ಕಾಸರಗೋಡು: ಗಣಪತಿ ದೇವರ ಬಗ್ಗೆ ಕೆರಳದ ವಿಧಾನಸಭಾ ಸ್ಪೀಕರ್ ಎ.ಎನ್. ಶಂಸೀರ್ ನೀಡಿರುವ ಅವಹೇಳನಕಾರಿ ಹೇಳಿಕೆ ವಿರುದ್ಧ ಕೇರಳಾದ್ಯಂತ ಪ್ರತಿಭಟನೆ ವ್ಯಕ್ತವಾಗಿದೆ. ಒಂದೆಡೆ ಕೇರಳದ ಪ್ರಮುಖ ಸಮುದಾಯ ಸಂಘಟನೆ ನಾಯರ್ಸ್ ಸರ್ವೀಸ್ ಸೊಸೈಟಿ(ಎನ್ನೆಸ್ಸೆಸ್) ಕರೆನೀಡಿರುವ ಆಚಾರ ಸಂರಕ್ಷಣಾ ದಿನದ ಅಂಗವಾಗಿ ರಾಜ್ಯಾದ್ಯಂತ ಗಣಪತಿ ದೇಗುಲಗಳಲ್ಲಿ ವಿಶೇಷ ಪೂಜೆ, ಬಲಿವಾಡು ಸೇವೆ ನಡೆಸಲಾಯಿತು. ಇನ್ನೊಂದೆಡೆ ನಾಮಜಪ ಸಂಕೀರ್ತನೆಯೂ ನಡೆಯಿತು. ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಯುವತಿಯರ ಪ್ರವೇಶ ವಿಚಾರದಲ್ಲಿ ಎಡರಂಗ ಸರ್ಕಾರ ಕೈಗೊಂಡ ತೀರ್ಮಾನದ ವಿರುದ್ಧ ನಡೆದ ಅದೇ ರೀತಿಯ ಹೋರಾಟಕ್ಕೆ ಸ್ಪೀಕರ್ ಎ.ಎನ್. ಶಂಸೀರ್ ನೀಡಿರುವ ಹೇಳಿಕೆಯೂ ಸಾಕ್ಷಿಯಾಗಿದೆ.
ಕಾಸರಗೋಡಿನಲ್ಲಿ ಪ್ರತಿಭಟನೆ:
ನಂಬಿಕೆ ಸಂರಕ್ಷಣಾ ದಿನದ ಅಂಗವಾಗಿ ಎನ್.ಎಸ್.ಎಸ್ ಕಾಸರಗೋಡು ತಾಲೂಕು ಯೂನಿಯನ್ ವತಿಯಿಂದ ಮಧೂರು ಶ್ರೀ ಮದನಂತೇಶ್ವರ ಸಇದ್ಧಿವಿನಾಯಕ ದೇವಸ್ಥಾನದಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಒಕ್ಕೂಟ ಅಧ್ಯಕ್ಷ ವಕೀಲ ಎ.ಬಾಲಕೃಷ್ಣನ್ ನಾಯರ್ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಒಕ್ಕೂಟದ ಉಪಾಧ್ಯಕ್ಷ ಸಿ. ಬಾಸ್ಕರನ್ ನಾಯರ್, ಕಾರ್ಯದರ್ಶಿ ಯು. ರಾಜಗೋಪಾಲ್, ತಾಲೂಕು ಯೂನಿಯನ್ ಸಮಿತಿ ಸದಸ್ಯರಾದ ಎ ಬಾಲಕೃಷ್ಣನ್ ನಾಯರ್, ಎ.ದಾಮೋದರನ್ ನಾಯರ್, ಮೇಲ್ಬರಂಬ ಕರಯೋಗಂ ಅಧ್ಯಕ್ಷ ಪಿ ಗೋಪಾಲನ್ ನಾಯರ್., ವನಿತಾ ಸಮಾಜದ ಅಧ್ಯಕ್ಷೆ ಸರಸ್ವತಿ ಟೀಚರ್, ಮಧುರ್ ಕರಯೋಗಂ ಜಂಟಿ ಕಾರ್ಯದರ್ಶಿ ಮೋಹನನ್ ನಾಯರ್ ಭಾಗವಹಿಸಿದ್ದರು.
