HEALTH TIPS

ಹರಿಯಾಣದಲ್ಲಿ ಎರಡು ಗುಂಪುಗಳ ನಡು‌ವೆ ಘರ್ಷಣೆ: ನೂಹ್‌ನಲ್ಲಿ ಕರ್ಫ್ಯೂ ಜಾರಿ

                            ಗುರುಗ್ರಾಮ (PTI): ಹರಿಯಾಣದ ನೂಹ್‌ನಲ್ಲಿ ಸೋಮವಾರ ವಿಶ್ವ ಹಿಂದೂ ಪರಿಷತ್‌ ಆಯೋಜಿಸಿದ್ದ ಮೆರವಣಿಗೆ ವೇಳೆ ಎರಡು ಗುಂಪುಗಳ ನಡು‌ವೆ ಘರ್ಷಣೆ ನಡೆದು ಹಿಂಸಾಚಾರ ಸಂಭವಿಸಿದ್ದರಿಂದ ಜಿಲ್ಲೆಯಾದ್ಯಂತ ಕರ್ಫ್ಯೂ ವಿಧಿಸಲಾಗಿದೆ.

                     ನೂಹ್‌ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ಜಿಲ್ಲೆಯಲ್ಲಿ ಮಂಗಳವಾರ ಯಾವುದೇ ಹೊಸ ಹಿಂಸಾಚಾರ ನಡೆದ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

                  ಆದರೆ, ಗುಂಪೊಂದು ಮಂಗಳವಾರ ಮಧ್ಯಾಹ್ನ ಗುರುಗ್ರಾಮ ಜಿಲ್ಲೆಯ ಬಾದ್‌ಶಾಹ್‌ಪುರದಲ್ಲಿ ಉಪಾಹಾರ ಗೃಹಕ್ಕೆ ಬೆಂಕಿ ಹಚ್ಚಿದ್ದು, ಪಕ್ಕದ ಅಂಗಡಿಗಳನ್ನು ಧ್ವಂಸಗೊಳಿಸಿದೆ.

                                               ಒಟ್ಟು ಐವರ ಸಾವು

                  ವಿಶ್ವ ಹಿಂದೂ ಪರಿಷತ್ತಿನ ಮೆರವಣಿಗೆ ವೇಳೆ ಭುಗಿಲೆದ್ದ ಹಿಂಸಾಚಾರದ ಸಂದರ್ಭದಲ್ಲಿ ನೂಹ್‌ನಲ್ಲಿ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೇ ಗುರುಗ್ರಾಮದ ಸೆಕ್ಟರ್‌ 57 ಪ್ರದೇಶದ ಅಂಜುಮನ್‌ ಮಸೀದಿಯ ಮೇಲೆ ದಾಳಿ ನಡೆದಿದ್ದು, ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಹೀಗಾಗಿ ಹಿಂಸಾಚಾರದಲ್ಲಿ ಇಲ್ಲಿಯವರೆಗೆ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

                     ಅಂಜುಮನ್‌ ಮಸೀದಿಯೊಳಗೆ ಸೋಮವಾರ ಮಧ್ಯರಾತ್ರಿ ಬಳಿಕ ನುಗ್ಗಿದ ಗುಂಪು, ಮಸೀದಿಯೊಳಗಿದ್ದ ಜನರ ಮೇಲೆ ಗುಂಡು ಹಾರಿಸಿತು. ಈ ಘಟನೆಯಲ್ಲಿ ಇಬ್ಬರಿಗೆ ಗುಂಡು ತಗುಲಿದ್ದು, ಬಿಹಾರ ಮೂಲದ 26 ವರ್ಷದ ಇಮಾಮ್‌ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ.

               ಈ ಹಿಂಸಾಚಾರದಲ್ಲಿ ಗೃಹ ರಕ್ಷಕ ದಳದ ನೀರಜ್‌, ಗುರುಸೇವಕ್‌ ಹಾಗೂ ಭದಾಸ್‌ ಗ್ರಾಮದ ಶಕ್ತಿ ಎಂಬುವರು ಮೃತಪಟ್ಟಿದ್ದಾರೆ. ಹತ್ತು ಪೊಲೀಸರು ಸೇರಿ 23 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ನಿಲ್ಹಾರ್‌ನ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಲಾಗಿದ್ದು, ಅವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಅವರ ಗುರುತು ಇನ್ನೂ ಪತ್ತೆಯಾಗಿಲ್ಲ.

               ಅಲ್ಲದೆ ಮೂವರು ಪೊಲೀಸ್‌ ಅಧಿಕಾರಿಗಳಿಗೆ ಗುಂಡಿನಿಂದ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಗೃಹ ಸಚಿವ ಅನಿಲ್‌ ವಿಜ್‌ ಹೇಳಿದ್ದಾರೆ.

                ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಹಲವರು ದೇವಾಲಯವೊಂದರಲ್ಲಿ ಆಶ್ರಯ ಪಡೆದಿದ್ದರು. ಅವರನ್ನು ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕರ ನೇತೃತ್ವದ ತಂಡ ಸ್ಥಳಾಂತರಿಸಿದೆ ಎಂದು ಅವರು ವಿವರಿಸಿದ್ದಾರೆ.

                                                     44 ಎಫ್‌ಐಆರ್‌ ದಾಖಲು:

                ಈ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು 44 ಎಫ್‌ಐಆರ್‌ಗಳನ್ನು ದಾಖಲಿಸಿದ್ದು 70 ಜನರನ್ನು ವಶಕ್ಕೆ ಪಡೆದಿದ್ದಾರೆ. ಹಿಂಸಾಚಾರದಲ್ಲಿ ಒಟ್ಟು 120 ವಾಹನಗಳಿಗೆ ಹಾನಿಯಾಗಿದೆ. ಈ ಪೈಕಿ ಪೊಲೀಸರ ಎಂಟು ವಾಹನಗಳೂ ಸೇರಿ ಸುಮಾರು 50 ವಾಹನಗಳು ಬೆಂಕಿಗೆ ಆಹುತಿಯಾಗಿವೆ.

                                                               ಸಿ.ಎಂ ಸಭೆ:

               ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಅವರು ಗೃಹ ಸಚಿವ ವಿಜ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಧಿಕಾರಿಗಳು ಮತ್ತು ಹಿರಿಯ ಪೊಲೀಸ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನೂಹ್‌ನ ಪರಿಸ್ಥಿತಿ ಕುರಿತು ಮಾಹಿತಿ ಪಡೆದರು.

                    ಹರಿಯಾಣದಲ್ಲಿ ಕೋಮು ಉದ್ವಿಗ್ನ ಸ್ಥಿತಿ ನಿರ್ಮಾಣ ಆಗಿರುವುದಕ್ಕೆ ವಿರೋಧ ಪಕ್ಷಗಳ ನಾಯಕರು ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

                                                               ಶಾಂತಿ ಸಭೆ:

                   ಕೋಮು ಸೌಹಾರ್ದ ಮೂಡಿಸುವ ನಿಟ್ಟಿನಲ್ಲಿ ನೂಹ್‌ ಮತ್ತು ಗುರುಗ್ರಾಮ ಜಿಲ್ಲೆಯ ಸೋಹಾದಲ್ಲಿ ಮಂಗಳವಾರ ಶಾಂತಿ ಸಭೆಗಳು ನಡೆದವು.

                    ನೂಹ್‌ನಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್‌ ಪವಾರ್‌, ಸೋಹಾದಲ್ಲಿ ಜಿಲ್ಲಾಧಿಕಾರಿ ನಿಶಾಂತ್‌ ಕುಮಾರ್‌ ಯಾದವ್‌ ಅವರ ನೇತೃತ್ವದಲ್ಲಿ ಶಾಂತಿ ಸಭೆಗಳು ನಡೆದವು. ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಶಾಂತಿ ಕಾಪಾಡುವಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಆಡಳಿತಕ್ಕೆ ಭರವಸೆ ನೀಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

                     - ಮನೋಹರ್‌ ಲಾಲ್‌ ಖಟ್ಟರ್‌ ಮುಖ್ಯಮಂತ್ರಿ ಹರಿಯಾಣQuote - ವಿಎಚ್‌ಪಿ ಮೆರವಣಿಗೆ ಮತ್ತು ಪೊಲೀಸರ ಮೇಲೆ ನಡೆದಿರುವ ದಾಳಿಯು ದೊಡ್ಡ ಷಡ್ಯಂತ್ರದ ಭಾಗದಂತೆ ಕಾಣುತ್ತಿದೆ. ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು

                                        ಶಾಂತಿ ಕದಡಲು ಷಡ್ಯಂತ್ರ: ಗೃಹ ಸಚಿವರ ಆರೋಪ

                  : ಹರಿಯಾಣದಲ್ಲಿ ಶಾಂತಿ ಕದಡಲು ಬಯಸಿದವರ ಷಡ್ಯಂತ್ರದ ಭಾಗವಾಗಿ ನೂಹ್‌ನಲ್ಲಿ ಹಿಂಸಾಚಾರ ನಡೆಸಲಾಗಿದೆ ಎಂದು ರಾಜ್ಯದ ಗೃಹ ಸಚಿವ ಅನಿಲ್ ವಿಜ್ ಮಂಗಳವಾರ ಆರೋಪಿಸಿದರು. 'ನೂಹ್‌ನ ಹಿಂಸಾಚಾರ ಏಕಾಏಕಿ ಘಟಿಸಿದಂತೆ ಕಾಣುತ್ತಿಲ್ಲ. ಬೇರೆ ಬೇರೆ ಸ್ಥಳಗಳಲ್ಲಿ ವಿವಿಧ ಹಂತಗಳಲ್ಲಿ ಸಂಭವಿಸಿದ ಹಿಂಸಾಚಾರ ಕಲ್ಲುಗಳನ್ನು ಸಂಗ್ರಹಿಸಿದ್ದ ವಿಧಾನ ಶಸ್ತ್ರಾಸ್ತ್ರಗಳ ಬಳಕೆ ಗುಂಡು ಹಾರಿಸಿದ ರೀತಿಯನ್ನು ಗಮನಿಸಿದರೆ ಈ ಘಟನೆ ಇದ್ದಕ್ಕಿದ್ದಂತೆ ನಡೆದಂತೆ ತೋರುತ್ತಿಲ್ಲ' ಎಂದು ಗೃಹ ಸಚಿವರು ಹೇಳಿದರು. ಅಂಬಾಲದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು 'ಇಲ್ಲಿ ಎರಡೂ ಸಮುದಾಯದವರು ಶಾಂತಿಯಿಂದ ಬದುಕುತ್ತಿದ್ದಾರೆ. ಆದರೆ ರಾಜ್ಯ ಮತ್ತು ದೇಶದ ಶಾಂತಿ ಕದಡುವ ಉದ್ದೇಶದಿಂದ ಯಾರೋ ಈ ಘಟನೆ ರೂಪಿಸಿದ್ದಾರೆ' ಎಂದು ಅವರು ದೂರಿದರು. 'ನಾನು ಈ ಕುರಿತು ತಕ್ಷಣ ಯಾವುದೇ ತೀರ್ಮಾನಕ್ಕೆ ಬರಲು ಬಯಸುವುದಿಲ್ಲ. ಪರಿಸ್ಥಿತಿ ನಿಯಂತ್ರಣಕ್ಕೆ ತರುವುದು ಮತ್ತು ಶಾಂತಿ ಕಾಪಾಡುವುದು ನಮ್ಮ ಪ್ರಾಥಮಿಕ ಉದ್ದೇಶ' ಎಂದು ಅವರು ಪ್ರತಿಕ್ರಿಯಿಸಿದರು. ಈ ಘಟನೆ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ತಪ್ಪಿತಸ್ಥರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದರು. ನೂಹ್‌ನಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ನೆರೆಯ ಪಲ್ವಾಲ್ ಫರಿದಾಬಾದ್ ಗುರುಗ್ರಾಮ ಝಜ್ಜರ್‌ ಮತ್ತು ರೇವಾರಿ ಜಿಲ್ಲೆಗಳಿಂದ ಪಡೆಗಳನ್ನು ಕಳುಹಿಸಲಾಗಿದೆ ಎಂದು ಸಚಿವರು ಹೇಳಿದರು. ರಾಜ್ಯದ ಪರಿಸ್ಥಿತಿ ಕುರಿತು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಭಲ್ಲಾ ಅವರೊಂದಿಗೆ ಮಾತನಾಡಿದ್ದು ಕೇಂದ್ರ 20 ರಕ್ಷಣಾ ಪಡೆಗಳನ್ನು ಕಳುಹಿಸಿದ್ದಾರೆ ಎಂದು ಅವರು ತಿಳಿಸಿದರು.

                                              ಶಾಂತಿ ಸ್ಥಾಪನೆಗೆ: ಕೇಜ್ರಿವಾಲ್‌ ಮನವಿ

                  'ಈಶಾನ್ಯದಲ್ಲಿ ಮಣಿಪುರದ ಬಳಿಕ ಈಗ ಹರಿಯಾಣದಲ್ಲಿ ಇಂಥ ಘಟನೆ ನಡೆದಿರುವುದು ಒಳ್ಳೆಯ ಲಕ್ಷಣವಲ್ಲ' ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ನೂಹ್‌ ಹಿಂಸಾಚಾರ ಕುರಿತು ಪ್ರತಿಕ್ರಿಯಿಸಿದ್ದಾರೆ. 'ಈ ಸಂದರ್ಭದಲ್ಲಿ ಶಾಂತಿ ಮತ್ತು ಪರಸ್ಪರ ಸಹೋದರತ್ವವನ್ನು ಕಾಪಾಡಿಕೊಳ್ಳುವಂತೆ ಹರಿಯಾಣದ ಜನರಲ್ಲಿ ಮನವಿ ಮಾಡುತ್ತೇನೆ. ಹಿಂಸಾಚಾರ ಮತ್ತು ಶಾಂತಿಗೆ ವಿರುದ್ಧವಾದ ರಾಜಕೀಯ ಶಕ್ತಿಗಳನ್ನು ನಾವು ಒಟ್ಟಾಗಿ ಸೋಲಿಸಬೇಕಾಗಿದೆ' ಎಂದು ಅವರು ಟ್ವೀಟ್‌ ಮಾಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries