ನವದೆಹಲಿ: ಪ್ರಾಕೃತಿಕ ವಿಕೋಪದ ಕುರಿತ ಎಚ್ಚರಿಕೆ ಸಂದೇಶವನ್ನು ಟಿವಿ ಪರದೆ ಮತ್ತು ರೇಡಿಯೊಗಳಲ್ಲಿ ಬಿತ್ತರಿಸುವ ಯೋಜನೆಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್‌ಡಿಎಂಎ) ಅಧಿಕಾರಿಗಳು ತಿಳಿಸಿದ್ದಾರೆ.
0
samarasasudhi
ಜೂನ್ 04, 2023
ನವದೆಹಲಿ: ಪ್ರಾಕೃತಿಕ ವಿಕೋಪದ ಕುರಿತ ಎಚ್ಚರಿಕೆ ಸಂದೇಶವನ್ನು ಟಿವಿ ಪರದೆ ಮತ್ತು ರೇಡಿಯೊಗಳಲ್ಲಿ ಬಿತ್ತರಿಸುವ ಯೋಜನೆಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್‌ಡಿಎಂಎ) ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿಕೂಲ ಹವಾಮಾನ ಪರಿಸ್ಥಿತಿ ಕುರಿತು ಜನರು ಮುಂಜಾಗ್ರತೆ ವಹಿಸುವಂತೆ ಮತ್ತು ಪ್ರಾಕೃತಿಕ ವಿಕೋಪ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾರಿ ಮಳೆ, ಗುಡುಗು ಸಮೇತ ಬಿರುಗಾಳಿ ಮಳೆ, ಬಿಸಿ ಗಾಳಿ ಮತ್ತಿತರ ಹವಾಮಾನ ಬದಲಾವಣೆ ಕುರಿತು ಜನರಿಗೆ ಎಚ್ಚರಿಕೆ ನೀಡುವ ಸಲುವಾಗಿ ಮೊಬೈಲ್ ಸಂದೇಶಗಳನ್ನು ಕಳಿಸುವ ಯೋಜನೆಗೆ ಎನ್‌ಡಿಎಂಎ ಇತ್ತೀಚೆಗೆ ಚಾಲನೆ ನೀಡಿತ್ತು. ಇದು ಮೊದಲನೇ ಹಂತವಾಗಿದ್ದು, ಎರಡನೇ ಹಂತದಲ್ಲಿ ಪ್ರಾಕೃತಿಕ ವಿಕೋಪ ಕುರಿತ ಎಚ್ಚರಿಕೆ ಸಂದೇಶಗಳನ್ನು ಟಿವಿ ಮತ್ತು ರೇಡಿಯೊಗಳಲ್ಲಿ ಬಿತ್ತರಿಸಲಾಗುವುದು. ಸಂದೇಶಗಳನ್ನು ಪ್ರಾದೇಶಿಕ ಭಾಷೆ ಸೇರಿ ಎರಡು ಭಾಷೆಗಳಲ್ಲಿ ಬಿತ್ತರಿಸಲಾಗುವುದು. ಈ ಯೋಜನೆಯು ವರ್ಷಾಂತ್ಯದಲ್ಲಿ ಜಾರಿಗೆ ಬರಲಿದೆ ಎಂದು ಅವರು ಹೇಳಿದ್ದಾರೆ.
ಭಾರತೀಯ ಹವಾಮಾನ ಇಲಾಖೆ, ಕೇಂದ್ರೀಯ ಜಲ ಆಯೋಗ, ಸಾಗರ ಮಾಹಿತಿ ಸೇವಾ ರಾಷ್ಟ್ರೀಯ ಕೇಂದ್ರ ಮತ್ತು ಭಾರತೀಯ ಅರಣ್ಯ ಸರ್ವೇಕ್ಷಣಾ ಸಂಸ್ಥೆಗಳನ್ನು ಒಳಗೊಂಡಿರುವ 'ಸಮಗ್ರ ಮುನ್ನೆಚ್ಚರಿಕಾ ವ್ಯವಸ್ಥೆ'ಯನ್ನು ರೂಪಿಸಲಾಗುವುದು. ಇದು ಜಗತ್ತಿನಲ್ಲೇ ಅತಿ ದೊಡ್ಡ ಹವಾಮಾನ ಮುನ್ನೆಚ್ಚರಿಕಾ ಸೇವೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಕೃತಿಕ ವಿಕೋಪದ ಕಾರಣ 2022ರಲ್ಲಿ ದೇಶದ 2,770 ಜನರು ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.