HEALTH TIPS

ವಿವಿಧ ಕಾನೂನುಗಳಿರುವುದು ದೇಶದ ಏಕತೆಗೆ ಕಳಂಕ: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಮಾಹಿತಿ

                 ವದೆಹಲಿ: ಬೇರೆ ಬೇರೆ ಧರ್ಮಗಳು, ಪಂಗಡಗಳಿಗೆ ಸೇರಿದ ಜನರು ಆಸ್ತಿ ಹಾಗೂ ಮದುವೆಗೆ ಸಂಬಂಧಿಸಿ ವಿವಿಧ ರೀತಿಯ ಕಾನೂನುಗಳನ್ನು ಪಾಲನೆ ಮಾಡುವುದು ದೇಶದ ಏಕತೆಗೆ ಅವಮಾನ ಮಾಡಿದಂತೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಹೇಳಿದೆ.

              ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ವಿಚಾರವಾಗಿ ಕಳೆದ ವರ್ಷ ಅಕ್ಟೋಬರ್‌ 13ರಂದು ಕೇಂದ್ರ ಸರ್ಕಾರ ಈ ಪ್ರಮಾಣಪತ್ರ ಸಲ್ಲಿಸಿದೆ. ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವಂತೆ ಕೋರಿ ಅಶ್ವಿನ್ ಕುಮಾರ್ ಉಪಾಧ್ಯಾಯ ಅವರು ಅರ್ಜಿ ಸಲ್ಲಿಸಿದ್ದಾರೆ.

              'ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯದ ಆಶಯವನ್ನು ಸಂವಿಧಾನದ ಪ್ರಸ್ತಾವನೆಯಲ್ಲಿ ಹೇಳಲಾಗಿದೆ. ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದ ಸಂವಿಧಾನದ 44ನೇ ವಿಧಿಯು ಈ ಆಶಯಕ್ಕೆ ಬಲ ತುಂಬುತ್ತದೆ' ಎಂದು ಕಾನೂನು ಸಚಿವಾಲಯವು ಈ ಪ್ರಮಾಣಪತ್ರದಲ್ಲಿ ವಿವರಿಸಿದೆ.

'ಏಕರೂಪ ನಾಗರಿಕ ಸಂಹಿತೆ' ಎಂಬುದು ಮದುವೆ, ವಿಚ್ಛೇದನ, ನಿರ್ವಹಣೆ, ಮಕ್ಕಳ ರಕ್ಷಣೆ ಮತ್ತು ಪಾಲನೆ, ದತ್ತು ಪಡೆಯುವುದು, ಉತ್ತರಾಧಿಕಾರಕ್ಕೆ ಸಂಬಂಧಿಸಿದ ವೈಯಕ್ತಿಕ ಕಾನೂನುಗಳ ವ್ಯಾಪ್ತಿಯನ್ನು ಸೂಚಿಸುತ್ತದೆ' ಎಂದೂ ಸಚಿವಾಲಯ ಹೇಳಿದೆ.

                  'ಕೆಲ ವಿಚಾರಗಳಿಗೆ ಸಂಬಂಧಿಸಿ ಬೇರೆ ಬೇರೆ ವೈಯಕ್ತಿಕ ಕಾನೂನುಗಳಿವೆ. ಆದರೆ, ಇಂಥ ಕಾನೂನುಗಳನ್ನು ಪಾಲಿಸುತ್ತಿರುವ ವಿವಿಧ ಸಮುದಾಯಗಳನ್ನು ಒಂದು ಸಾಮಾನ್ಯ ವೇದಿಕೆಗೆ ತರುವ ಮೂಲಕ ದೇಶದ ಏಕತೆ ಸಾಧಿಸುವುದಕ್ಕೆ ಸಂವಿಧಾನದ 44ನೇ ವಿಧಿಯ ಅವಕಾಶ ನೀಡುತ್ತದೆ' ಎಂದು ವಿವರಿಸಿದೆ.

