ನವದೆಹಲಿ: 'ಜಮ್ಮು-ಕಾಶ್ಮೀರ ಒಕ್ಕೂಟಕ್ಕೆ ಸೇರ್ಪಡೆಯಾಗಿದೆ ಎಂದರೆ, ಅದು ಸ್ವಾಭಾವಿಕವಾಗಿ ಭಾರತದ ಅವಿಭಾಜ್ಯ ಅಂಗವಾಗಿದೆ ಹಾಗೂ ಈ ವಿಷಯವಾಗಿ ಯಾವುದೇ ಕಾರಣಕ್ಕೂ ಹಿಂದಕ್ಕೆ ಸರಿಯುವ ಅಗತ್ಯ ಇಲ್ಲ' ಎಂದಾಗುವುದಿಲ್ಲವೇ ಎಂದು ಸುಪ್ರೀಂಕೋರ್ಟ್ ಬುಧವಾರ ಪ್ರಶ್ನಿಸಿತು.
0
samarasasudhi
ಆಗಸ್ಟ್ 10, 2023
ನವದೆಹಲಿ: 'ಜಮ್ಮು-ಕಾಶ್ಮೀರ ಒಕ್ಕೂಟಕ್ಕೆ ಸೇರ್ಪಡೆಯಾಗಿದೆ ಎಂದರೆ, ಅದು ಸ್ವಾಭಾವಿಕವಾಗಿ ಭಾರತದ ಅವಿಭಾಜ್ಯ ಅಂಗವಾಗಿದೆ ಹಾಗೂ ಈ ವಿಷಯವಾಗಿ ಯಾವುದೇ ಕಾರಣಕ್ಕೂ ಹಿಂದಕ್ಕೆ ಸರಿಯುವ ಅಗತ್ಯ ಇಲ್ಲ' ಎಂದಾಗುವುದಿಲ್ಲವೇ ಎಂದು ಸುಪ್ರೀಂಕೋರ್ಟ್ ಬುಧವಾರ ಪ್ರಶ್ನಿಸಿತು.
ಸಂವಿಧಾನದ 370ನೇ ವಿಧಿಯಡಿ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ್ದ ಕೇಂದ್ರದ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳಿರುವ ನ್ಯಾಯಪೀಠ ಈ ಪ್ರಶ್ನೆ ಮುಂದಿಟ್ಟಿತು.
'ಸಂದರ್ಭಗಳಿಗೆ ತಕ್ಕಂತೆ ಹೊಂದಿಸಿಕೊಳ್ಳಬಹುದಾದ ಗುಣಲಕ್ಷಣವನ್ನು 370ನೇ ವಿಧಿ ಹೊಂದಿದೆ. ಅಲ್ಲದೇ,ಯಾವುದೇ ವಿಧಿಯನ್ನು ಅನ್ವಯಿಸಿದಾಗ ಅದರ ಪರಿಣಾಮ ದೀರ್ಘಾವಧಿ ವರೆಗೆ ಇರಬೇಕು ಎಂಬಂತೆ ಸಾಂವಿಧಾನಿಕ ಅವಕಾಶಗಳನ್ನು ರೂಪಿಸಲಾಗಿದೆ' ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಅರ್ಜಿದಾರರೊಬ್ಬರ ಪರ ಹಾಜರಿದ್ದ ಹಿರಿಯ ವಕೀಲ ಜಾಫರ್ ಶಾ, 'ರಾಜ್ಯ ವಿಧಾನಸಭೆಯು ಕಾನೂನುಗಳನ್ನು ರಚಿಸುವ ಪರಮಾಧಿಕಾರ ಹೊಂದಿದೆ' ಎಂದು ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, 'ಜಮ್ಮು-ಕಾಶ್ಮೀರ ಸೇರ್ಪಡೆಯಾಗಿದೆ ಎಂದರೆ ಅದು ಭಾರತ ಗಣರಾಜ್ಯದ ಸಂಪೂರ್ಣ ಹಾಗೂ ಅವಿಭಾಜ್ಯ ಅಂಗವಾಗಿದೆ ಎಂದರ್ಥ. ಮತ್ತೆ ಹಿಂದಿರುಗುವ ಪ್ರಶ್ನೆಯೆ ಇಲ್ಲ ಅಲ್ಲವೇ' ಎಂದು ವಕೀಲ ಶಾ ಅವರನ್ನು ನ್ಯಾಯಪೀಠ ಕೇಳಿತು.
'ಜಮ್ಮು-ಕಾಶ್ಮೀರ ಪ್ರದೇಶವನ್ನು ಭಾರತಕ್ಕೆ ವರ್ಗಾಯಿಸಲಾಗಿದೆ ಎಂದರೆ, ರಾಜ್ಯವು ಭಾರತದ ವಶದಲ್ಲಿದ್ದು, ಸಾರ್ವಭೌಮತೆಯನ್ನು ವರ್ಗಾವಣೆ ಮಾಡಿರಲಿಲ್ಲ ಎಂಬ ಅಭಿಪ್ರಾಯವೂ ಇದೆ ಎಂದು ಶಾ ಪ್ರತಿಕ್ರಿಯಿಸಿದರು.