ಮುಳ್ಳೇರಿಯ: ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಸಂಘದ ಹಿರಿಯ ಯಕ್ಷಗಾನ ಅರ್ಥಧಾರಿಯೂ, ವೇಷಧಾರಿಯೂ ಆಗಿದ್ದ ಮಹಾಲಿಂಗ ಪಾಟಾಳಿ ಅವರ 17 ನೇ ವರ್ಷದ ಸಂಸ್ಮರಣೆ, ವಿಶೇಷ ಯಕ್ಷಗಾನ ತಾಳಮದ್ದಳೆ ಶನಿವಾರ ಜರಗಿತು. ಹಿರಿಯ ಸಾಹಿತಿ ಡಾ. ರಮಾನಂದ ಬನಾರಿ ಮಂಜೇಶ್ವರ ಅವರು ಮಹಾಲಿಂಗ ಪಾಟಾಳಿ ಅವರ ಕಲಾವ್ಯಕ್ತಿತ್ವದ ವೈಶಿಷ್ಟ್ಯವನ್ನು ವಿಶ್ಲೇಶಿಸಿ ಮಾತನಾಡಿ ಸಂಸ್ಮರಣೆಗೈದರು.
ನಾರಾಯಣ ದೇಲಂಪಾಡಿ ಮತ್ತು ಮನೆಯವರ ವತಿಯಿಂದ ಆಯೋಜಿಸಲ್ಪಟ್ಟ ಕಲಾರಾಧನೆಯ ಮೊದಲಿಗೆ ಸ್ಥಳ ಸಾನಿಧ್ಯ ಶ್ರೀ ದೇವರ ಪೂಜಾರ್ಚನೆ ನಡೆಯಿತು. ಬಳಿಕ ಯಕ್ಷಗುರು ವಿಶ್ವ ವಿನೋದ ಬನಾರಿಯವರ ನಿರ್ದೇಶನದಲ್ಲಿ ಪೆರುವಡಿ ಸಂಕಯ್ಯ ಭಾಗವತ ವಿರಚಿತ "ಕೃμÁ್ಣರ್ಜುನ ಕಾಳಗ" ಯಕ್ಷಗಾನ ತಾಳಮದ್ದಳೆ ಪ್ರಸ್ತುತಗೊಂಡಿತು.
ಭಾಗವತರಾಗಿ ಕುಮಾರಿ ರಚನಾ ಚಿದ್ಗಲ್, ಚೆಂಡೆ ಮದ್ದಳೆಯಲ್ಲಿ ಅಪ್ಪಯ್ಯ ಮಣಿಯಾಣಿ ಮಂಡೆಕ್ಕೋಲು, ಕಲ್ಲಡ್ಕ ಶಿವರಾಮ ಕಲ್ಲೂರಾಯ, ವಿಷ್ಣುಶರಣಬನಾರಿ, ನಾರಾಯಣ ಪಾಟಾಳಿ ಮಯ್ಯಾಳ, ಸದಾನಂದ ಪೂಜಾರಿ ಮಯ್ಯಾಳ, ಕೃಷ್ಣ ಪ್ರಸಾದ ಬೆಳ್ಳಿಪ್ಪಾಡಿ ಸಹಕರಿಸಿದರು. ಅರ್ಥಧಾರಿಗಳಾಗಿ ಡಿ. ವೆಂಕಟ್ರಮಣ ಮಾಸ್ತರ್ ದೇಲಂಪಾಡಿ, ಯಂ. ರಮಾನಂದ ರೈ ದೇಲಂಪಾಡಿ, ನಾರಾಯಣ ದೇಲಂಪಾಡಿ, ಪದ್ಮನಾಭ ಮಯ್ಯಾಳ, ರಾಮನಾಯ್ಕ ದೇಲಂಪಾಡಿ, ಐತ್ತಪ್ಪ ಗೌಡ ಮುದಿಯಾರು, ಬಿ.ಎಚ್. ವೆಂಕಪ್ಪ ಗೌಡ, ಸಂಜೀವರಾವ್ ಮಯ್ಯಾಳ ಪಾತ್ರಗಳನ್ನು ನಿರ್ವಹಿಸಿದರು.
ಶ್ವೇತಾ ರಮೇಶ್ ಬೆಳ್ಳಿಪ್ಪಾಡಿಯವರು ಸ್ವಾಗತಿಸಿ, ಕೋಶಾಧಿಕಾರಿ ನಂದಕಿಶೋರ ಬನಾರಿ ವಂದಿಸಿದರು. ಭಾಸ್ಕರ ಮಾಸ್ತರ್ ದೇಲಂಪಾಡಿ, ಗೋಪಾಲಕೃಷ್ಣ ಮುದಿಯಾರು, ಹಾಗೂ ಸ್ಥಳಿಯ ಪ್ರಮುಖರು ಮತ್ತು ಸಂಘದ ಸದಸ್ಯರು ಸಹಕರಿಸಿದರು.

.jpg)
.jpg)
