ನವದೆಹಲಿ: ಸಂವಿಧಾನದ 370ನೇ ವಿಧಿ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಹಿಂಪಡೆದಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಹಲವು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಪೂರ್ಣಗೊಳಿಸಿದ್ದು, ತೀರ್ಪು ಕಾಯ್ದಿರಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ಸದಸ್ಯರ ಪೀಠ ಸತತ 16 ದಿನ ಈ ಅರ್ಜಿಗಳ ವಿಚಾರಣೆ ನಡೆಸಿತು.
'ಅರ್ಜಿದಾರರು, ಪ್ರತಿವಾದಿಗಳ ಪರವಾಗಿ ಅಭಿಪ್ರಾಯಗಳನ್ನು ದಾಖಲಿಸಲು ಬಯಸುವ ವಕೀಲರು ಅದನ್ನು ಲಿಖಿತ ರೂಪದಲ್ಲಿ ಮೂರು ದಿನಗಳ ಒಳಗೆ ಸಲ್ಲಿಸಬಹುದು. ಹೀಗೆ ಸಲ್ಲಿಸುವ ಅಭಿಪ್ರಾಯಗಳು ಎರಡು ಪುಟ ಮೀರಬಾರದು' ಎಂದು ಪೀಠ ಸೂಚಿಸಿತು.
ಹಿರಿಯ ವಕೀಲರಾದ ಕಪಿಲ್ ಸಿಬಲ್, ಗೋಪಾಲ್ ಸುಬ್ರಹ್ಮಣಿಯಂ, ರಾಜೀವ್ ಧವನ್, ಜಾಫರ್ ಶಾ, ದುಷ್ಯಂತ್ ದವೆ ಮತ್ತು ಇತರರು ಅಂತಿಮ ದಿನವಾದ ಮಂಗಳವಾರ ತಮ್ಮ ವಾದ ಮಂಡಿಸಿದರು.
ಅಟಾರ್ನಿ ಜನರಲ್ ಆರ್.ವೆಂಕಟರಮಣಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹಿರಿಯ ವಕೀಲರಾದ ಹರೀಶ್ ಸಾಳ್ವೆ, ರಾಕೇಶ್ ದ್ವಿವೇದಿ, ವಿ.ಗಿರಿ ಮತ್ತು ಇತರರು ಕೇಂದ್ರ ಸರ್ಕಾರ ಹಾಗೂ ಅರ್ಜಿದಾರರ ಪರವಾಗಿ ವಿಚಾರಣೆಯ ವೇಳೆ ವಾದ ಮಂಡಿಸಿದರು.
ವಿಶೇಷ ಸ್ಥಾನಮಾನ ಹಿಂಪಡೆದ ಕೇಂದ್ರ ಸರ್ಕಾರದ ನಿರ್ಧಾರ, ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲು ಅನುವು ಮಾಡಿದ 'ಜಮ್ಮು ಮತ್ತು ಕಾಶ್ಮೀರದ ಪುನರ‍್ರಚನೆ ಕಾಯ್ದೆ'ಯ ಕ್ರಮಬದ್ಧತೆ, 2018ರ ಜೂನ್ 20ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಹೇರಿದ್ದ ತೀರ್ಮಾನ ಹಾಗೂ 2018ರ ಡಿಸೆಂಬರ್ 19ರಂದು ರಾಷ್ಟ್ರಪತಿ ಆಡಳಿತ ಹೇರಿದ್ದ ತೀರ್ಮಾನ ಪ್ರಶ್ನಿಸಿದ್ದು ಸೇರಿ ವಿವಿಧ ಅಂಶಗಳ ಕುರಿತು ವಿಚಾರಣೆ ನಡೆಯಿತು.
370ನೇ ವಿಧಿ ಅನ್ವಯ ನೀಡಿದ್ದ ವಿಶೇಷ ಸ್ಥಾನಮಾನ ಹಿಂಪಡೆದಿದ್ದು, ಕೇಂದ್ರಾಡಳಿತ ಪ್ರದೇಶಗಳಾಗಿ ರಾಜ್ಯದ ವಿಂಗಡಣೆ ಪ್ರಶ್ನಿಸಿ ಹಲವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.