು' ಎಂದರು.
ಸಂತ್ರಸ್ತೆ ಪರ ಹಾಜರಿದ್ದ ವಕೀಲ ಅಜಯ್ ಕುಮಾರ್ ಸಿಂಗ್, 'ವಿ.ವಿಗಳಲ್ಲಿ ಇತ್ತೀಚೆಗೆ ಜ್ಯೋತಿಷ ಶಾಸ್ತ್ರವನ್ನು ವಿಜ್ಞಾನವಾಗಿ ಕಲಿಸಲಾಗುತ್ತಿದೆ' ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, 'ಜ್ಯೋತಿಷ ಶಾಸ್ತ್ರವು ವಿಜ್ಞಾನ ಎಂಬುದರಲ್ಲಿ ಸಂಶಯವಿಲ್ಲ. ಅದನ್ನು ನಾವು ಗೌರವಿಸುತ್ತೇವೆ. ಆದರೆ, ಈ ಪ್ರಕರಣಕ್ಕೆ ಅದು ಅನ್ವಯಿಸುವುದಿಲ್ಲ' ಎಂದು ಹೇಳಿ ಎರಡೂ ಕಡೆಯವರಿಗೆ ನೋಟಿಸ್ ನೀಡಿ ಜುಲೈನಲ್ಲಿ ಆದ್ಯತೆ ಮೇರೆಗೆ ಈ ಅರ್ಜಿಯ ವಿಚಾರಣೆ ನಡೆಸುವುದಾಗಿ ತಿಳಿಸಿತು.
ಹಿಂದೂ ಜ್ಯೋತಿಷ ಶಾಸ್ತ್ರದ ಪ್ರಕಾರ ಮಂಗಳನ ಪ್ರಭಾವದಿಂದ ಜನಿಸಿದವರಿಗೆ ಮಂಗಳ ಅಥವಾ ಕುಜ ದೋಷ ಕಾಡುತ್ತದೆ. ಜಾತಕದಲ್ಲಿ ಈ ದೋಷ ಇರುವವರು, ದೋಷ ಇಲ್ಲದವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರೆ ಅಮಂಗಳಕರ. ಜೊತೆಗೆ, ಅವರ ಜೀವಕ್ಕೆ ಆಪತ್ತು ಸಂಭವಿಸಲಿದೆ ಎಂಬ ನಂಬಿಕೆ.





