HEALTH TIPS

1947ರಲ್ಲಿ ನೇತಾಜಿ ಇದ್ದಿದ್ದರೆ ದೇಶ ವಿಭಜನೆಗೆ ಒಪ್ಪುತ್ತಿರಲಿಲ್ಲ: ಚಂದ್ರ ಬೋಸ್

               ವದೆಹಲಿ: 'ಭಾರತೀಯ ರಾಷ್ಟ್ರೀಯ ಸೇನೆ (ಐಎನ್‌ಎ) ಕಟ್ಟುವ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನೇತಾಜಿ ಸುಭಾಸಚಂದ್ರ ಬೋಸ್ ಅವರು 1947ರಲ್ಲಿ ಇದ್ದಿದ್ದರೆ ದೇಶ ವಿಭಜನೆಯ ನಿರ್ಧಾರವನ್ನು ಖಂಡಿತವಾಗಿಯೂ ಒಪ್ಪಿಕೊಳ್ಳುತ್ತಿರಲಿಲ್ಲ' ಎಂದು ನೇತಾಜಿ ಅವರ ಮೊಮ್ಮಗ ಚಂದ್ರ ಬೋಸ್ ಅಭಿಪ್ರಾಯಪಟ್ಟರು.

                'ನೇತಾಜಿ ಹಾಗೂ ಆಜಾದ್ ಹಿಂದ್ ಫೌಜ್‌ ಅಖಂಡ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರೇ ಹೊರತು, ವಿಭಜಿತ ಭಾರತಕ್ಕಾಗಿ ಅಲ್ಲ. ಐಎನ್‌ಎನಲ್ಲಿ ಬಹಳಷ್ಟು ಜನ ಮುಸಲ್ಮಾನರು ಇದ್ದರೂ ಅವರೆಲ್ಲರೂ ಅವಿಭಜಿತ ಭಾರತಕ್ಕಾಗಿ ಹೋರಾಡಿದರೇ ಹೊರತು ಪಾಕಿಸ್ತಾನಕ್ಕಾಗಿ ಅಲ್ಲ' ಎಂದು ನೆನಪಿಸಿಕೊಂಡರು.

                'ದೇಶವನ್ನು ಮುನ್ನಡೆಸಲು ಅಥವಾ ಸರ್ಕಾರ ರಚಿಸಲು ಎಲ್ಲಾ ಸಮುದಾಯದವರನ್ನು ಒಗ್ಗೂಡಿಸುವುದು ಅತ್ಯಗತ್ಯ ಎಂಬ ಸ್ಪಷ್ಟವಾದ ನಿರ್ಧಾರ ನೇತಾಜಿ ಅವರದ್ದಾಗಿತ್ತು. ವಿವಿಧತೆಯ ಮೂಲಕ ಏಕತೆ ಸಾಧಿಸುವುದು ಅವರ ಯೋಜನೆಯಾಗಿತ್ತು. ವಾಸ್ತವದಲ್ಲಿ 'ಐಎನ್‌ಎ'ನಲ್ಲಿ ಅವರು ಈ ತತ್ವವನ್ನು ಆಚರಣೆಗೆ ತಂದಿದ್ದರು. ತಾವು ಹಿಂದು ಧರ್ಮದ ಅನುಯಾಯಿಯಾಗಿದ್ದರೂ ತಾವು ಅಳವಡಿಸಿಕೊಂಡ ಬಹುತ್ವದ ಪರಿಕಲ್ಪನೆ ಸ್ವಾತಂತ್ರ್ಯ ಸಂಗ್ರಾಮಕ್ಕಾಗಲೀ ಅಥವಾ ರಾಜಕೀಯಕ್ಕಾಗಲೀ ಆಗಿರಲಿಲ್ಲ' ಎಂದು ಬೋಸ್ ಅಭಿಪ್ರಾಯಪಟ್ಟರು.

                      'ರಾಜಕಾರಣಿಗಳು ಧರ್ಮವನ್ನು ಬಳಸಿ ಜನರ ನಡುವೆ ಕಂದಕ ಸೃಷ್ಟಿಸಿ ಚುನಾವಣೆಗಳನ್ನು ಗೆಲ್ಲುತ್ತಿದ್ದಾರೆ. ಈ ಪ್ರಕ್ರಿಯೆಯಲ್ಲಿ ಪಕ್ಷಗಳು ಗೆಲ್ಲಬಹುದು. ಆದರೆ ಸೋಲುವುದು ರಾಷ್ಟ್ರ' ಎಂದು ಬೇಸರ ವ್ಯಕ್ತಪಡಿಸಿದರು.

                 'ಕೆಂಪುಕೋಟೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡುವ ಪ್ರಧಾನಿ, ಸಮುದಾಯದ ಹಿತ, ದೇಶದ ಐಕ್ಯತೆ ಇರದೆ ಅಭಿವೃದ್ಧಿ ಸಾಧ್ಯವಿಲ್ಲ ಎಂಬ ಅಂಶವನ್ನು ಒತ್ತಿ ಹೇಳಬೇಕು' ಎಂದು ಆಶಿಸಿದರು.

                  ಮಣಿಪುರದ ಜನಾಂಗೀಯ ಗಲಭೆ ಕುರಿತು ಮಾತನಾಡಿದ ಚಂದ್ರ ಬೋಸ್, 'ಮಣಿಪುರದಲ್ಲಿ ಏನು ನಡೆಯುತ್ತಿದೆಯೋ ಇದನ್ನು ನೇತಾಜಿ ಕಂಡಿದ್ದರೆ ದಿಗ್ಭ್ರಮೆ ವ್ಯಕ್ತಪಡಿಸುತ್ತಿದ್ದರು. ಇಂಥ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸರ್ಕಾರ ಇನ್ನಷ್ಟು ಪರಿಣಾಮಕಾರಿಯಾಗಿ ನಡೆದುಕೊಳ್ಳಬೇಕು' ಎಂದರು.

                 ಕುಕಿ ಹಾಗೂ ಮೈತೇಯಿ ಬುಡಕಟ್ಟು ಸಮುದಾಯದ ಪೂರ್ವಜರು ದೇಶದ ಸ್ವಾತಂತ್ರ್ಯಕ್ಕಾಗಿ ಒಂದಾಗಿ ಹೋರಾಡಿದವರು. ಐಎನ್‌ಎ ಮೂಲಕ ಅವರೆಲ್ಲರೂ ಒಗ್ಗಟ್ಟಿನಿಂದ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಮೊಯಿರಾಂಗ್ ಅನ್ನು ವಶಪಡಿಸಿಕೊಳ್ಳಲು ಕರ್ನಲ್ ಶೌಖತ್ ಅಲಿ ಮಲಿಕ್ ರಸ್ತೆ ನಿರ್ಮಿಸಲು ಮುಂದಾದಾಗ, ಸ್ಥಳೀಯರು ಅವರಿಗೆ ನೆರವಾಗಿ ಸ್ವಾತಂತ್ರ್ಯ ಸಂಗ್ರಾಮದ ಭಾಗವಾದರು. ಆದರೆ ಇಂದು ಜನಾಂಗದ ಹೆಸರಿನಲ್ಲಿ ಎರಡು ಸುಮುದಾಯಗಳು ಪ್ರತ್ಯೇಕಗೊಂಡು                 ಬಡಿದಾಡಿಕೊಳ್ಳುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದು ಇಂದಿನ ರಾಜಕಾರಣದ ಪ್ರತ್ಯೇಕತಾ ಸಿದ್ಧಾಂತದ ಕರಾಳ ರೂಪ. ಇದನ್ನು ಎಂದಿಗೂ ಒಪ್ಪಿಕೊಳ್ಳಲಾಗದು' ಎಂದು ಬೋಸ್ ಆಕ್ರೋಶ ವ್ಯಕ್ತಪಡಿಸಿದರು.

                    ಸರ್ಕಾರ ನೇತಾಜಿ ಅವರನ್ನು ಗೌರವಿಸುವ ವಿಷಯ ಕುರಿತು ಮಾತನಾಡಿದ ಚಂದ್ರ ಬೋಸ್, 'ಜಾತ್ಯತೀತ ಸಿದ್ಧಾಂತ ಅನುಸರಿಸಿದಾಗ ನೇತಾಜಿಗೆ ನಿಜವಾದ ಗೌರವ ಸಲ್ಲಿಸಲು ಸಾಧ್ಯ. ಇತಿಹಾಸದಲ್ಲಿ ಹಿಂದು, ಮುಸ್ಲಿಂ, ಸಿಖ್, ಕ್ರೈಸ್ತ ಹಾಗೂ ಇತರ ಧರ್ಮದವರನ್ನು ಒಗ್ಗೂಡಿಸಿದ ಏಕೈಕ ನಾಯಕನೆಂದರೆ ಅದು ನೇತಾಜಿ ಮಾತ್ರ. ಭಾರತೀಯತೆ ಎಂಬ ತಮ್ಮ ಪರಿಕಲ್ಪನೆಯನ್ನು ಅವರು ಅನುಷ್ಠಾನಗೊಳಿಸಿದ್ದರು. ದೇಶವನ್ನು ವಿಭಜಿಸುವ ಶಕ್ತಿಗಳನ್ನು ದಮನಗೊಳಿಸದಿದ್ದರೆ, ಮುಂದೆ ತಕ್ಕ ಬೆಲೆ ತೆರಬೇಕಾಗುವುದು ಶತಃಸಿದ್ಧ' ಎಂದು ಬೋಸ್ ಎಚ್ಚರಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries