ನವದೆಹಲಿ: ಮಾರುಕಟ್ಟೆ ಬೇಡಿಕೆಯನ್ನು ಪೂರೈಸುವುದು ಹಾಗೂ ಬೆಲೆ ನಿಯಂತ್ರಿಸುವುದರ ಕ್ರಮವಾಗಿ ನೇಪಾಳದಿಂದ ಟೊಮೆಟೊ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಲೋಕಸಭೆಯಲ್ಲಿ ತಿಳಿಸಿದರು.
ಅವಿಶ್ವಾಸ ನಿರ್ಣಯದ ಮೇಲೆ ಮಾತನಾಡಿದ ಅವರು, ಹಣದುಬ್ಬರ ಮತ್ತು ಬೆಲೆ ಏರಿಕೆ ತಡೆಗೆ ಸರ್ಕಾರ ಅಗತ್ಯ ಕ್ರಮಕೈಗೊಳ್ಳುತ್ತಿದೆ.
ಅಲ್ಲದೆ, ಈಗಾಗಲೇ ಮೂರು ಲಕ್ಷ ಟನ್ ಈರುಳ್ಳಿ ಖರೀದಿಸಲಾಗಿದ್ದು, ದಾಸ್ತಾನು ಇಡಲಾಗಿದೆ. ಸದ್ಯ, ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಟೊಮೆಟೊವನ್ನು ಖರೀದಿಸಿ ದೆಹಲಿ, ಬಿಹಾರ, ಪಶ್ಚಿಮ ಬಂಗಾಳ, ರಾಜಸ್ಥಾನಗಳಲ್ಲಿ ರಾಷ್ಟ್ರೀಯ ಕೃಷಿ ಉತ್ಪನ್ನ ಸಹಕಾರ ಮಾರುಕಟ್ಟೆ ಒಕ್ಕೂಟ (ನಾಫೆಡ್) ಮತ್ತು ಇತರೆ ಸಹಕಾರ ಸಂಘಗಳ ಮೂಲಕ ಹಂಚಿಕೆ ಮಾಡಲಾಗುತ್ತದೆ ಎಂದು ವಿವರಿಸಿದರು.
ಈ ರಾಜ್ಯಗಳಿಗೆ ಇದುವರೆಗೂ 8.84 ಲಕ್ಷ ಕೆ.ಜಿ ಟೊಮೆಟೊವನ್ನು ಹಂಚಿಕೆ ಮಾಡಲಾಗಿದೆ. ಈ ಪ್ರಕ್ರಿಯೆ ಮುಂದುವರಿಯಲಿದ್ದು, ಪ್ರಮಾಣವನ್ನು ಹೆಚ್ಚಿಸಲಾಗುವುದು. ಕರ್ನಾಟಕ, ಆಂಧ್ರಪ್ರದೇಶದಲ್ಲಿ ಟೊಮೆಟೊದ ಸಗಟು ಮಾರಾಟ ದರವು ಇಳಿಕೆಯಾಗುತ್ತಿದೆ ಎಂದರು.
ನೇಪಾಳದಿಂದ ಟೊಮೆಟೊ ಆಮದಿಗಾಗಿ, ಆಮದು ಮೇಲಿನ ನಿರ್ಬಂಧ ಸಡಿಲಿಸಲಾಗಿದೆ. ಆಮದುಗೊಳ್ಳಲಿರುವ ಟೊಮೆಟೊ ಈ ವಾರದಲ್ಲಿ ವಾರಾಣಸಿ, ಕಾನ್ಪುರ, ಲಖನೌ ತಲುಪಲಿದೆ. ಅಲ್ಲದೆ, ರಾಷ್ಟ್ರೀಯ ಸಹಕಾರ ಗ್ರಾಹಕ ಒಕ್ಕೂಟದ (ಎನ್‌ಸಿಸಿಎಫ್) ಮೂಲಕ ದೆಹಲಿ ಎನ್‌ಸಿಆರ್ ವಲಯದಲ್ಲಿ ಈ ವಾರಾಂತ್ಯದ ವೇಳೆಗೆ ಕೆ.ಜಿಗೆ ₹ 70ರ ದರದಲ್ಲಿ ಮಾರಲಾಗುತ್ತದೆ ಎಂದು ವಿವರಿಸಿದರು.
ಮೋದಿ ನೇತೃತ್ವದ ಸರ್ಕಾರ ಜನತೆಗೆ ನೀಡಿದ್ದ ಭರವಸೆಗಳನ್ನು ಈಡೇರಿಸುತ್ತಿದೆ. ಆರ್ಥಿಕತೆ ಪ್ರಗತಿಯಾಗುತ್ತಿದೆ ಎಂದರು. 'ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದೆ ಗರೀಬಿ ಹಟಾವೋ ಘೋಷಣೆ ಮಾಡಿತ್ತು. ಬಡತನ ನಿರ್ಮೂಲನೆಯಾಯಿತೇ' ಎಂದು ಪ್ರಶ್ನಿಸಿದರು.
ಮೋದಿ ಅವರು ಈಗ ಆಡಳಿತದ ಶೈಲಿಯನ್ನೇ ಬದಲಿಸಿದ್ದಾರೆ. ಹಿಂದೆ 'ಸಿಗುತ್ತದೆ' ಎಂಬ ಭರವಸೆ ಇತ್ತು. ಈಗ 'ಸಿಕ್ಕಿತು' ಎಂಬ ಭಾವನೆ ಇದೆ ಎಂದರು. ಹಣದುಬ್ಬರ ತಡೆ, ಬ್ಯಾಂಕಿಂಗ್ ಕ್ಷೇತ್ರದ ಪ್ರಗತಿ ಅಂಶಗಳನ್ನು ಉಲ್ಲೇಖಿಸಿ ಸರ್ಕಾರದ ಆಡಳಿತವನ್ನು ಸಮರ್ಥಿಸಿಕೊಂಡರು.
'ಇಂಡಿಯಾ' ಮೈತ್ರಿಕೂಟವನ್ನು ಟೀಕಿಸಿದ ಅವರು, ಮೈತ್ರಿಕೂಟದ ಪಕ್ಷಗಳು ಒಟ್ಟಾಗಿ ಹೋರಾಟ ನಡೆಸುತ್ತಿವೆಯೊ, ಪರಸ್ಪರ ಹೋರಾಟ ನಡೆಸುತ್ತಿವೆಯೋ ಎಂದು ನಿರ್ಧರಿಸುವುದೇ ಕ್ಲಿಷ್ಟವಾಗಿದೆ ಎಂದರು.


