ತಿರುವನಂತಪುರಂ: ರಾಜ್ಯ ಸರ್ಕಾರವು ತನ್ನ ಆರ್ಥಿಕ ಬಿಕ್ಕಟ್ಟನ್ನು ಸಕ್ರಿಯವಾಗಿ ನಿಭಾಯಿಸುತ್ತಿದ್ದು, ವೆಚ್ಚವನ್ನು ಕಡಿತಗೊಳಿಸಲು ಮತ್ತು ತೆರಿಗೆ ಆದಾಯವನ್ನು ಹೆಚ್ಚಿಸಲು ಕ್ರಮಗಳನ್ನು ಜಾರಿಗೊಳಿಸುತ್ತಿದೆ ಎಂದು ಹಣಕಾಸು ಸಚಿವ ಕೆ ಎನ್ ಬಾಲಗೋಪಾಲ್ ಬುಧವಾರ ಹೇಳಿದ್ದಾರೆ. ಈ ಕ್ರಮಗಳಲ್ಲಿ ವಿದೇಶಿ ಪ್ರವಾಸಗಳು, ವಿಮಾನ ಪ್ರಯಾಣ, ದೂರವಾಣಿ ಶುಲ್ಕಗಳು, ಅಧಿಕಾರಿಗಳ ಮರುನಿಯೋಜನೆ, ವಾಹನ ಖರೀದಿಗಳು ಮತ್ತು ಕಟ್ಟಡ ನವೀಕರಣಗಳನ್ನು ನಿರ್ಬಂಧಿಸುವುದು ಮೊದಲಾದವುಗಳು ಸೇರಿವೆ.
ಹಣಕಾಸಿನ ಬಲವರ್ಧನೆಗಾಗಿ ಸರ್ಕಾರವು ಸ್ಪಷ್ಟವಾದ ಮಾರ್ಗಸೂಚಿಯನ್ನು ಹೊಂದಿದೆ. ಆರ್ಥಿಕ ಪರಿಸ್ಥಿತಿಯು ಅಭಿವೃದ್ಧಿ ಮತ್ತು ಕಲ್ಯಾಣ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ನೋಡಿಕೊಳ್ಳಲು ವಿಶೇಷ ಗಮನಹರಿಸಲಾಗುವುದು ಎಂದು ಸಚಿವರು ಹೇಳಿದರು. ಸರ್ಕಾರದ ಆದ್ಯತೆಗಳನ್ನು ಎತ್ತಿ ಹಿಡಿದ ಸಚಿವರು, ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಹೂಡಿಕೆಗಳನ್ನು ಉತ್ತೇಜಿಸಲು ಒತ್ತು ನೀಡಿದರು. ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ತೆರಿಗೆ ಆದಾಯ ಸಂಗ್ರಹದಲ್ಲಿ ಗಮನಾರ್ಹ 50% ಹೆಚ್ಚಳವಾಗಿದೆ ಎಂದು ಅವರು ಗಮನಸೆಳೆದರು.
ರಾಜ್ಯಗಳಿಗೆ ಕಡಿಮೆಯಾದ ಆದಾಯ ಕೊರತೆ ಅನುದಾನ ಮತ್ತು ಜಿಎಸ್‍ಟಿ ಪರಿಹಾರದ ಕೊರತೆಯಿಂದಾಗಿ ಸುಮಾರು 15,000 ಕೋಟಿ ರೂಪಾಯಿಗಳ ಕೊರತೆಗೆ ಕಾರಣವಾದ ತಪ್ಪು ನೀತಿಗಳನ್ನು ಮರೆಮಾಚಿ ಬಾಲಗೋಪಾಲ್ ಕೇಂದ್ರದ ಮೇಲೆ ಜವಾಬ್ದಾರಿಯನ್ನು ಹೊರಿಸಿದ್ದಾರೆ. ಕೇಂದ್ರ ಸರ್ಕಾರವು ಕಠಿಣ ನಿಲುವು ಮತ್ತಷ್ಟು ಬಿಗುಗೊಳಿಸಿದರೆ ರಾಜ್ಯದ ಆರ್ಥಿಕತೆಯು ಗಣನೀಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ರಾಜ್ಯದ ಸಾಲದ ಮಿತಿಯನ್ನು ಹೆಚ್ಚಿಸಲು ಮುಂದುವರಿಯುವುದಿಲ್ಲ ಎಂದಿರುವರು.
ಸಾಲದ ಮಿತಿಯನ್ನು ಶೇ.1ರಷ್ಟು ಹೆಚ್ಚಿಸಬೇಕೆಂಬ ರಾಜ್ಯದ ಮನವಿಯನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ತಿರಸ್ಕರಿಸಿತ್ತು. ಹಿಂದೆ, ರಾಜ್ಯಗಳು ತಮ್ಮ ಜಿಡಿಪಿಯ 5% ವರೆಗೆ ಸಾಲ ಪಡೆಯಲು ಅನುಮತಿಸಲಾಗಿತ್ತು, ಆದಾಗ್ಯೂ, ಇದನ್ನು ನಂತರ 3% ಕ್ಕೆ ಇಳಿಸಲಾಯಿತು. ಕೇರಳ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಫಂಡ್ ಬೋರ್ಡ್ (ಕಿಫ್ಭಿ) ಯಂತಹ ವಿಶೇಷ ಸಂಸ್ಥೆಗಳ ಸಾಲವನ್ನು ರಾಜ್ಯದ ಒಟ್ಟಾರೆ ಸಾಲಕ್ಕೆ ಸೇರಿಸಿದ್ದಕ್ಕೆ ರಾಜ್ಯವು ಕೇಂದ್ರವನ್ನು ಹೊಣೆಗಾರರನ್ನಾಗಿ ಮಾಡಿದೆ.