                'ಆಸ್ತಿ ಹೊಂದುವ ಹಕ್ಕು, ಅದರ ನಿರ್ವಹಣೆ ಹಾಗೂ ಉತ್ತರಾಧಿಕಾರಕ್ಕೆ ಸಂಬಂಧಿಸಿ ಒಂದು ಸಾಮಾನ್ಯ ಕಾನೂನು ಇರಬೇಕು ಎಂಬ ಪರಿಕಲ್ಪನೆಯೇ 44ನೇ ವಿಧಿಗೆ ಆಧಾರ. ಈ ವಿಧಿಯು ಧರ್ಮವನ್ನು ಸಾಮಾಜಿಕ ಸಂಬಂಧಗಳು ಹಾಗೂ ವೈಯಕ್ತಿಕ ಕಾನೂನುಗಳಿಂದ ಪ್ರತ್ಯೇಕಿಸುತ್ತದೆ. ಈ ಕಾರಣಕ್ಕಾಗಿ ಆಸ್ತಿ ಮತ್ತು ವಿವಾಹಕ್ಕೆ ಸಂಬಂಧಿಸಿ ಬೇರೆ ಬೇರೆ ಕಾನೂನುಗಳನ್ನು ಅನುಸರಿಸುವುದು ದೇಶದ ಒಗ್ಗಟ್ಟಿಗೆ ಅವಮಾನ ಮಾಡಿದಂತಾಗುತ್ತದೆ' ಎಂದೂ ಪ್ರತಿಪಾದಿಸಿದೆ.

                'ಏಕರೂಪ ನಾಗರಿಕ ಸಂಹಿತೆ ಬಹಳ ಸೂಕ್ಷ್ಮ ಹಾಗೂ ಮಹತ್ವದ ವಿಷಯ. ವಿವಿಧ ಸಮುದಾಯಗಳಿಗೆ ಸಂಬಂಧಿಸಿ ಜಾರಿಯಲ್ಲಿರುವ ಬೇರೆ ಬೇರೆ ವೈಯಕ್ತಿಕ ಕಾನೂನುಗಳಲ್ಲಿನ ಅವಕಾಶಗಳ ಕುರಿತು ಆಳ ಅಧ್ಯಯನದ ಅಗತ್ಯ ಇದೆ. ಯುಸಿಸಿಗೆ ಸಂಬಂಧಿಸಿದ ವಿಷಯಗಳ ಕುರಿತು ಪರಿಶೀಲನೆ ನಡೆಸಿ, ಶಿಫಾರಸು ಮಾಡುವಂತೆ ಕೇಂದ್ರ ಸರ್ಕಾರವು ಕಾನೂನು ಆಯೋಗಕ್ಕೆ ಮನವಿ ಮಾಡಿತ್ತು' ಎಂದು ಕಾನೂನು ಸಚಿವಾಲಯ ತಿಳಿಸಿದೆ.

                  ಕೇಂದ್ರ ಸರ್ಕಾರದ ಮನವಿ ಮೇರೆಗೆ 21ನೇ ಕಾನೂನು ಆಯೋಗವು ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಂಬಂಧಿಸಿ ಹಲವು ಭಾಗಿದಾರರಿಂದ ಅಹವಾಲುಗಳನ್ನು ಸ್ವೀಕರಿಸಿ, ಪರಿಶೀಲನೆ ನಡೆಸಿದೆ. ಈ ಕುರಿತು ಸಾರ್ವಜನಿಕವಾಗಿ ವ್ಯಾಪಕ ಚರ್ಚೆ ನಡೆಯಬೇಕು ಎಂಬ ಉದ್ದೇಶದಿಂದ ಆಯೋಗವು 2018ರ ಆಗಸ್ಟ್‌ 31ರಂದು ತನ್ನ ವೆಬ್‌ಸೈಟ್‌ನಲ್ಲಿ ವರದಿಯನ್ನು ಪ್ರಕಟಿಸಿದೆ ಎಂದಿರುವ ಕೇಂದ್ರ ಸರ್ಕಾರ, ಈ ವಿಚಾರವಾಗಿ ಅಶ್ವಿನ್ ಕುಮಾರ್‌ ಉಪಾಧ್ಯಾಯ ಸಲ್ಲಿಸಿರುವ ಅರ್ಜಿ ಸಮರ್ಥನೀಯವಲ್ಲ ಎಂದು ಪ್ರತಿಪಾದಿಸಿದೆ.

