ದಿನದಲ್ಲಿ 8 ಗಂಟೆಗಳ ಕಾಲ ನಿದ್ದೆ ಆಗಿದ್ದರೂ, ರಾತ್ರಿ ಪೂರ್ತಿ ಚೆನ್ನಾಗಿ ನಿದ್ದೆ ಮಾಡಿ ಬೆಳಿಗ್ಗೆ ಆರಾಮಾಗಿ ಎದ್ದಿದ್ರೂ, ಆಗಾಗ ಆಕಳಿಕೆ ಬಂದು ದಿನವಿಡೀ ಬೇಸರ ಎನಿಸುತ್ತಾ? ಅಥವಾ ಕೆಲಸ ಮಾಡುವ ಸ್ಥಳದಲ್ಲಿ ಬೇರೆಯವರ ಜೊತೆಗೆ ಮಾತನಾಡುವ ಸ್ಥಳದಲ್ಲಿ ಆಗಾಗ ಬರುವ ಆಕಳಿಕೆ ಮುಜುಗರ ಉಂಟು ಮಾಡುತ್ತಿದ್ದೀಯಾ? ನೀವು ಅತಿಯಾಗಿ ಆಕಳಿಸಿದರೆ ಬೇರೆಯವರಿಗೆ ತಪ್ಪಾಗಿ ಅರ್ಥವಾಗಬಹುದು.
ರಾತ್ರಿ ಇಡೀ ನಿದ್ದೆ ಮಾಡಿಲ್ವೇನೋ ಎಂದೇ ಭಾವಿಸಬಹುದು ಆದರೆ ಆಕಳಿಕೆ ಹೀಗೆ ಪದೇ ಪದೇ ಬರುವುದಕ್ಕೆ ನಿದ್ರೆ ಆಗದೇ ಇರುವುದು ಮಾತ್ರ ಕಾರಣವಲ್ಲ. ಹಾಗಾದ್ರೆ ಆಕಳಿಕೆ ನಿರಂತರವಾಗಿ ಬರುವುದಕ್ಕೆ ಕಾರಣ ಏನು? ಇದರಿಂದ ಮುಂದೆ ಆರೋಗ್ಯಕ್ಕೆ ಏನಾದರೂ ಸಮಸ್ಯೆ ಆಗಬಹುದಾ? ಇಲ್ಲಿದೆ ಉತ್ತರ.
ನಿದ್ದೆ ಬಾರದೇ ಇದ್ದಾಗ ಅಥವಾ ನಿದ್ದೆ ಸರಿಯಾಗಿ ಆಗದೆ ಇದ್ದಾಗ ಆಕಳಿಕೆ ಬರುವುದು ಸಹಜ. ಆದಾಗ್ಯೂ ನಿದ್ದೆ ಸರಿಯಾಗಿ ಆಗಿದ್ದು ಆಗಾಗ ಆಕಳಿಕೆ ಬಂದರೆ ಅದಕ್ಕೆ ತೀವ್ರವಾಗಿರುವ ಆಯಾಸ ಒತ್ತಡ ಅಥವಾ ನೀವು ಯಾವುದಾದರೂ ಕಾಯಿಲೆಗೆ ಸೇವಿಸುವ ಔಷಧ ಮೊದಲಾದವು ಕಾರಣವಾಗಿರಬಹುದು. ಕೇವಲ ದೈಹಿಕವಾಗಿ ದಣಿದಾಗ ಮಾತ್ರವಲ್ಲ ಮಾನಸಿಕವಾಗಿ ದಣಿದಾಗಲೂ ಕೂಡ ಮತ್ತೆ ಮತ್ತೆ ಆಕಳಿಕೆ ಬರುವುದು ಸಹಜ. ಇದೇನು ಕಾಯಿಲೆ ಅಲ್ಲ ಹಾಗಾಗಿ ಚಿಂತಿಸಬೇಕಿಲ್ಲ ಆದರೂ ಬೇರೆಯವರ ಎದುರಿಗೆ ಈ ರೀತಿ ಆಗಾಗ ಆಕಳಿಕೆ ಬಂದರೆ ಮುಜುಗರ ಆಗುತ್ತೆ. ಇದನ್ನು ತಪ್ಪಿಸಲು ಇಲ್ಲಿದೆ ಕೆಲವು ತ್ವರಿತ ಪರಿಹಾರ.
ನಿರಂತರ ಆಕಳಿಕೆ ನಿಲ್ಲಿಸುವುದು ಹೇಗೆ
ತಂಪು ಪಾನೀಯ ಸೇವನೆ
ನಿರಂತರವಾಗಿ ಆಕಳಿಕೆ ಬರುತ್ತಿದ್ದರೆ ತಂಪಾದ ಪಾನೀಯ ಸೇವನೆ ಮಾಡುವುದು ಅತ್ಯಂತ ಒಳ್ಳೆಯದು ಅದರಲ್ಲೂ ನಿಮಗೆ ಶೀತ ಆಗುವ ಗುಣ ಲಕ್ಷಣ ಇಲ್ಲದೆ ಇದ್ದರೆ ನೀವು ತಂಪಾಗಿರುವ ಪಾನೀಯವನ್ನು ಸೇವಿಸಬಹುದು. ಒಂದು ವೇಳೆ ಕೋಲ್ಡ್ ಪಾನೀಯ ಕುಡಿದರೆ ಆರೋಗ್ಯ ಹದಗೆಡುತ್ತದೆ ಎನ್ನುವಂತಿದ್ದರೆ ತಾಜಾ ಹಣ್ಣಿನ ರಸವನ್ನು ಸೇವನೆ ಮಾಡಿ ಇದರಿಂದ ತಕ್ಷಣ ಆಕಳಿಕೆ ನಿಲ್ಲುತ್ತದೆ. ಜೊತೆಗೆ ದೇಹದಲ್ಲಿ ಆಗಿರುವ ಸುಸ್ತು ಕೂಡ ಕಡಿಮೆಯಾಗುತ್ತದೆ. ಇದರ ಜೊತೆಗೆ ನೀವು ಹಣ್ಣನ್ನು ಕೂಡ ಸೇವಿಸಬಹುದು, ಐಸ್ ಟಿ, ಕೋಲ್ಡ್ ಕಾಫಿ, ಅಥವಾ ಬಿಸಿ ಚಹಾ ಕೂಡ ನಿಮ್ಮ ಈ ಸಮಸ್ಯೆಗೆ ತಕ್ಷಣವೇ ಪರಿಹಾರ ನೀಡುತ್ತದೆ.
ಧೀರ್ಘವಾದ ಉಸಿರಾಟ:
ಇನ್ನು ಕೆಲವೊಮ್ಮೆ ಆಗಾಗ ಆಕಳಿಕೆ ಬರುವುದಕ್ಕೆ ಉಸಿರಾಟದ ಸಮಸ್ಯೆ ಕೂಡ ಕಾರಣವಾಗಿರುತ್ತದೆ ಹಾಗಾಗಿ ನೀವು ಸ್ವಚ್ಛಂದವಾದ ಆಮ್ಲಜನಕ ಸೇವನೆ ಮಾಡಬೇಕು. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ. ದೀರ್ಘವಾಗಿ ಉಸಿರನ್ನು ಒಳಗೆ ಎಳೆದುಕೊಂಡು ಹೊರಗೆ ಬಿಡಬೇಕು. ಬಾಯನ್ನು ತೆರೆದು ಈ ರೀತಿ ಉಸಿರಾಟದ ಪ್ರಕ್ರಿಯೆ ನಡೆಸಿದಾಗ ರಕ್ತ ಪರಿಚಲನೆ ಕೂಡ ಸರಿಯಾಗಿ ಆಗುತ್ತದೆ. ಉಸಿರಾಟವು ಕೂಡ ಸರಾಗವಾಗಿ ಆಗುವುದರಿಂದ ಜೀವಕೋಶಗಳಿಗೆ ಆಮ್ಲಜನಕದ ಪೂರೈಕೆಯಾಗುತ್ತದೆ. ಇದರಿಂದ ದೇಹದಲ್ಲಿರುವ ಆಯಾಸವು ಕಡಿಮೆಯಾಗಿ ಉಸಿರಾಟ ಸರಿಯಾಗಿ ಆಗುತ್ತದೆ. ಜೊತೆಗೆ ಆಕಳಿಕೆ ಕೂಡ ನಿಂತು ಹೋಗುತ್ತದೆ.
ಆಕಳಿಕೆಯೇ ಮರೆತು ಹೋಗಬೇಕು
ಇನ್ನು ಹೀಗೆ ಆಕಳಿಕೆ ಬರುತ್ತಲೇ ಇದ್ದರೆ ಏನು ಬೇಡ ಎನ್ನುವಂತಹ ಫೀಲಿಂಗ್ ಶುರುವಾಗಬಹುದು. ದೇಹದಲ್ಲಿ ಸೋಮಾರಿತನ ಉಂಟಾಗಬಹುದು. ಹೀಗಾದಾಗ ನೀವು ತಕ್ಷಣ ಯಾರೊಂದಿಗಾದರೂ ಚೆನ್ನಾಗಿ ಮಾತನಾಡುವುದು, ಜೋಕ್ ಗಳನ್ನು ಕೇಳಿ ಅಥವಾ ಹೇಳಿ ನಗುವುದು ಇತರರನ್ನು ನಗುಸುವುದು ಮಾಡಬೇಕು. ಕೊನೆ ಪಕ್ಷ ಆನ್ಲೈನ್ ನಲ್ಲಿ ಉತ್ತಮವಾಗಿರುವ, ನಿಮಗೆ ಇಷ್ಟವಾಗುವ ಜೋಕ್ ಅಥವಾ ಸಿನಿಮಾ ನೋಡಿ. ಈ ಟ್ರಿಕ್ ಫಾಲೋ ಮಾಡಿದ್ರೆ ತಕ್ಷಣಕ್ಕೆ ಆಕಳಿಕೆ ಬರುವುದು ನಿಂತು ಹೋಗುತ್ತದೆ. ಏನಾದ್ರೂ ಆಸಕ್ತಿದಾಯಕ ಕೆಲಸವನ್ನು ಮಾಡಬೇಕು ಆಕಳಿಕೆ ಬರುತ್ತಿರುವ ವಿಷಯವೇ ನಿಮಗೆ ಮರೆತು ಹೋಗುತ್ತದೆ ಹಾಗೂ ನೀವು ನಿಮಗೆ ಇಷ್ಟವಾದ ಕೆಲಸ ಮಾಡುವುದರಲ್ಲಿ ತಲ್ಲೀನರಾಗುತ್ತೀರಿ.
ಒಂದು ವಾಕ್ ಹೋಗಿ ಬಂದರೆ ಚಂದ
ಪದೇ ಪದೇ ಆಕಳಿಕೆ ಬರುತ್ತಿದ್ದರೆ ದೇಹದಲ್ಲಿ ಸುಸ್ತು ಅಥವಾ ದಣಿವು ಇನ್ನಷ್ಟು ಜಾಸ್ತಿಯಾಗುತ್ತದೆ. ದೇಹದಲ್ಲಿ ಜಡತ್ವ ಉಂಟಾಗುತ್ತದೆ. ದೈಹಿಕವಾಗಿ ನೀವು ನಿಮ್ಮನ್ನು ಸಕ್ರಿಯವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಆದ್ದರಿಂದ ಕುಳಿತ ಜಾಗದಲ್ಲಿಯೇ ಕುಳಿತುಕೊಂಡು ಇರುವುದರ ಬದಲು ಒಂದು ವಾಕ್ ಹೋಗಿ. ಇದರಿಂದ ಹೊರಗಿನ ವಾತಾವರಣಕ್ಕೆ ಮನಸ್ಸು ತೆರೆದುಕೊಳ್ಳುತ್ತದೆ. ಮನಸ್ಸು ಕೂಡ ಆಹ್ಲಾದಗೊಳ್ಳುತ್ತದೆ. ಹೀಗೆ ಮಾಡಿದರೆ ಮತ್ತೆ ಮತ್ತೆ ಆಕಳಿಕೆ ಬರುವಂತಹ ಪ್ರಮಯವೇ ಇರುವುದಿಲ್ಲ.
ನೇರವಾಗಿ ಕುಳಿತುಕೊಳ್ಳುವುದು
ನಮಗೆ ಆಯಾಸ ಎನಿಸುವುದು ನಾವು ಕುಳಿತುಕೊಳ್ಳುವ ಬಂಗಿಯಿಂದಾಗಿಯೂ ಕೂಡ. ಹಾಗಾಗಿ ನೀವು ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುವುದಾದರೆ ಆಗಾಗ ನಿಮ್ಮ ಭಂಗಿಯನ್ನು ಬದಲಾಯಿಸಬೇಕು ಜೊತೆಗೆ ಮೇಜಿಗೆ ಒರಗಿ ಅಥವಾ ಕುರ್ಚಿಯಲ್ಲಿ ಆರಾಮಾಗಿ ಕುಳಿತುಕೊಳ್ಳುವ ಬದಲು ನೇರವಾದ ಭಂಗಿಯಲ್ಲಿ ಕುಳಿತುಕೊಳ್ಳಬೇಕು. ಹೀಗೆ ಮಾಡಿದರೆ ಮನಸ್ಸು ಹಾಗೂ ದೇಹ ಎರಡು ಚೈತನ್ಯಗೊಳ್ಳುತ್ತದೆ ಜೊತೆಗೆ ಆಕಳಿಕೆ ಕೂಡ ಬರುವುದಿಲ್ಲ.
ಇನ್ನು ಕೆಲವು ಉತ್ತಮವಾಗಿರುವ ಸಲಹೆಗಳೆಂದರೆ ಮತ್ತೆ ಮತ್ತೆ ಆಕಳಿಕೆ ಬರುತ್ತಿದ್ದರೆ ಆಗಾಗ ನೀರನ್ನು ಕುಡಿಯಿರಿ. ಮುಖಕ್ಕೆ ನೀರನ್ನು ಹಾಕಿ ತೊಳೆದುಕೊಂಡು ಬನ್ನಿ. ಈ ರೀತಿ ಮಾಡುವುದರಿಂದ ಮೂಡ್ ಫ್ರೆಶ್ ಆಗುತ್ತದೆ. ಒಂದು ವೇಳೆ ಕುಳಿತಲ್ಲೇ ಕೆಲಸ ಮಾಡಿ ನಿದ್ದೆ ಬರುತ್ತಿದ್ದರೆ ಆ ನಿದ್ದೆ ಕೂಡ ಓಡಿ ಹೋಗುತ್ತದೆ ಟ್ರೈ ಮಾಡಿ!