ನವದೆಹಲಿ: ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) 2005ರ ಸೆಕ್ಷನ್ 4ರ ಅನ್ವಯ ಅಗತ್ಯ ಮಾಹಿತಿಗಳನ್ನು ಸಾರ್ವಜನಿಕ ಸಂಸ್ಥೆಗಳು ಪ್ರಕಟಿಸಬೇಕು ಹಾಗೂ ಇದು ಜಾರಿಯಾಗುವಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
0
samarasasudhi
ಆಗಸ್ಟ್ 20, 2023
ನವದೆಹಲಿ: ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) 2005ರ ಸೆಕ್ಷನ್ 4ರ ಅನ್ವಯ ಅಗತ್ಯ ಮಾಹಿತಿಗಳನ್ನು ಸಾರ್ವಜನಿಕ ಸಂಸ್ಥೆಗಳು ಪ್ರಕಟಿಸಬೇಕು ಹಾಗೂ ಇದು ಜಾರಿಯಾಗುವಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯರ ಪೀಠ, ಕಾಯ್ದೆಯು ಪರಿಣಾಮಕಾರಿಯಾಗಿ ಜಾರಿಗೊಳ್ಳುತ್ತಿದೆಯೇ ಎಂದು ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಮತ್ತು ರಾಜ್ಯಗಳ ಮಾಹಿತಿ ಆಯುಕ್ತರು ಕ್ರಮವಹಿಸಬೇಕು ಎಂದು ನಿರ್ದೇಶಿಸಿದೆ.
'ಮಾಹಿತಿ ಹಕ್ಕುದಾರರು' ಮತ್ತು 'ಕರ್ತವ್ಯ ನಿಭಾಯಿಸುವವರ' ನಡುವೆ ಆಡಳಿತಾತ್ಮಕ ಸಂಬಂಧ ಮತ್ತು ಉತ್ತರದಾಯಿತ್ವ ಇದ್ದಾಗ ಮಾತ್ರವೇ ಕಾಯ್ದೆಯ ಉದ್ದೇಶ ಮತ್ತು ಗುರಿ ಈಡೇರುವುದು ಸಾಧ್ಯ ಎಂಬುದು ನಮ್ಮ ಅಭಿಪ್ರಾಯ' ಎಂದು ಪೀಠ ಹೇಳಿತು.
ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಜೆ.ಬಿ.ಪಾರ್ದಿವಾಲಾ ಅವರು ಪೀಠದ ಇತರ ಸದಸ್ಯರು. ಕಾಯ್ದೆಯ ಸೆಕ್ಷನ್ 4ರ ಕಡ್ಡಾಯ ಅನುಷ್ಠಾನ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಕಡ್ಡಾಯ ನಿರ್ದೇಶನ ನೀಡಬೇಕು ಎಂದು ಕೋರಿ ಕಿಶನ್ ಚಂದ್ ಜೈನ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು.
ಸಾರ್ವಜನಿಕ ದಾಖಲೆಗಳ ಸಮರ್ಪಕ ನಿರ್ವಹಣೆ, ಸುಲಭವಾಗಿ ಮಾಹಿತಿ ಸಿಗುವಂತೆ ವರ್ಗೀಕರಣ, ಸಂಬಂಧಿತ ಸಂಸ್ಥೆಯ ಸಾಂಸ್ಥಿಕ ವ್ಯವಸ್ಥೆ, ಅಧಿಕಾರಿಗಳ ಮತ್ತು ಅವರ ಕಾರ್ಯಭಾರದ ವಿವರ, ವೇತನ ವ್ಯವಸ್ಥೆ, ಬಜೆಟ್ ಅನುದಾನ, ನೀತಿಗಳಿಗೆ ಸಂಬಂಧಿಸಿದ ವಿವರಗಳ ಪ್ರಕಟಣೆ ಇತ್ಯಾದಿ ಅಂಶಗಳನ್ನು ಪ್ರಕಟಿಸುವುದು ಕಾಯ್ದೆಯ ಸೆಕ್ಷನ್ 4ರ ಅನ್ವಯ ಕಡ್ಡಾಯವಾಗಿದೆ.
'ಇದು ಪಾಲನೆಯಾಗುತ್ತಿದೆ ಎಂದು ನಿಯಮಿತವಾಗಿ ಪರಿಶೀಲಿಸಬೇಕು' ಎಂದು ಕೇಂದ್ರ ಮಾಹಿತಿ ಆಯೋಗ ಹಾಗೂ ರಾಜ್ಯಗಳ ಮಾಹಿತಿ ಆಯುಕ್ತರುಗಳಿಗೆ ನಾವು ನಿರ್ದೇಶಿಸುತ್ತಿದ್ದೇವೆ ಎಂದು ಪೀಠ ತಿಳಿಸಿತು.