ಕಾಸರಗೋಡು : ಸಿರಿಬಾಗಿಲು ಸಾಂಸ್ಕøತಿಕ ಪ್ರತಿಷ್ಠಾನದಲ್ಲಿ ರಾಮಾಯಣ ಮಹಾಸಾಚರಣೆ ಅಂಗವಾಗಿ ಯಕ್ಷಗಾನ ತಾಳಮದ್ದಲೆ- ಭಜನೆ -ಪ್ರವಚನ ಕಾರ್ಯಕ್ರಮ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಜರುಗಿತು.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಹಾದಿಗಲ್ಲು ಶ್ರೀ ಅಭಯಲಕ್ಷ್ಮೀನರಸಿಂಹ ದೇವಸ್ಥಾನದ ಧರ್ಮದರ್ಶಿ ಡಾ. ಹಾದಿಗಲ್ಲು ಲಕ್ಷ್ಮೀನಾರಾಯಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕಾಸರಗೋಡು ಪ್ರದೇಶವು ಕರ್ನಾಟಕದ ಅವಿಭಾಜ್ಯ ಅಂಗ ಯಾವುದೋ ಕಾರಣದಿಂದ ಕೇರಳ ಪಾಲಾಗಿದ್ದರೂ, ನಮ್ಮ ಭಾವನೆಗಳಲ್ಲಿ ಕಾಸರಗೋಡು ಕರ್ನಾಟಕದ ಅವಿಭಾಜ್ಯ ಅಂಗವಾಗಿ ಉಳಿದುಕೊಂಡಿದೆ. ಸಾಂಸ್ಕೃತಿಕ ಸಾಹಿತ್ಯ ಕ್ಷೇತ್ರಕ್ಕೆ ಕಾಸರಗೋಡಿನ ಕೊಡುಗೆ ಅಪಾರವಾದುದು. ಕಯ್ಯಾರ ಕಿಞಣ್ಣ ರೈ ಅವರಂತಹ ಕವಿ ಶ್ರೇಷ್ಠರು ಮೆರೆದ ನಾಡು ಇದಾಗಿದೆ. ಈ ನಿಟ್ಟಿನಲ್ಲಿ ಸಿರಿಬಾಗಿಲು ಪ್ರತಿಷ್ಠಾನದ ಸಾಂಸ್ಕೃತಿಕ ಹಾಗೂ ಕನ್ನಡಪರ ಚಟುವಟಿಕೆಗಳು ಶ್ಲಾಘನೀಯ ಎಂದು ತಿಳಿಸಿರು.
ಹುಬ್ಬಳ್ಳಿಯ ಉದ್ಯಮಿ ಗೋವಿಂದ ಭಟ್ ದಿವಾಣ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭ ಮಾತನಾಡಿದ ಅವರು ಕರಾವಳಿಯ ಹೆಮ್ಮೆಯ ಹಾಗೂ ಗಂಡುಮೆಟ್ಟಿನ ಕಲೆ ಯಕ್ಷಗಾನವನ್ನು ಉಳಿಸುವಲ್ಲಿ ನಾವೆಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು. ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮಿನಾರಾಯಣ ಕಾವು ಮಠ, ಸಿರಿಬಾಗಿಲು ರಾಮಕೃಷ್ಣ ಮಯ್ಯ ಮೊದಲಾದವರು ಉಪಸ್ಥಿತರಿದ್ದರು ಡಾಕ್ಟರ್ ಶ್ರುತಕೀರ್ತಿರಾಜ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ಪ್ರಸಿದ್ಧ ಕಲಾವಿದರಿಂದ ಪಾರ್ತಿಸುಬ್ಬ ವಿರಚಿತ ಪಟ್ಟಾಭಿಷೇಕ ಯಕ್ಷಗಾನ ತಾಳಮದ್ದಳೆ, ಶ್ರೀ ಅಯ್ಯಪ್ಪ ಮಹಿಳಾ ಭಜನಾ ಸಂಘ ಬೆದ್ರಡ್ಕ ಇವರಿಂದ ಭಜನೆ, ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಇವರಿಂದ ಪ್ರವಚನ ನಡೆಯಿತು.


