ನವದೆಹಲಿ: ಕಳೆದ ಐದು ವರ್ಷಗಳಲ್ಲಿ ಐಐಟಿ, ಐಐಎಂ ಮತ್ತು ಎನ್‌ಐಟಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅರ್ಧಕ್ಕೆ ಶಿಕ್ಷಣ ತೊರೆದಿದ್ದಾರೆ. ಇದೇ ಅವಧಿಯಲ್ಲಿ ಈ ಸಮುದಾಯಗಳ 10 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಬುಧವಾರ ರಾಜ್ಯಸಭೆಯಲ್ಲಿ ತಿಳಿಸಿದೆ.
ಬಿಜೆಪಿಯ ಸುಶೀಲ್ ಕುಮಾರ್ ಮೋದಿ ಅವರು ಕೇಳಿದ್ದ ಪ್ರಶ್ನೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಶಿಕ್ಷಣ ಖಾತೆ ರಾಜ್ಯ ಸಚಿವ ಸುಭಾಷ್ ಸರ್ಕಾರ್ ಈ ಮಾಹಿತಿ ನೀಡಿದ್ದು, ಸ್ನಾತಕೋತ್ತರ ಪದವಿ ಮತ್ತು ಪಿಎಚ್.ಡಿಯಲ್ಲಿ ಅರ್ಧಕ್ಕೆ ಶಿಕ್ಷಣ ತೊರೆದವರ ಸಂಖ್ಯೆಯೇ ಹೆಚ್ಚು. ಅರ್ಧಕ್ಕೆ ಶಿಕ್ಷಣ ತೊರೆದವರಲ್ಲಿ ಒಬಿಸಿ ವಿದ್ಯಾರ್ಥಿಗಳ ಸಂಖ್ಯೆ ಅತಿ ಹೆಚ್ಚು ಇದೆ ಎಂದು ಹೇಳಿದ್ದಾರೆ.
ಸ್ನಾತಕಪೂರ್ವ ಕೋರ್ಸ್‌ಗಳಲ್ಲಿ ತಪ್ಪಾದ ಆಯ್ಕೆಗಳು, ಕಳಪೆ ಓದು, ವೈದ್ಯಕೀಯ ಹಾಗೂ ವೈಯಕ್ತಿಕ ಕಾರಣಗಳಿಂದ ಶಿಕ್ಷಣ ತೊರೆದಿರಬಹುದು ಎಂದು ಸಚಿವಾಲಯವು ತನ್ನ ಉತ್ತರದಲ್ಲಿ ತಿಳಿಸಿದೆ.