ನವದೆಹಲಿ: ಸುಪ್ರೀಂ ಕೋರ್ಟ್ ಪ್ರವೇಶಿಸಲು ಬೇಕಾದ ಪಾಸ್‌ಗಾಗಿ ಇನ್ನು ಮುಂದೆ ಸರದಿಯಲ್ಲಿ ನಿಲ್ಲುವ ಅಗತ್ಯವಿಲ್ಲ. ಇದಕ್ಕಾಗಿ ಆನ್‌ಲೈನ್ ಮೂಲಕ ಇ-ಪಾಸ್ ನೀಡುವ 'ಸುಸ್ವಾಗತಂ' ಪೋರ್ಟಲ್ ಅನ್ನು ಆರಂಭಿಸಲಾಗಿದೆ.
0
samarasasudhi
ಆಗಸ್ಟ್ 10, 2023
ನವದೆಹಲಿ: ಸುಪ್ರೀಂ ಕೋರ್ಟ್ ಪ್ರವೇಶಿಸಲು ಬೇಕಾದ ಪಾಸ್‌ಗಾಗಿ ಇನ್ನು ಮುಂದೆ ಸರದಿಯಲ್ಲಿ ನಿಲ್ಲುವ ಅಗತ್ಯವಿಲ್ಲ. ಇದಕ್ಕಾಗಿ ಆನ್‌ಲೈನ್ ಮೂಲಕ ಇ-ಪಾಸ್ ನೀಡುವ 'ಸುಸ್ವಾಗತಂ' ಪೋರ್ಟಲ್ ಅನ್ನು ಆರಂಭಿಸಲಾಗಿದೆ.
ಸಂವಿಧಾನದ 370ನೇ ವಿಧಿಯಡಿ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ್ದ ಕೇಂದ್ರದ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಪೋರ್ಟಲ್ ಆರಂಭಿಸಿರುವುದಾಗಿ ಗುರುವಾರ ಘೋಷಿಸಿದೆ.
ವೆಬ್ ಆಧರಿತ ಪೋರ್ಟಲ್ ಮೊಬೈಲ್ ಸ್ನೇಹಿ ಆಗಿದ್ದು, ವಿಚಾರಣೆಗೆ ಹಾಜರಾಗಲು ಹಾಗೂ ವಕೀಲರನ್ನು ಭೇಟಿಯಾಗಲು ನ್ಯಾಯಾಲಯಕ್ಕೆ ಬರುವವರು ಇದರ ಮೂಲಕ ಇ-ಪಾಸ್‌ಗೆ ನೋಂದಣಿ ಮಾಡಬಹುದು ಎಂದು ಡಿ.ವೈ. ಚಂದ್ರಚೂಡ್ ಅವರು ಹೇಳಿದ್ದಾರೆ.
'ಸುಸ್ವಾಗತಂ' ಪೋರ್ಟಲ್ ಅನ್ನು ಜುಲೈ 25ರಿಂದ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, ಬಳಕೆದಾರರಿಂದ ಉತ್ತಮ ಪ್ರತಿಕ್ರಿಯೆಗಳು ಬಂದಿವೆ ಎಂದಿದ್ದಾರೆ.
ಆಗಸ್ಟ್ 9ರ ವರೆಗೆ 10 ಸಾವಿರಕ್ಕೂ ಹೆಚ್ಚು ಪಾಸ್‌ಗಳನ್ನು ಈ ಪೋರ್ಟಲ್ ಮೂಲಕ ನೀಡಲಾಗಿದೆ. ಇನ್ನು ಮುಂದೆ ಪಾಸ್‌ಗಾಗಿ ಸರದಿಯಲ್ಲಿ ನಿಲ್ಲಬೇಕಾದ ಅಗತ್ಯವಿಲ್ಲ. ಎಲ್ಲಾ ಪಾಸ್‌ಗಳನ್ನು ಆನ್‌ಲೈನ್ ಮೂಲಕವೇ ನೀಡಲಾಗುವುದು ಎಂದು ವಿವರಿಸಿದ್ದಾರೆ.
ಈ ಪೋರ್ಟಲ್ ಅನ್ನು ಹೇಗೆ ಬಳಕೆ ಮಾಡುವುದು ಎಂಬುದರ ಕುರಿತ ವಿಡಿಯೊ ವೆಬ್‌ಸೈಟ್‌ನಲ್ಲಿ ಲಭ್ಯವಿದೆ ಎಂದು ತಿಳಿಸಿದ್ದಾರೆ.