HEALTH TIPS

ಪ್ರೀತಿ ಕೊಂದ ಕೊಲೆಗಾತಿಗೆ ಕೋರ್ಟ್​ನಿಂದ ಮತ್ತೊಮ್ಮೆ ಶಾಕ್​: ಈಕೆಯ ಬಿಡುಗಡೆ ಅಪಾಯಕಾರಿಯಂತೆ!

          ತಿರುವನಂತಪುರ: ಕೇರಳದಲ್ಲಿ ಭಾರೀ ಕೋಲಾಹಲ ಎಬ್ಬಿಸಿದ್ದ ಶರೋನ್ ರಾಜ್​ ಕೊಲೆ ಪ್ರಕರಣದಲ್ಲಿ ಆರೋಪಿ ಗ್ರೀಷ್ಮಾಳಿಗೆ ನ್ಯಾಯಾಲಯ ಮತ್ತೊಮ್ಮೆ ಜಾಮೀನು ನಿರಾಕರಿಸಿದೆ.

             ನೆಯ್ಯಟ್ಟಿಂಕರ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ವಿದ್ಯಾಧರನ್ ಅವರು ಗ್ರೀಷ್ಮಾಗೆ ಜಾಮೀನು ನೀಡದಿರಲು ನಿರ್ಧರಿಸಿದರು.

             ಗ್ರೀಷ್ಮಾಳ ನ್ಯಾಯಾಂಗ ಬಂಧನದಲ್ಲಿ ಇಡುವಂತೆ ಶರೋನ್ ಕುಟುಂಬ ಮಾಡಿದ್ದ ಮನವಿಯನ್ನು ಈ ಮೊದಲು ನ್ಯಾಯಾಲಯ ಅಂಗೀಕರಿಸಿತು. ಆದರೆ, ನಿಯಮಾವಳಿಗಳ ಪ್ರಕಾರ ಗ್ರೀಷ್ಮಾ ಜಾಮೀನಿಗೆ ಅರ್ಜಿ ಸಲ್ಲಿಸಲು ಅರ್ಹಳಾಗಿದ್ದಳು. ಈ ಅವಕಾಶ ಬಳಸಿಕೊಂಡು ಗ್ರೀಷ್ಮಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಳು. ಆದರೆ, ನ್ಯಾಯಾಲಯ ಜಾಮೀನು ನಿರಾಕರಿಸಿದೆ.

ಈ ಪ್ರಕರಣ ಜಾರಿಗೆ ಬಂದಾಗಿನಿಂದ ಗ್ರೀಷ್ಮಾ ಅಟ್ಟಕುಲಂಗರ ಮಹಿಳಾ ಜೈಲಿನಲ್ಲಿ ಬಂಧಿಯಾಗಿದ್ದಾಳೆ. ಆಕೆಯ ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಆಗುವ ಪರಿಣಾಮಗಳ ಬಗ್ಗೆ ವಿಶೇಷ ಪಬ್ಲಿಕ್​ ಪ್ರಾಸಿಕ್ಯೂಟರ್​ ಪಿ.ಎಸ್​. ವಿನೀತ್ ಕುಮಾರ್​ ನ್ಯಾಯಾಲಯದಲ್ಲಿ ಮಂಡಿಸಿದ್ದರು.

               ಆರೋಪಿಗೆ ಜಾಮೀನು ನೀಡಿದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಅದು ವಿಚಾರಣೆ ಮೇಲೆ ಪರಿಣಾಮ ಬೀರುತ್ತದೆ. ಸಾಂದರ್ಭಿಕ ಸಾಕ್ಷ್ಯಗಳು ಕಳೆದುಹೋಗುವ ಸಾಧ್ಯತೆ ಇದೆ. ಆತ್ಮಹತ್ಯೆ ಮಾಡಿಕೊಳ್ಳುವ ಪ್ರವೃತ್ತಿ ಹೊಂದಿರುವ ಗ್ರೀಷ್ಮಾ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಅಪಾಯಕಾರಿ ಎಂದರು. ಏಕೆಂದರೆ, ಈ ಹಿಂದೆ ಪೊಲೀಸ್​ ಠಾಣೆಯಲ್ಲೇ ಗ್ರೀಷ್ಮಾ ಆತ್ಮಹತ್ಯೆಗೆ ಯತ್ನಿಸಿದ್ದಳು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ ವಿನೀತ್ ಕುಮಾರ್ ಅವರ ವಾದವನ್ನು ಒಪ್ಪಿದ ನ್ಯಾಯಾಲಯ ಜಾಮೀನು ನಿರಾಕರಿಸಿದೆ.

ಏನಿದು ಪ್ರಕರಣ?

         ಕೇರಳದ ತಿರುವನಂತಪುರದಲ್ಲಿ ಅ.25ರಂದು ರೇಡಿಯೋಲಜಿ ವಿದ್ಯಾರ್ಥಿ ಶರೋನ್ ರಾಜ್ ಮೃತಪಟ್ಟಿದ್ದ. ಆತನ ಪ್ರೇಯಸಿ ಗ್ರೀಷ್ಮಾ ಮೇಲೆ ಅನುಮಾನ ಮೂಡಿ ಪೊಲೀಸರು ಆಕೆಯನ್ನು ವಶಕ್ಕೆ ಪಡೆದುಕೊಂಡಿದ್ದರು. ಸಾಕಷ್ಟು ವಿಚಾರಣೆ ಬಳಿಕ ಅ.31 ರಂದು ಗ್ರೀಷ್ಮಾ, ವಿಷವುಣಿಸಿ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಳು. ಅ. 14ರಂದು ಶರೋನ್​ ರಾಜ್​ನನ್ನು ತನ್ನ ಮನೆಗೆ ಕರೆಸಿಕೊಂಡ ಗ್ರೀಷ್ಮಾ, ಆಯುರ್ವೇದದ ಔಷಧಿಯಲ್ಲಿ ಕ್ರಿಮಿನಾಶಕವನ್ನು ಬೆರೆಸಿ ಕುಡಿಸಿದ್ದಳು. ಬಳಿಕ ವಿಪರೀತ ವಾಂತಿ ಮಾಡಿಕೊಂಡಿದ್ದ ರಾಜ್​, ತನ್ನ ಸ್ನೇಹಿತನೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವು-ಬದುಕಿನ ನಡುವೆ ಹೋರಾಡಿ ಅ.25 ರಂದು ಆತ ಮೃತಪಟ್ಟನು. ಸಂಚು ರೂಪಿಸಿ ಆತನನ್ನು ಗ್ರೀಷ್ಮಾ ಕೊಲೆ ಮಾಡಿದ್ದಾಳೆ.

ಪ್ರಯತ್ನಗಳು ವಿಫಲವಾದ್ದರಿಂದ ಕೊಲೆ

                ಗ್ರೀಷ್ಮಾ 2022ರ ಮಾರ್ಚ್ 4ರಂದು ಯೋಧನೊಬ್ಬನ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ಬಳಿಕ ಶರೂನ್​ ಜತೆ ತನ್ನ ಸಂಬಂಧವನ್ನು ಕಡಿದುಕೊಂಡಿದ್ದಳು. ಆದರೆ, ಮೇ ತಿಂಗಳಲ್ಲಿ ಶರೂನ್​ ಮತ್ತೆ ಗ್ರೀಷ್ಮಾಗೆ ಹತ್ತಿರವಾಗಿದ್ದ.​ ಬಳಿಕ ನವೆಂಬರ್‌ನಲ್ಲಿ ಶರೋನ್ ಅವರ ಮನೆಯಲ್ಲಿ ಮತ್ತು ನಂತರ ವೆಟ್ಟುಕಾಡ್ ಚರ್ಚ್‌ನಲ್ಲಿ ವಿವಾಹವಾದರು. ಇದಾದ ಬಳಿಕ ಥ್ರಿಪ್ಪರಪುವಿನಲ್ಲಿ ರೂಮ್​ ಬುಕ್​ ಮಾಡಿ ಇಬ್ಬರು ಲೈಂಗಿಕ ಕ್ರಿಯೆ ನಡೆಸಿದರು. ಯೋಧನ ಜತೆ ತನ್ನ ಮದುವೆ ದಿನ ಹತ್ತಿರ ಬರುತ್ತಿದ್ದಂತೆ ಶರೂನ್​ನಿಂದ ದೂರಾಗಲು ಗ್ರೀಷ್ಮಾ ಬಯಸಿದಳು. ಲವ್​ ಬ್ರೇಕಪ್​ ಮಾಡಿಕೊಳ್ಳಲು ಸಾಕಷ್ಟು ಮನವೊಲಿಸಿದಳು. ಆದರೆ, ಅದಕ್ಕೆ ಆತ ಒಪ್ಪಲಿಲ್ಲ. ತನ್ನ ಜಾತಕದ ಪ್ರಕಾರ ಮೊದಲ ಪತಿ ಸಾಯುತ್ತಾನೆ ಎಂದು ಹೇಳುವ ಮೂಲಕ ರಾಜ್​ನನ್ನು ಬೆದರಿಸುವ ಪ್ರಯತ್ನ ಮಾಡಿದ್ದಳು. ಆದರೂ ಆತ ಆಕೆಯನ್ನು ಬಿಡಲು ತಯಾರಿರಲಿಲ್ಲ. ತನ್ನೆಲ್ಲ ಪ್ರಯತ್ನಗಳು ವಿಫಲವಾದ್ದರಿಂದ ಅಂತಿಮವಾಗಿ ಕೊಲೆಯನ್ನು ಆಯ್ಕೆ ಮಾಡಿಕೊಂಡಳು ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

