ಕೊಚ್ಚಿ: ಮಹಿಳಾ ಪೊಲೀಸ್ ಅಧಿಕಾರಿಗಳಿಗೆ ನಿರಂತರವಾಗಿ ಕರೆ ಮಾಡಿ ಕಿರುಕುಳ ನೀಡಿದ ಆರೋಪದ ಮೇಲೆ ಸ್ಥಳೀಯ ನ್ಯಾಯಾಲಯವು ವ್ಯಕ್ತಿಯೊಬ್ಬನಿಗೆ ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 15 ಸಾವಿರ ರೂಪಾಯಿ ದಂಡ ವಿಧಿಸಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ.
0
samarasasudhi
ಆಗಸ್ಟ್ 09, 2023
ಕೊಚ್ಚಿ: ಮಹಿಳಾ ಪೊಲೀಸ್ ಅಧಿಕಾರಿಗಳಿಗೆ ನಿರಂತರವಾಗಿ ಕರೆ ಮಾಡಿ ಕಿರುಕುಳ ನೀಡಿದ ಆರೋಪದ ಮೇಲೆ ಸ್ಥಳೀಯ ನ್ಯಾಯಾಲಯವು ವ್ಯಕ್ತಿಯೊಬ್ಬನಿಗೆ ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 15 ಸಾವಿರ ರೂಪಾಯಿ ದಂಡ ವಿಧಿಸಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ.
ಶಿಕ್ಷೆಗೊಳಗಾಗಿರುವ ಆರೋಪಿಯೂ ಕೇರಳ ಪೊಲೀಸರು ಮಹಿಳೆಯರ ಸುರಕ್ಷತೆಗಾಗಿ ಶುರು ಮಾಡಿರುವ ವನಿತಾ ಸಹಾಯವಾಣಿಗೆ 300ಕ್ಕೂ ಹೆಚ್ಚು ಬಾರಿ ಕರೆ ಮಾಡಿ ಕಿರುಕುಳ ನೀಡಿದ್ದ ಎಂದು ವರದಿಯಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಫೋನ್ ಟ್ರೇಸ್ ಮಾಡಿ ಆರೋಪಿಯನ್ನು ಬಂಧಿಸಿದ್ದರು.
ಪ್ರಕರಣದ ಹಿನ್ನಲೆ
ಜುಲೈ 11, 2019ರಂದು ಜೋಸ್ ಎನ್ನುವ ವ್ಯಕ್ತಿ ವನಿತಾ ಸಹಾಯವಾಣಿಗೆ ಕರೆ ಮಾಡಿ ಮಹಿಳಾ ಪೊಲೀಸ್ ಅಧಿಕಾರಿಗಳ ಜೊತೆ ಅಸಭ್ಯವಾಗಿ ಮಾತನಾಡಿದ್ದಾನೆ. ಇದೇ ರೀತಿ ಮಾರನೆಯ ದಿನವೂ ಮುಂದುವರೆದಿದ್ದು, ಮಹಿಳಾ ಅಧಿಕಾರಿಗಳು ಆತನಿಗೆ ತಿರುಗೇಟು ನೀಡಿದ ಬಳಿಕ ಕರೆ ಕಟ್ ಮಾಡುತ್ತಿದ್ದ.
ಎರಡು ದಿನಗಳ ಅವಧಿಯಲ್ಲಿ 300 ಬಾರಿ ಕರೆ ಮಾಡಿದ್ದ ಆರೋಪಿ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಕಾಲ್ ಹಿಸ್ಟರಿ ಟ್ರೇಸ್ ಮಾಡಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಜೋಸ್ ಬಂಧನವನ್ನು ಪ್ರಶ್ನಿಸಿ ಆತನ ಸ್ನೇಹಿತರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಸಾಮಾನ್ಯರ ಗತಿಯೇನು
ಹಲವು ಸುತ್ತಿನ ವಿಚಾರಣೆ, ದಾಖಲೆಗಳ ಪರಿಶೀಲನೆ, ವಾದ-ಪ್ರತಿವಾದವನ್ನೂ ಸುದೀರ್ಘವಾಗಿ ಆಲಿಸಿದ ನ್ಯಾಯಲಯವು ಮಹಿಳಾ ಪೊಲೀಸರಿಗೆ ಕರೆ ಮಾಡಿ ಅಸಭ್ಯವಾಗಿ ಮಾತನಾಡಿರುವುದು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಮನಾಗಿದೆ. ಮಹಿಳಾ ಪೊಲೀಸರು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಇಂತಹ ಕಿಡಿಗೇಡಿಗಳು ಅಡ್ಡಿಯಾಗಿದ್ದಾರೆ.
ಪೊಲೀಸರಿಗೆ ಈ ರೀತಿಯಾದರೆ ಸಾಮಾನ್ಯ ಮಹಿಳೆಯರ ಗತಿಯೇನು. ವನಿತಾ ಸಹಾಯವಾಣಿಗೆ ಕರೆ ಮಾಡಿ ಮಹಿಳಾ ಪೊಲೀಸರ ಜೊತೆ ಅಸಭ್ಯವಾಗಿ ಮಾತನಾಡಿದ ಆರೋಪಿ ಜೋಸ್ಗೆ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 15 ಸಾವಿರ ರೂಪಾಯಿ ದಂಡವನ್ನೂ ವಿಧಿಸಿ ನ್ಯಾಯಾಲಯ ತೀರ್ಪನ್ನು ನೀಡಿದೆ.