ಕಾಸರಗೋಡು: ನಾಡು, ನುಡಿ ಸೇರಿದಂತೆ ಸಾಹಿತ್ಯ ವಲಯಕ್ಕೆ ಮಹತ್ವದ ಕೊಡುಗೆ ನೀಡಿರುವ ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ಅವರಿಗೆ ಗೌರವ ಡಾಕ್ಟರೇಟ್ ನೀಡಲು ವಿಶ್ವ ವಿದ್ಯಾಲಯಗಳು ಮುಂದಾಗಬೇಕು ಎಂಬುದಾಗಿ ಕಲಬುರ್ಗಿ ಆಕಾಶವಾಣಿ ನಿವೃತ್ತ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ತಿಳಿಸಿದ್ದಾರೆ.
ಅವರು ಖ್ಯಾತ ಕನ್ನಡ-ತುಳು ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರ 65ನೇ ಹುಟ್ಟುಹಬ್ಬದ ಅಂಗವಾಗಿ ಮಧೂರು ಸನಿಹದ ಉಳಿಯತ್ತಡ್ಕ ಶ್ರೀ ಶಕ್ತಿ ಸಭಾಭವನದಲ್ಲಿ 'ಸಮತಾ ಸಾಹಿತ್ಯ ಸೌರಭ'ಹೆಸರಿನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಹಿತ್ಯ ಮತ್ತು ಸಂಸ್ಕøತಿಯ ಸಾರ ತುಂಬಿದ ರಾಧಾಕೃಷ್ಣ ಅವರ ಸಮಗ್ರ ಬರವಣಿಗೆ ಕಾಸರಗೋಡಿನ ಸಾಕ್ಷಿ ಪ್ರಜ್ಞೆಯಾಗಿದೆ. ರಾಧಾಕೃಷ್ಣ ಉಳಿಯತ್ತಡ್ಕ ಅವರ ಸಾಹಿತ್ಯದ ಒಳನೋಟದಲ್ಲಿ ಸಮತಾ ಸಮಾಜದ ಸೃಷ್ಟಿ, ಶೋಷಿತರ ಧ್ವನಿ, ನಾಡಪ್ರಜ್ಞೆಗೆ ಸಾಕ್ಷಿಯಾಗುವ ಸಂವೇದನಾಶೀಲತೆ ಅಡಕವಾಗಿದೆ. ರಾಧಾಕೃಷ್ಣ ಅವರ ಸಾಹಿತ್ಯ, ಬದುಕು ಹಾಗೂ ಬರಹವನ್ನೊಳಗೊಂಡ ಸಾಕ್ಷ್ಯ ಚಿತ್ರ ಪ್ರತಿಯೊಬ್ಬ ವಿದ್ಯಾರ್ಥಿಗೆ ಸ್ಪೂರ್ತಿದಾಯಕವಾಗಿದ್ದು, ಎಲ್ಲ ಮಕ್ಕಳಿಗೂ ಇದು ತಲುಪುವಂತಾಗಬೇಕು ಎಂದು ತಿಳಿಸಿದರು.
ರಾಧಾಕೃಷ್ಣ ಉಳಿಯತ್ತಡ್ಕ ಅವರ ಬದುಕು-ಬರಹ ಒಳಗೊಂಡ ದೃಶ್ಯ ಸಾಕ್ಷ್ಯಚಿತ್ರವನ್ನು ಕವಿ ಶ್ರೀಕೃಷ್ಣಯ್ಯ ಅನಂತಪುರ ಬಿಡುಗಡೆಗೊಳಿಸಿದರು. ಸಾಮಾಜಿಕ ಕಾರ್ಯಕರ್ತೆ, ಬರಹಗಾರ್ತಿ ಆಯಿಷಾ ಎ.ಎ ಪೆರ್ಲ ಅಭಿನಂದನಾ ಭಾಷಣ ಮಾಡಿದರು. ಮಧೂರು ಗ್ರಾಮ ಪಮಚಾಯಿತಿ ಸದಸ್ಯ ಬಶೀರ್, ಶ್ರೀ ಕ್ಷೇ. ಧ. ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ಜಿಲ್ಲಾ ಯೋಜನಾಧಿಕಾರಿ ಮುಕೇಶ್, ಮಾನವ ಹಕ್ಕು ಸಂಘಟನೆ ಕಾಸರಗೋಡು ಜಿಲ್ಲಾಧ್ಯಕ್ಷೆ ಸುಲೈಕಾ ಮಾಹಿನ್, ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ನಿರ್ದೇಶಕ ಕೆ.ವಿ ರಮೇಶ್, ನಿವೃತ್ತ ಶಿಕ್ಷಕ ವಿಶಾಲಾಕ್ಷ ಪುತ್ರಕಳ, ಸಂತೋಷ್ ಆರ್. ಗಟ್ಟಿ, ಗುರುಪ್ರಸಾದ್ ಕೋಟೆಕಣಿ, ಜಗದೀಶ್ ಕೂಡ್ಲು, ಸಾಹಿತಿ ರವೀಂದ್ರನ್ ಪಾಡಿ, ಕೃಷ್ಣ ಪಟ್ಟಾಜೆ, ಪ್ರೊ. ಎ.ಶ್ರೀನಾಥ್ ಉಪಸ್ಥಿತರಿದ್ದರು. ಗೀತಾ ಎಂ. ಭಟ್ ಪ್ರಾರ್ಥನೆ ಹಾಡಿದರು. ಬಾಲಕೃಷ್ಣ ಬೇರಿಕೆ ಸ್ವಾಗತಿಸಿದರು. ಜಯ ಮಣಿಯಂಪಾರೆ, ದಿವ್ಯಾ ಗಟ್ಟಿ ಪರಕ್ಕಿಲ, ವನಜಾಕ್ಷಿ ಚೆಂಬರಕಾನ ಕಾರ್ಯಕ್ರಮ ನಿರೂಪಿಸಿದರು. ಸುಂದರ ಬಾರಡ್ಕ ವಂದಿಸಿದರು.
ಈ ಸಂದರ್ಭ ದೃಶ್ಯ ಸಾಕ್ಷ್ಯಚಿತ್ರ ನಿರ್ಮಾಪಕ ಮೋಹನ್ ಪಡ್ರೆ ಅವರನ್ನು ಗೌರವಿಸಲಾಯಿತು.
ಬದಿಯಡ್ಕದ ಸಮತಾ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಳಗ್ಗೆ ನಡೆದ ಕಾವ್ಯ ಗಾಯನ-ಕುಂಚ ಕಲಾ ಪ್ರದರ್ಶನವನ್ನು ಸಿರಿಬಾಗಿಲು ರಾಮಕೃಷ್ಣ ಮಯ್ಯ ಉದ್ಘಾಟಿಸಿದರು. ಈ ಸಂದರ್ಭ ನಡೆದ ವಿಚಾರಗೋಷ್ಠಿಯಲ್ಲಿ ರಾಧಾಕೃಷ್ಣ ಉಳಯತ್ತಡ್ಕ ಅವರ ಸಾಹಿತ್ಯಾವಲೋಕನ ನಡೆಯಿತು. ವಿಶ್ರಾಂತ ಪ್ರಾಧ್ಯಾಪಕಿ ಡಾ. ಯು. ಮಹೇಶ್ವರಿ ಅಧ್ಯಕ್ಷತೆ ವಹಿಸಿದ್ದರು. ಕಾವ್ಯದ ಬಗ್ಗೆ ಡಾ. ಧನಂಜಯ ಕುಂಬಳೆ, ಗದ್ಯಗಳ ಬಗ್ಗೆ ಸಂಶೋಧನಾ ವಿದ್ಯಾರ್ಥಿ ಸುಜಾತಾ ಮಾಣಿಮೂಲೆ, ಪತ್ರಿಕೋದ್ಯಮದ ಬಗ್ಗೆ ಪತ್ರಕರ್ತ ವಿಕ್ರಂ ಕಾಂತಿಕೆರೆ ವಿಷಯ ಮಂಡಿಸಿದರು. ನಂತರ ರಾಧಾಕೃಷ್ಣ ಉಳಿಯತ್ತಡ್ಕ ಅವರ'ಮೌನ ಬಿಚ್ಚಿದ ಭಾವ'ಕೃತಿ ಬಿಡುಗಡೆ ನಡೆಯಿತು. ಸಹಾಯಕ ಕನ್ನಡ ಪ್ರಾಧ್ಯಾಪಕಿ ಡಾ. ಆಶಾಲತಾ ಚೇವಾರ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ರಘು ಇಡ್ಕಿದು ಕೃತಿ ಬಿಡುಗಡೆಗೊಳಿಸಿದರು. ವನಜಾಕ್ಷಿ ಚಂಬ್ರಕಾನ ಕೃತಿಪರಿಚಯ ನೀಡಿದರು.
ಈ ಸಂದರ್ಭ ನಡೆದ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ರಾಧಾಕೃಷ್ಣ ಉಳಿಯತ್ತಡ್ಕ ಅವರೊಂದಿಗೆ ಅವರ ಬದುಕು ಬರಹದ ಬಗ್ಗೆ ಸಂವಾದ ಮಾತುಕತೆ ನಡೆಯಿತು. ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ ಮೋಡರೆಟರ್ ಆಗಿ ಸಹಕರಿಸಿದರು.


