ನವದೆಹಲಿ: ಸ್ಮಾರಕಗಳ ರಕ್ಷಣೆಗಾಗಿ ಕಾರ್ಪೊರೇಟ್ ಭಾಗಿದಾರರ ಸಹಭಾಗಿತ್ವ ಪಡೆಯುವ ಉದ್ದೇಶದಿಂದ ಭಾರತೀಯ ಪುರಾತತ್ವ ಇಲಾಖೆಯು (ಎಎಸ್‌ಐ) ಸೋಮವಾರ 'ಅಡಾಪ್ಟ್ ಎ ಹೆರಿಟೇಜ್ 2.0' ಆಯಪ್ ಬಿಡುಗಡೆ ಮಾಡಿದೆ.
0
samarasasudhi
ಸೆಪ್ಟೆಂಬರ್ 05, 2023
ನವದೆಹಲಿ: ಸ್ಮಾರಕಗಳ ರಕ್ಷಣೆಗಾಗಿ ಕಾರ್ಪೊರೇಟ್ ಭಾಗಿದಾರರ ಸಹಭಾಗಿತ್ವ ಪಡೆಯುವ ಉದ್ದೇಶದಿಂದ ಭಾರತೀಯ ಪುರಾತತ್ವ ಇಲಾಖೆಯು (ಎಎಸ್‌ಐ) ಸೋಮವಾರ 'ಅಡಾಪ್ಟ್ ಎ ಹೆರಿಟೇಜ್ 2.0' ಆಯಪ್ ಬಿಡುಗಡೆ ಮಾಡಿದೆ.
'ಇಂಡಿಯನ್ ಹೆರಿಟೇಜ್' ಹೆಸರಿನ ಬಳಕೆದಾರರ ಸ್ನೇಹಿಯಾಗಿರುವ ಈ ಮೊಬೈಲ್ ಆಯಪ್ ದೇಶದ ವಿವಿಧ ಐತಿಹಾಸಿಕ ಸ್ಮಾರಕಗಳ ವಿವರಗಳನ್ನು ಒಳಗೊಂಡಿದೆ.ಎಎಸ್‌ಐ ಪರಿಮಿತಿಯಲ್ಲಿ ದೇಶದಾದ್ಯಂತ 3,697 ಸ್ಮಾರಕಗಳಿವೆ.
ಈ ಸ್ಮಾರಕಗಳು ದೇಶದ ಶ್ರೀಮಂತ, ಸಾಂಸ್ಕೃತಿಕ ಪರಂಪರೆಯ ಅಭಿವ್ಯಕ್ತಿಯಾಗಿವೆ. ಜೊತೆಗೆ ದೇಶದ ಆರ್ಥಿಕತೆ ಪ್ರಗತಿಯನ್ನು ಬಿಂಬಿಸುವಲ್ಲಿಯೂ ಗಣನೀಯ ಪಾತ್ರವಹಿಸಲಿವೆ ಎಂದು ಸಂಸ್ಕೃತಿ ಸಚಿವಾಲಯವು ತಿಳಿಸಿದೆ.
ಮೊಬೈಲ್ ಆಯಪ್ ಬಿಡುಗಡೆ ಕಾರ್ಯಕ್ರಮದಲ್ಲಿ ವರ್ಚುಯಲ್ ಸ್ವರೂಪದಲ್ಲಿ ಭಾಗವಹಿಸಿದ್ದ ಕೇಂದ್ರ ಪ್ರವಾಸೋದ್ಯಮ ಸಚಿವ ಜಿ.ಕಿಷನ್ ರೆಡ್ಡಿ ಅವರು, ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಭಾಗಿದಾರರು ಮುಂದೆ ಬರಬೇಕು ಎಂದು ಕೋರಿದರು.
'ಅಡಾಪ್ಟ್ ಹೆರಿಟೇಜ್ 2.0' ಕಾರ್ಪೊರೇಟ್ ಭಾಗಿದಾರರ ಜೊತೆಗೆ ಸಹಭಾಗಿತ್ವ ಹೊಂದಲು ಒತ್ತು ನೀಡಲಿದೆ. ಸ್ಮಾರಕಗಳನ್ನು ಮುಂದಿನ ಪೀಳಿಗೆಗೆ ಉಳಿಸಲು ದತ್ತು ಪಡೆಯುವ ಮೂಲಕ ನೆರವಾಗಬಹುದಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಇದು, 2017ರಲ್ಲಿ ಪ್ರಕಟಿಸಿದ್ದ ಯೋಜನೆಯ ಪರಿಷ್ಕೃತ ರೂಪವಾಗಿದೆ. ಕಾರ್ಪೊರೇಟ್ ಸಂಸ್ಥೆಗಳ ಸಿಎಸ್‌ಆರ್ ನಿಧಿ ಬಳಸಿ ಸೌಲಭ್ಯ ಉತ್ತಮಪಡಿಸುವುದು ಇದರ ಉದ್ದೇಶವಾಗಿದೆ. ಕಾಯ್ದೆಯ ಅನುಸಾರ ಭಿನ್ನ ಸ್ಮಾರಕಗಳ ರಕ್ಷಣೆಗೆ ಬೇಕಾದ ಅಂಶಗಳನ್ನೂ ಉಲ್ಲೇಖಿಸಲಿದೆ.
ಸ್ಮಾರಕಗಳ ದತ್ತು ಪ್ರಕ್ರಿಯೆಯ ವಿವಿಧ ಮಾಹಿತಿಯನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.