                  21ನೇ ಕಾನೂನು ಆಯೋಗದ ಅವಧಿಯು 2018ರ ಆಗಸ್ಟ್‌ 31ಕ್ಕೆ ಕೊನೆಗೊಂಡಿದ್ದು, 22ನೇ ಕಾನೂನು ಆಯೋಗವನ್ನು ರಚಿಸಲಾಗಿದೆ. ಆಯೋಗವು ತನ್ನ ವರದಿಯನ್ನು ಸಲ್ಲಿಸಿದ ನಂತರ, ಸರ್ಕಾರವು ಪರಿಶೀಲನೆ, ಸಮಾಲೋಚನೆ ನಡೆಸಲಿದೆ ಎಂದೂ ಹೇಳಿದೆ.

ಕಾನೂನು ಆಯೋಗವು ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿ ವ್ಯಾಪಕ ಸಮಾಲೋಚನೆಗೆ ಬುಧವಾರ ಚಾಲನೆ ನೀಡಿದೆ. ಈ ವಿಚಾರವಾಗಿ ಸಾರ್ವಜನಿಕರು ಹಾಗೂ ಮಾನ್ಯತೆ ಪಡೆದಿರುವ ಧಾರ್ಮಿಕ ಸಂಘಟನೆಗಳಿಂದ ಅಭಿಪ್ರಾಯಗಳನ್ನು ಆಹ್ವಾನಿಸಿದೆ. 30 ದಿನಗಳ ಒಳಗಾಗಿ ಅಭಿಪ್ರಾಯಗಳನ್ನು ಸಲ್ಲಿಸುವಂತೆಯೂ ಕೋರಿದೆ.

                                                 ಕೇಂದ್ರದ ಪ್ರಮಾಣಪತ್ರದಲ್ಲಿರುವ ಅಂಶಗಳು

* ಕಾನೂನು ರಚಿಸುವುದು ಸಂಸತ್‌ನ ಸಾರ್ವಭೌಮ ಅಧಿಕಾರ. ಈ ವಿಚಾರವಾಗಿ ಹೊರಗಿನ ಯಾವುದೇ ಪ್ರಾಧಿಕಾರ/ಸಂಸ್ಥೆಯು ಸಂಸತ್‌ಗೆ ನಿರ್ದೇಶನ ನೀಡುವಂತಿಲ್ಲ

* ಒಂದು ನಿರ್ದಿಷ್ಟ ಕಾನೂನು ರಚಿಸುವಂತೆ ಯಾವುದೇ ಹೊರಗಿನ ಶಕ್ತಿ ಸಂಸತ್‌ಗೆ ನಿರ್ದೇಶನ ನೀಡುವಂತಿಲ್ಲ ಎಂದು ಈ ಹಿಂದಿನ ಹಲವಾರು ತೀರ್ಪುಗಳಲ್ಲಿ ಸ್ಪಷ್ಟಪಡಿಸಲಾಗಿದೆ

* ಕಾನೂನು ರಚಿಸುವುದು ನೀತಿ ನಿರೂಪಣೆಗೆ ಸಂಬಂಧಿಸಿದ್ದು. ಚುನಾಯಿತ ಪ್ರತಿನಿಧಿಗಳು ಈ ಕುರಿತು ನಿರ್ಧಾರ ಕೈಗೊಳ್ಳಬೇಕು. ಈ ವಿಚಾರವಾಗಿ ನ್ಯಾಯಾಲಯವು ಯಾವುದೇ ನಿರ್ದೇಶನ ಕೊಡುವಂತಿಲ್ಲ

* ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳ ಆಧಾರದ ಮೇಲೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಬಾರದು ಎಂದು ಹಲವಾರು ತೀರ್ಪುಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries