ತಿರುವನಂತಪುರ: ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ವಿರುದ್ಧ ಮತ್ತೆ ರಾಜ್ಯ ಸರ್ಕಾರ ಕದನಕ್ಕಿಳಿದಿದೆ. ರಾಜ್ಯಪಾಲರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಒಂದಷ್ಟು ಬಿಡುವಿನ ಬಳಿಕ ಮತ್ತೆ ಸರ್ಕಾರ ರಾಜ್ಯಪಾಲರ ವಿರುದ್ಧ ವಾಗ್ದಾಳಿ ನಡೆಸುತ್ತಿದೆ.
ರಾಜ್ಯ ವಿಧಾನಸಭೆ ಅಂಗೀಕರಿಸಿದ ಮಸೂದೆಗಳನ್ನು ತಡೆಹಿಡಿದ ಆರೋಪದ ಮೇಲೆ ಆರಿಫ್ ಮುಹಮ್ಮದ್ ಖಾನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ಈಗ ಸಿದ್ಧತೆ ನಡೆಸಿದೆ. ಈ ನಿಟ್ಟಿನಲ್ಲಿ ಸರ್ಕಾರ ಅಡ್ವೊಕೇಟ್ ಜನರಲ್ ಅವರ ಸಲಹೆ ಕೇಳಿದೆ. ಮಸೂದೆಗಳಲ್ಲಿನ ಅನಿಶ್ಚಿತತೆಯನ್ನು ತಪ್ಪಿಸಲು ಸರ್ಕಾರ ಬಯಸಿದೆ.
ಕಾನೂನು ಇಲಾಖೆ ಕಾರ್ಯದರ್ಶಿ ಎಜಿ ಅವರಿಂದ ಸಲಹೆ ಕೇಳಿದ್ದಾರೆ. ಮಸೂದೆಗಳಿಗೆ ಸಹಿ ಹಾಕಲು ಆಗುತ್ತಿರುವ ವಿಳಂಬದ ವಿರುದ್ಧ ಸುಪ್ರೀಂ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸುವುದು ಸರ್ಕಾರದ ಮುಂದಿನ ಕ್ರಮ ಎಂದು ಸೂಚಿಸಲಾಗಿದೆ. ಏತನ್ಮಧ್ಯೆ, ಬಿಲ್‍ಗಳನ್ನು ತಡೆ ಹಿಡಿದಿಲ್ಲ. ಈ ಬಗ್ಗೆ ಕೂಲಂಕಷವಾಗಿ ಅಧ್ಯಯನ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ರಾಜ್ಯಪಾಲರು ಈ ಹಿಂದೆಯೇ ಪ್ರತಿಕ್ರಿಯಿಸಿದ್ದರು.





