HEALTH TIPS

ಐಸಿಸಿಆರ್‌ ಕಾರ್ಯವೈಖರಿ ಅಧ್ಯಯನಕ್ಕೆ ಸಲಹೆ

               ವದೆಹಲಿ: ಜಾಗತಿಕ ಮಟ್ಟದಲ್ಲಿ ಭಾರತದ 'ಸಾಫ್ಟ್‌ ಪವರ್' (ಘರ್ಷಣೆ ಬದಲಿಗೆ ಪ್ರಭಾವ ಬೀರುವ ಕಾರ್ಯತಂತ್ರ) ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಪ್ರಚುರಪಡಿಸುವುದು ಹೇಗೆ ಎಂಬುದರ ಬಗ್ಗೆ ಅಧ್ಯಯನ ನಡೆಸಿ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ.

               ಇದಕ್ಕಾಗಿ ವಿದೇಶಗಳಲ್ಲಿ ಇರುವ ಚೀನಾದ 'ಕನ್ಫೂಷಿಯಸ್‌ ಇನ್‌ಸ್ಟಿಟ್ಯೂಟ್‌'ನ ಕಾರ್ಯವೈಖರಿಯನ್ನು ಅಧ್ಯಯನಕ್ಕೆ ಒಳಪಡಿಸುವಂತೆ ಸಮಿತಿಯು ಶಿಫಾರಸು ಮಾಡಿದೆ.

               ಬೇರೆ ದೇಶಗಳೊಟ್ಟಿಗೆ ಭಾರತದ ಸಾಂಸ್ಕೃತಿಕ ಅನುಸಂಧಾನದ ಹೊಣೆ ಹೊತ್ತಿರುವ 'ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತಿ'ನ (ಐಸಿಸಿಆರ್‌) ಕಾರ್ಯತಂತ್ರ ಬಲಪಡಿಸುವ ಸಂಬಂಧ ಸಂಸದೀಯ ಸಮಿತಿಯು ಇತ್ತೀಚೆಗಷ್ಟೇ ಮುಕ್ತಾಯಗೊಂಡ ಅಧಿವೇಶನದಲ್ಲಿ ಸಲ್ಲಿಸಿದ ವರದಿಯಲ್ಲಿ ಈ ಶಿಫಾರಸುಗಳಿವೆ.

                   ಚೀನಾವು ವಿದೇಶಗಳೊಂದಿಗೆ ತನ್ನ ಸಾಂಸ್ಕೃತಿಕ ಅನುಸಂಧಾನಕ್ಕಾಗಿ ಕನ್ಫೂಷಿಯಸ್‌ ಇನ್‌ಸ್ಟಿಟ್ಯೂಟ್‌ಗಳನ್ನು ತೆರೆದಿದೆ. ಭಾರತದಲ್ಲೂ ಇಂತಹ ಎರಡು ಅಧ್ಯಯನ ಕೇಂದ್ರಗಳಿವೆ. ಕೇಂದ್ರ ಸರ್ಕಾರವು ಬೇರೆ ಬೇರೆ ಕಾರಣಗಳಿಗಾಗಿ ಈ ಅಧ್ಯಯನ ಕೇಂದ್ರಗಳ ಮೇಲೆ ನಿಗಾ ಇರಿಸಿದೆ. ಆದರೆ, ಜಾಗತಿಕ ಮಟ್ಟದಲ್ಲಿ ಚೀನಾದ 'ಸಾಫ್ಟ್‌ ಪವರ್‌' ಅನ್ನು ಪ್ರಚುರಪಡಿಸುವಲ್ಲಿ ಈ ಕನ್ಫೂಷಿಯಸ್‌ ಇನ್‌ಸ್ಟಿಟ್ಯೂಟ್‌ಗಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಐಸಿಸಿಆರ್ ಅನ್ನೂ ಅಷ್ಟೇ ಪ್ರಬಲ ಸಂಸ್ಥೆಯಾಗಿ ರೂಪಿಸುವ ಮತ್ತು ಭಾರತದ ಸಾಫ್ಟ್‌ ಪವರ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಪ್ರಚುರಪಡಿಸುವ ಸಲುವಾಗಿ ಕನ್ಫೂಷಿಯಸ್‌ ಇನ್‌ಸ್ಟಿಟ್ಯೂಟ್‌ಗಳ ಕಾರ್ಯವೈಖರಿಯನ್ನು ಅಧ್ಯಯನಕ್ಕೆ ಒಳಪಡಿಸುವಂತೆ ಸಮಿತಿ ಹೇಳಿದೆ.

                   ಕನ್ಫೂಷಿಯಸ್‌ ಇನ್‌ಸ್ಟಿಟ್ಯೂಟ್‌ ಸೇರಿ ಬ್ರಿಟನ್‌, ಫ್ರಾನ್ಸ್‌, ಅಮೆರಿಕ ಮತ್ತು ಜರ್ಮನಿಯ ಸಾಂಸ್ಕೃತಿಕ ಸಂಬಂಧಗಳ ಸಂಸ್ಥೆಗಳ ಕಾರ್ಯತಂತ್ರಗಳನ್ನು ತುಲನಾತ್ಮಕವಾಗಿ ಅಧ್ಯಯನ ನಡೆಸಲು 'ಅಧ್ಯಯನ ತಂಡ'ವೊಂದನ್ನು ರೂಪಿಸಲು ಸಂಸದೀಯ ಸಮಿತಿ ಶಿಫಾರಸು ಮಾಡಿದೆ.

'ವಿದೇಶಗಳಲ್ಲಿ ಸಾಫ್ಟ್‌ ಪವರ್‌ನ ಪ್ರಚಾರಕ್ಕಾಗಿಯೇ ಚೀನಾವು ವರ್ಷಕ್ಕೆ ಸಾವಿರ ಕೋಟಿ ಡಾಲರ್‌ (ಅಂದಾಜು ₹82 ಸಾವಿರ ಕೋಟಿ) ಅನ್ನು ವ್ಯಯಿಸುತ್ತದೆ. ಆದರೆ, ಭಾರತದಲ್ಲಿ ಈ ಕುರಿತು ₹300- ₹400 ಕೋಟಿ ಹಣವನ್ನು ಮಾತ್ರ ವ್ಯಯಿಸಲಾಗುತ್ತಿದೆ' ಎಂದು ಭಾರತದ ವಿದೇಶಾಂಗ ಸಚಿವಾಲಯವು ಸಂಸದೀಯ ಸಮಿತಿಗೆ ಮಾಹಿತಿ ನೀಡಿದೆ.

                  'ಐಸಿಸಿಆರ್‌ನ ಅನುದಾನವನ್ನು ಕನಿಷ್ಠ ಶೇ 20ರಷ್ಟನ್ನಾದರೂ ಹೆಚ್ಚಿಸಿ' ಎಂದು ಸಂಸದೀಯ ಸಮಿತಿಯ ಅಧ್ಯಕ್ಷ ಬಿಜೆಪಿ ಸಂಸದ ಪಿ.ಪಿ. ಚೌದರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries