ಕೊಚ್ಚಿ: ಭಯೋತ್ಪಾದಕ ಸಂಘಟನೆ ಐಸಿಸ್ ನ ಚಟುವಟಿಕೆಗಳಿಗೆ ನಿಧಿ ಸಂಗ್ರಹಿಸುತ್ತಿದ್ದ ಪ್ರಕರಣದಲ್ಲಿ ಬಂಧಿತರಾಗಿರುವವರು ಕೇರಳದಲ್ಲೂ ದಾಳಿ ನಡೆಸಲು ಯೋಜನೆ ರೂಪಿಸಿದ್ದರು ಎಂದು ಎನ್ ಐಎ ಹೇಳಿದೆ.
ಈ ಐಎಸ್ ಗುರುತಿಸಿರುವ ಆರಾಧನಾಲಯಗಳು ಮತ್ತು ಕೆಲವು ಸಮುದಾಯದ ಮುಖಂಡರ ಮೇಲೆ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿತ್ತು ಎಂದು ಎನ್ಐಎ ಪತ್ತೆ ಮಾಡಿದೆ.
ಇದಕ್ಕಾಗಿ ಗುಪ್ತ ಚಳುವಳಿಗಳನ್ನು ಯೋಜಿಸಿದ್ದು ಕೂಡ ಪತ್ತೆಯಾಗಿದ್ದು, 'ಪೆಟ್ ಲವರ್ಸ್' ಎಂಬ ಟೆಲಿಗ್ರಾಂ ಗ್ರೂಪ್ ರಚಿಸಿ ಆ ಮೂಲಕ ದೇಶ ವಿರೋಧಿ ಚಟುವಟಿಕೆಗಳಿಗೆ ಕರೆ ನೀಡಿದ್ದರು. ಬ್ಯಾಂಕ್ ದರೋಡೆ ಮತ್ತು ಚಿನ್ನಾಭರಣ ಕಳ್ಳತನದ ಮೂಲಕ ಭಯೋತ್ಪಾದಕ ಚಟುವಟಿಕೆಗಳಿಗೆ ನಿಧಿ ಸಂಗ್ರಹಿಸಲು ಯೋಜಿಸಿದ್ದರು. ತ್ರಿಶೂರ್ ಮಟಿಲಕಾಟ್ಕುಡಿಯಲ್ಲಿ ಪ್ರಮುಖ ಆರೋಪಿ ಆಶಿಫ್ ಸೇರಿದಂತೆ ನಾಲ್ವರನ್ನು ಎನ್ಐಎ ವಿಚಾರಣೆ ನಡೆಸುತ್ತಿದೆ. ಅವರ ವಿರುದ್ಧ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು.
ಕೊಚ್ಚಿಯ ಎನ್‍ಐಎ ನ್ಯಾಯಾಲಯಕ್ಕೆ ಸಲ್ಲಿಸಿರುವ ಕಸ್ಟಡಿ ಅರ್ಜಿಯಲ್ಲಿ ಭೀತಿಕರ ವಿವರಗಳಿವೆÉ. ತ್ರಿಶೂರ್‍ನ ಕಟ್ಟೂರು ಮತಿಲಕಂ ಮೂಲದ ಆಶಿಫ್‍ನನ್ನು ತಮಿಳುನಾಡಿನ ಸತ್ಯಮಂಗಲಂ ಅರಣ್ಯದಿಂದ ಕೊಚ್ಚಿ ಎನ್‍ಐಎ ಘಟಕ ಬಂಧಿಸಿತ್ತು. ಆರೋಪಿಯು ಇತ್ತೀಚೆಗೆ ಕೇರಳದಲ್ಲಿ ದರೋಡೆ ಮತ್ತು ಚಿನ್ನ ಕಳ್ಳಸಾಗಣೆಯಲ್ಲಿ ತೊಡಗಿದ್ದ ಎಂದು ಎನ್ಐಎ ಮಾಹಿತಿ ನೀಡಿದೆ. ಕೊಚ್ಚಿಯ ವಿಶೇಷ ಎನ್‍ಐಎ ನ್ಯಾಯಾಲಯ ಆಶಿಫ್‍ನನ್ನು ಒಂದು ವಾರದ ಕಸ್ಟಡಿಗೆ ನೀಡಿದೆ.
ಪೆಟ್ ಲವರ್ಸ್ ಎಂಬ ಗುಂಪಿನ ಮೂಲಕ ದರೋಡೆ ತಂಡಕ್ಕೆ ಜನರನ್ನು ಸೇರಿಸಿಕೊಳ್ಳುತ್ತಿದ್ದರು. ಪಾಲಕ್ಕಾಡ್‍ನಿಂದ 30 ಲಕ್ಷ ರೂ.ಗಳನ್ನು ಕದ್ದ ನಂತರ ಆಶಿಫ್ ಮತ್ತು ಆತನ ತಂಡವು ಸತ್ಯಮಂಗಲಂ ಅರಣ್ಯ ಪ್ರದೇಶದ ಮನೆಯೊಂದಕ್ಕೆ ನುಗ್ಗಿದ್ದಾರೆ. ಈ ಅರಣ್ಯದಿಂದ ಎನ್‍ಐಎ ಆರೋಪಿಯನ್ನು ಹಿಡಿದಿದೆ. ಪಾಲಕ್ಕಾಡ್ ಎಟಿಎಂನಿಂದ ಹಣ ಕದಿಯುವ ಘಟನೆಯಲ್ಲೂ ಈತ ಭಾಗಿಯಾಗಿದ್ದಾನೆ. ತಂಡದಲ್ಲಿರುವ ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಸಾರ್ವಜನಿಕ ವಲಯ, ಸಹಕಾರಿ ಬ್ಯಾಂಕ್‍ಗಳು ಹಾಗೂ ಚಿನ್ನಾಭರಣಗಳನ್ನು ದರೋಡೆ ಮಾಡಲು ಈ ತಂಡ ಯೋಜನೆ ರೂಪಿಸಿತ್ತು.
ದರೋಡೆ ಮೂಲಕ ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಆಶಿಫ್ ಮೂರು ತಿಂಗಳ ಕಾಲ ಎನ್ ಐಎ ಕಣ್ಗಾವಲಿನಲ್ಲಿದ್ದ. ಸತ್ಯಮಂಗಲಂ ಅರಣ್ಯ ಪ್ರದೇಶದ ಭವಾನಿಸಾಗರ ಪ್ರದೇಶದಲ್ಲಿ ಬಾಡಿಗೆಗೆ ನೆಲೆಸಿದ್ದ. ಆರೋಪಿಗಳು ಎಟಿಎಂ ದರೋಡೆ, ಆನ್‍ಲೈನ್ ಬ್ಯಾಂಕ್ ವಂಚನೆಯಂತಹ ಹಲವು ದರೋಡೆಗಳಿಗೆ ಯೋಜನೆ ರೂಪಿಸಿದ್ದರು. ಪಾತೂರಿನಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತನನ್ನು ಕೊಂದ ಪ್ರಕರಣದ ಆರೋಪಿಯೂ ಈತನೆ. ಕೇರಳದಲ್ಲಿ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರ ಉಪಸ್ಥಿತಿ ಪತ್ತೆಯಾದ ನಂತರ, ಎನ್‍ಐಎ ಅನೇಕ ಜನರ ಮೇಲೆ ನಿಗಾ ಇರಿಸಿತ್ತು.