ಸ್ಪೀಕರ್ ಹೇಳಿಕೆ ವಿರುದ್ದ ಆಗಸ್ಟ್ 2ರಂದು ರಾಜ್ಯಾದ್ಯಂತ ಆಚಾರ ಸಂರಕ್ಷಣಾ ದಿನವನ್ನಾಗಿ ಆಚರಿಸುವಂತೆ ಸಂಘಟನೆಯ ಎಲ್ಲ ತಾಲೂಕು ಘಟಕಗಳಿಗೆ ಕಳುಹಿಸಿದ ಸುತ್ತೋಲೆಯಲ್ಲಿ ಎನ್.ಎಸ್.ಎಸ್ ಕರೆ ನೀಡಿತ್ತು. ಂದೂಗಳ ದೈವ ವಿಶ್ವಾಸಕ್ಕೆ ಧಕ್ಕೆಯುಂಟುಮಾಡುವ ರೀತಿಯಲ್ಲಿ ಸ್ಪೀಕರ್ ವರ್ತಿಸಿದ್ದಾರೆ. ಇವರು ಸಭಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಅರ್ಹರಲ್ಲ. ತಮ್ಮ ಹೇಳಿಕೆ ಹಿಂದಕ್ಕೆ ಪಡೆದು, ಈ ಬಗ್ಗೆ ಕ್ಷಮೆ ಕೇಳುವಂತೆ ಎನ್ನೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಜಿ. ಸುಕುಮಾರನ್ ನಾಯರ್ ಇತ್ತೀಚೆಗೆ ಹೇಳಿಕೆ ಬಿಡುಗಡೆಮಾಡಿದ್ದರು. ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ, ಸರ್ಕಾರ ನಿರ್ಲಕ್ಷಿಸಿತ್ತು. ಈ ನಿಟ್ಟಿನಲ್ಲಿ ಬಹಿರಂಗ ಆಹ್ವಾನ ನೀಡಿ, ಶಂಸೀರ್ ಹೇಳಿಕೆ ವಿರುದ್ಧ ಗಣಪತಿ ದೇಗುಲಗಳಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಸುಚಿಸಲಾಗಿದೆ. ಪ್ರಜಾಪ್ರಭುತ್ವದ ದೇಗುಲವಾಗಿರುವ ವಿಧಾನಸಭೆಯನ್ನು ಮುನ್ನಡೆಸಲು ಇಂತಹ ವ್ಯಕ್ತಿಗಳು ಅರ್ಹರಲ್ಲ. ಸ್ಪೀಕರ್ ಹೇಳಿಕೆ ಎಲ್ಲೆ ಮೀರಿದ್ದಾಗಿದ್ದು, ಯಾವುದೇ ವ್ಯಕ್ತಿಗೆ ಇನ್ನೊಂದು ಧರ್ಮದ ಆಚಾರ ಪ್ರಶ್ನಿಸುವ ಅವಕಾಶವಿಲ್ಲ. ಈ ಹೇಳಿಕೆ ಅಂಗೀಕರಿಸಲು ಸಾಧ್ಯವಿಲ್ಲ ಎಂದೂ ಸುಕುಮಾರನ್ ನಾಯರ್ ತಿಳಿಸಿದ್ದಾರೆ.
ಶಂಸೀರ್‍ಗೆ ಸಿಪಿಎಂ ಬೆಂಬಲ:
ಈ ಮಧ್ಯೆ ಸ್ಪೀಕರ್ ಶಂಸೀರ್ ನೀಡಿರುವ ವಿವಾದಾಸ್ಪದ ಹೇಳಿಕೆಯನ್ನು ಸಿಪಿಎಂ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ವಿ ಗೋವಿಂದನ್ ನ್ಯಾಯೀಕರಿಸಿದ್ದಾರೆ. ಸ್ಪೀಕರ್ ಎ.ಎನ್ ಶಂಸೀರ್ ನೀಡಿರುವ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಹೇಳಿಕೆ ವಿಚಾರದಲ್ಲಿ ಯವುದೇ ಕ್ಷಮಾಪಣೆ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಹಿಂದೂಗಳ ಆರಾಧ್ಯ ದೇವರಾದ ಗಣಪತಿಯ ಅವಹೇಳನದ ಕುರಿತು ಸಿಪಿಎಂ ಪಕ್ಷದ ನಿಲುವು ವ್ಯಕ್ತಪಡಿಸಿದ್ದಾರೆ.





