ಇಂಫಾಲ: ಆಗಸ್ಟ್ 21 ರಿಂದ ವಿಧಾನಸಭೆ ಅಧಿವೇಶನ ಕರೆಯುವಂತೆ ಮಣಿಪುರ ರಾಜ್ಯ ಸಚಿವ ಸಂಪುಟವು ಶುಕ್ರವಾರ ರಾಜ್ಯಪಾಲೆ ಅನುಸೂಯಾ ಅವರಿಗೆ ಶಿಫಾರಸು ಮಾಡಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
0
samarasasudhi
ಆಗಸ್ಟ್ 05, 2023
ಇಂಫಾಲ: ಆಗಸ್ಟ್ 21 ರಿಂದ ವಿಧಾನಸಭೆ ಅಧಿವೇಶನ ಕರೆಯುವಂತೆ ಮಣಿಪುರ ರಾಜ್ಯ ಸಚಿವ ಸಂಪುಟವು ಶುಕ್ರವಾರ ರಾಜ್ಯಪಾಲೆ ಅನುಸೂಯಾ ಅವರಿಗೆ ಶಿಫಾರಸು ಮಾಡಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಮಣಿಪುರದಲ್ಲಿ ಮಾರ್ಚ್‌ನಲ್ಲಿ ಹಿಂದಿನ ವಿಧಾನಸಭೆ ಅಧಿವೇಶನ ನಡೆದಿದ್ದು, ಮೇ ತಿಂಗಳಿನಿಂದ ಹಿಂಸಾಚಾರ ಪ್ರಾರಂಭಗೊಂಡಿತ್ತು. ಆ ಬಳಿಕ ಅಧಿವೇಶನ ನಡೆದಿರಲಿಲ್ಲ.
ಈ ನಡುವೆ ರಾಜ್ಯದಲ್ಲಿ ನಡೆಯುತ್ತಿರುವ ಭಾರಿ ಪ್ರಕ್ಷುಬ್ಧತೆಯ ಬಗ್ಗೆ ಚರ್ಚಿಸಲು ವಿಧಾನಸಭೆ ತುರ್ತು ಅಧಿವೇಶನವನ್ನು ಕರೆಯುವಂತೆ ರಾಜ್ಯಪಾಲರನ್ನು ಕಾಂಗ್ರೆಸ್ ಒತ್ತಾಯಿಸಿದೆ.
'ಮೇ ಆರಂಭದಿಂದಲೂ ಜನಾಂಗೀಯ ಕಲಹದಿಂದ ತತ್ತರಿಸಿರುವ ರಾಜ್ಯದಲ್ಲಿ ಶಾಂತಿಯನ್ನು ಮರುಸ್ಥಾಪಿಸುವುದು ಹೇಗೆ ಎಂಬುದರ ಕುರಿತು ಪರಿಸ್ಥಿತಿಯನ್ನು ಚರ್ಚಿಸಲು ಮತ್ತು ಸಲಹೆಗಳನ್ನು ಪಡೆಯಲು ವಿಧಾನಸಭೆಯು ಅತ್ಯಂತ ಸೂಕ್ತವಾದ ವೇದಿಕೆಯಾಗಿದೆ' ಎಂದು ರಾಜ್ಯದ ಐವರು ಕಾಂಗ್ರೆಸ್ ಶಾಸಕರು ಕಳೆದ ತಿಂಗಳು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಕುಕಿ ಸಮುದಾಯದ ಹಲವಾರು ಶಾಸಕರು ತಮ್ಮ ಪ್ರದೇಶಗಳಿಗೆ ಪ್ರತ್ಯೇಕ ಆಡಳಿತಕ್ಕಾಗಿ ಒತ್ತಾಯಿಸಿದ್ದಾರೆ.
ಮೇ ತಿಂಗಳಲ್ಲಿ ಮಣಿಪುರದಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರವು ಮೂರು ತಿಂಗಳಾದರೂ ನಿಂತಿಲ್ಲ. ಹಿಂಸಾಚಾರದಲ್ಲಿ 160ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು, 60 ಸಾವಿರಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆ.