ನವದೆಹಲಿ (PTI): ಅಂತರ್ಜಲ ಬಳಕೆಗೆ ಸಂಬಂಧಿಸಿದಂತೆ ಭಾರತದ ರೈತರ ಧೋರಣೆಯು ಇದೇ ರೀತಿ ಮುಂದುವರಿದರೆ 2080ರ ವೇಳೆಗೆ ದೇಶದಲ್ಲಿ ಸದ್ಯದ ಸ್ಥಿತಿಗಿಂತಲೂ ಅಂತರ್ಜಲ ಮಟ್ಟವು ಮೂರು ಪಟ್ಟು ಕುಸಿಯಲಿದೆ. ಇದು ಆಹಾರ ಹಾಗೂ ನೀರಿನ ಅಭಾವ ಸೃಷ್ಟಿಗೂ ಕಾರಣವಾಗಲಿದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.
0
samarasasudhi
ಸೆಪ್ಟೆಂಬರ್ 03, 2023
ನವದೆಹಲಿ (PTI): ಅಂತರ್ಜಲ ಬಳಕೆಗೆ ಸಂಬಂಧಿಸಿದಂತೆ ಭಾರತದ ರೈತರ ಧೋರಣೆಯು ಇದೇ ರೀತಿ ಮುಂದುವರಿದರೆ 2080ರ ವೇಳೆಗೆ ದೇಶದಲ್ಲಿ ಸದ್ಯದ ಸ್ಥಿತಿಗಿಂತಲೂ ಅಂತರ್ಜಲ ಮಟ್ಟವು ಮೂರು ಪಟ್ಟು ಕುಸಿಯಲಿದೆ. ಇದು ಆಹಾರ ಹಾಗೂ ನೀರಿನ ಅಭಾವ ಸೃಷ್ಟಿಗೂ ಕಾರಣವಾಗಲಿದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.
ತಾಪಮಾನ ಹೆಚ್ಚಳದಿಂದ ನೀರಾವರಿ ಉದ್ದೇಶಕ್ಕಾಗಿ ರೈತರು ಅತಿಯಾಗಿ ಅಂತರ್ಜಲವನ್ನು ಬಳಕೆ ಮಾಡುತ್ತಿದ್ದಾರೆ ಎಂದು 'ಸೈನ್ಸ್ ಅಡ್ವಾನ್ಸ್' ಜರ್ನಲ್‌ನಲ್ಲಿ ಪ್ರಕಟವಾಗಿರುವ ಅಮೆರಿಕದ ಮಿಚಿಗನ್ ವಿಶ್ವವಿದ್ಯಾಲಯದ ವರದಿಯಲ್ಲಿ ಹೇಳಲಾಗಿದೆ.
ನೀರಿನ ಕೊರತೆಯು ಜನರ ಜೀವನೋಪಾಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಭವಿಷ್ಯದಲ್ಲಿ ದೇಶದ ಒಟ್ಟು ಜನಸಂಖ್ಯೆಯ ಮೂರನೇ ಒಂದರಷ್ಟು ನಿವಾಸಿಗಳು ತೊಂದರೆಗೆ ಸಿಲುಕಲಿದ್ದಾರೆ. ಅಲ್ಲದೇ, ಇದರ ಪರಿಣಾಮವು ಜಾಗತಿಕವಾಗಿಯೂ ತಟ್ಟಲಿದೆ ಎಂದು ವಿವರಿಸಿದೆ.
'ಭಾರತವು ವಿಶ್ವದಲ್ಲಿಯೇ ಅತಿದೊಡ್ಡ ಅಂತರ್ಜಲ ಬಳಕೆದಾರ ದೇಶವಾಗಿದೆ. ಪ್ರಾದೇಶಿಕ ಹಾಗೂ ಜಾಗತಿಕ ಆಹಾರ ಪೂರೈಕೆಗೆ ಅಂತರ್ಜಲವು ಬಹುಮುಖ್ಯ ಸಂಪನ್ಮೂಲವಾಗಿದೆ' ಎಂದು ಹಿರಿಯ ಲೇಖಕ ಮೇಹಾ ಜೈನ್ ಹೇಳಿದ್ದಾರೆ.
ನೀರಿನ ಬಳಕೆಯಲ್ಲಿನ ಬದಲಾವಣೆ, ಅಂತರ್ಜಲ ಮಟ್ಟ, ಹವಾಮಾನ ಸೇರಿದಂತೆ ಭವಿಷ್ಯದಲ್ಲಿ ಕೃಷಿ ಕ್ಷೇತ್ರದಲ್ಲಿ ಫಸಲು ಬೆಳೆಯಲು ಅಗತ್ಯವಿರುವ ನೀರಿನ ಲಭ್ಯತೆ ಕುರಿತು ವರದಿಯಲ್ಲಿ ವಿಶ್ಲೇಷಿಸಲಾಗಿದೆ.
'ನಾವು ಸಂಶೋಧನೆಯ ಅಂದಾಜಿಗೆ ಬಳಸಿರುವ ಮಾದರಿಗಳ ಅನ್ವಯ ತಾಪಮಾನ ಹೆಚ್ಚಳದಿಂದ ಭವಿಷ್ಯದಲ್ಲಿ ಅಂತರ್ಜಲ ಮಟ್ಟ ಕುಸಿತವಾಗಲಿದೆ. ಅದರಲ್ಲೂ ದಕ್ಷಿಣ ಮತ್ತು ಮಧ್ಯ ಭಾರತದಲ್ಲಿ ಹೆಚ್ಚಿನ ಸಮಸ್ಯೆ ಸೃಷ್ಟಿಯಾಗಲಿದೆ' ಎಂದು ಮುಖ್ಯ ಲೇಖಕ ನಿಶಾನ್ ಭಟ್ಟರೈ ಹೇಳಿದ್ದಾರೆ.
ಭಾರತದಲ್ಲಿ ಮುಂದಿನ ದಶಕಗಳಲ್ಲಿ ಹವಾಮಾನ ವೈಪರೀತ್ಯವೂ ಹೆಚ್ಚಲಿದೆ. ಉಷ್ಣಾ೦ಶ ಹೆಚ್ಚಳವಾಗಲಿದೆ. ಜೂನ್‌ನಿಂದ ಸೆಪ್ಟೆಂಬರ್ ನಡುವೆ ಮುಂಗಾರು ಮಳೆ ಹೆಚ್ಚು ಸುರಿಸಿದರೆ, ಹಿಂಗಾರು ಅವಧಿಯಲ್ಲಿ ಮಳೆ ಕಡಿಮೆಯಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ.