ನವದೆಹಲಿ : 'ಸೌದಿ ಅರೇಬಿಯಾವು ಭಾರತದ ಪ್ರಮುಖ ಕಾರ್ಯತಂತ್ರದ ವಿಶ್ವಾಸಾರ್ಹ ಪಾಲುದಾರಿಕೆಯ ರಾಷ್ಟ್ರವಾಗಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ಜೊತೆಗೆ ಸೋಮವಾರ ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಪ್ರಾದೇಶಿಕತೆ, ಜಾಗತಿಕ ಸ್ಥಿರತೆ ಹಾಗೂ ಕಲ್ಯಾಣಕ್ಕೆ ಭಾರತ ಮತ್ತು ಸೌದಿ ನಡುವಿನ ಪಾಲುದಾರಿಕೆಯು ನಿರ್ಣಾಯಕವಾಗಿದೆ. ಬದಲಾದ ಕಾಲಮಾನಕ್ಕೆ ತಕ್ಕಂತೆ ಹೊಸ ಆಯಾಮದಲ್ಲಿ ಉಭಯ ರಾಷ್ಟ್ರಗಳು ಒಪ್ಪಂದಕ್ಕೆ ಕಟಿಬದ್ಧವಾಗಿವೆ ಎಂದು ಮೋದಿ ಹೇಳಿದರು.
ಎರಡೂ ದೇಶಗಳ ನಿಕಟ ಪಾಲುದಾರಿಕೆಯನ್ನು ಮತ್ತಷ್ಟು ವಿಸ್ತರಿಸುವುದು ಸೇರಿದಂತೆ ಹಲವು ಉಪಕ್ರಮಗಳ ಬಗ್ಗೆ ಚರ್ಚಿಸಲಾಯಿತು. ನಮ್ಮ ಸಂಬಂಧವು ಹೊಸ ಮಾರ್ಗ ಹಾಗೂ ಶಕ್ತಿ ಪಡೆದಿದೆ ಎಂದು ತಿಳಿಸಿದರು.
ಉಭಯ ರಾಷ್ಟ್ರಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆ ಮಂಡಳಿಯು 2019ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ನಿರ್ಣಾಯಕ ಪ್ರದೇಶಗಳಿಗೆ ಸಂಬಂಧಿಸಿ ಸಹಕಾರವನ್ನು ವಿಸ್ತರಣೆ ಮಾಡುವುದೇ ಇದರ ಮೂಲ ಧ್ಯೇಯವಾಗಿದೆ.
ಭಾರತಕ್ಕೆ ಧನ್ಯವಾದ ಅರ್ಪಣೆ:
ಮಾತುಕತೆಗೂ ಮುನ್ನ ರಾಷ್ಟ್ರಪತಿ ಭವನದ ಮುಂಭಾಗ ಸೌದಿ ಯುವರಾಜ ಸಲ್ಮಾನ್‌ಗೆ ಸ್ವಾಗತ ಕೋರಲಾಯಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಭಾರತಕ್ಕೆ ಭೇಟಿ ನೀಡಿರುವುದು ನನಗೆ ಖುಷಿ ತಂದಿದೆ. ಜಿ20 ಶೃಂಗಸಭೆಯ ಅಧ್ಯಕ್ಷತೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಭಾರತಕ್ಕೆ ಧನ್ಯವಾದ ಸಲ್ಲಿಸುತ್ತೇನೆ' ಎಂದು ಹೇಳಿದರು.
ಎರಡೂ ದೇಶಗಳ ಉತ್ತಮ ಭವಿಷ್ಯಕ್ಕಾಗಿ ಒಟ್ಟಾಗಿ ಕೆಲಸ ನಿರ್ವಹಿಸುತ್ತೇವೆ ಎಂದರು.
ಮಧ್ಯ ಪಶ್ಚಿಮ ಪ್ರದೇಶದಲ್ಲಿ ಸೌದಿಯು ಭಾರತದ ಪ್ರಮುಖ ಪಾಲುದಾರ ರಾಷ್ಟ್ರವಾಗಿದೆ. ಕಳೆದ ಕೆಲವು ವರ್ಷಗಳಿಂದ ಎರಡು ರಾಷ್ಟ್ರಗಳ ನಡುವಿನ ಸಂಬಂಧ ಗಮನಾರ್ಹವಾಗಿ ಪ್ರಗತಿ ಹೊಂದಿದೆ. ರಕ್ಷಣೆ ಮತ್ತು ಭದ್ರತಾ ಪಾಲುದಾರಿಕೆ ಸಾಮರ್ಥ್ಯ ವೃದ್ಧಿಗೆ ಒತ್ತು ನೀಡಿವೆ.