                             ಸೆಕ್ಸ್​ಗಾಗಿ ಒತ್ತಾಯ

          2022ರ ಅಕ್ಟೋಬರ್​ 13ರಂದು ಇಬ್ಬರು 1 ಗಂಟೆ 7 ನಿಮಿಷಗಳ ಕಾಲ ಸೆಕ್ಸ್​ ಬಗ್ಗೆ ಮಾತನಾಡಿದ್ದಾರೆ. ಸೆಕ್ಸ್​ಗಾಗಿ ಒತ್ತಾಯ ಮಾಡುತ್ತಿದ್ದರಿಂದ ಅಕ್ಟೋಬರ್​ 14ರಂದು ನಾನು ಗ್ರೀಷ್ಮಾ ಮನೆಗೆ ಹೋದೆ ಎಂದು ಶರೂನ್​ ತನ್ನ ಸಂಬಂಧಿಕರ ಮುಂದೆ ಹೇಳಿಕೊಂಡಿದ್ದಾನೆ. ಆಯುರ್ವೇದಿಕ್​ ಔಷಧದಲ್ಲಿ ವಿಷ ಬೆರೆಸಿ ನೀಡಿ ಕೊಲೆ ಮಾಡಿದ್ದಾಳೆ. ಬಳಿಕ ಆತನೊಂದಿಗೆ ನಡೆಸಿದ್ದ ಚಾಟ್​ ಅನ್ನು ಗ್ರೀಷ್ಮಾ ಡಿಲೀಟ್​ ಮಾಡಿದ್ದಾಳೆ. ಅಳಿಸಿದ ಸಂದೇಶಗಳನ್ನು ಹಿಂಪಡೆಯಬಹುದೇ ಎಂದು ನೋಡಲು ಅವಳು ಹಲವಾರು ಬಾರಿ ಗೂಗಲ್ ಮತ್ತು ಯೂಟ್ಯೂಬ್‌ನಲ್ಲಿಯೂ ಹುಡುಕಾಡಿದ್ದಾಳೆ.

                    ಸಾಯುವ ಕೊನೆಯ ಕ್ಷಣದಲ್ಲಿ ಐಸಿಯು ಬೆಡ್​ನಲ್ಲಿದ್ದ ಶರೋನ್ ರಾಜ್, ನನಗೆ ವಿಷವನ್ನು ನೀಡಿ ವಂಚನೆ ಮಾಡಿದ್ದಾಳೆ ಎಂದು ಸಂಬಂಧಿಕರಿಗೆ ಹೇಳಿದ್ದಾನೆ. ಈ ಎಲ್ಲ ಅಂಶಗಳನ್ನು ಪೊಲೀಸರು ಚಾರ್ಜ್​ಶೀಟ್​ನಲ್ಲಿ ದಾಖಲಿಸಿದ್ದು, ನೆಯ್ಯಟ್ಟಿಂಕರ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries