ಚೆನ್ನೈ: ಅಧಿಕ ಇಳುವರಿಯ ಭತ್ತದ ತಳಿ ಅಭಿವೃದ್ಧಿಯಿಂದ ದೇಶದ ಆಹಾರ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಹಸಿರು ಕ್ರಾಂತಿಯ ಹರಿಕಾರ ಎಂದೇ ಪ್ರಸಿದ್ಧರಾಗಿದ್ದ ಎಂ.ಎಸ್.ಸ್ವಾಮಿನಾಥನ್ (98) ಚೆನ್ನೈನಲ್ಲಿ ಗುರುವಾರ ನಿಧನರಾದರು.
ಮೊಂಕೊಂಬು ಸಾಂಬಶಿವನ್ (ಎಂ.ಎಸ್) ಸ್ವಾಮಿನಾಥನ್ ಅವರು 1925ರ ಆ.
ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮವು ಸ್ವಾಮಿನಾಥನ್ ಅವರನ್ನು 'ಆರ್ಥಿಕ ಪರಿಸರ ವಿಜ್ಞಾನದ ಪಿತಾಮಹ' ಎಂದು ಬಣ್ಣಿಸಿದೆ. 1960 ಹಾಗೂ 70ರ ದಶಕದಲ್ಲಿ ರಾಸಾಯನಿಕ ಹಾಗೂ ಜೈವಿಕ ತಂತ್ರಜ್ಞಾನದ ಮೂಲಕ ಅಕ್ಕಿ ಮತ್ತು ಗೋಧಿಯ ಉತ್ಪಾದನೆ ಹೆಚ್ಚಿಸಲು ರೂಪಿಸಲಾದ ಹಸಿರು ಕ್ರಾಂತಿ ಯೋಜನೆಯಲ್ಲಿ ಕೇಂದ್ರ ಕೃಷಿ ಸಚಿವರಾಗಿದ್ದ ಸಿ.ಸುಬ್ರಮಣಿಯಂ, ಜಗಜೀವನ್ ರಾಮ್ ಅವರೊಂದಿಗೆ ಸ್ವಾಮಿನಾಥನ್ ಕೆಲಸ ಮಾಡಿದ್ದರು.
ಅಧಿಕ ಇಳುವರಿಯ ಭತ್ತ ಹಾಗೂ ಗೋಧಿ ತಳಿಯ ಅಭಿವೃದ್ಧಿಗಾಗಿ 1987ರಲ್ಲಿ ಅವರಿಗೆ ಜಾಗತಿಕ ಆಹಾರ ಬಹುಮಾನ ಲಭಿಸಿತ್ತು. ಅದರಿಂದ ಬಂದ ಹಣದಲ್ಲಿ ಅವರು ಚೆನ್ನೈನಲ್ಲಿ ಎಂ.ಎಸ್.ಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನವನ್ನು ಆರಂಭಿಸಿದರು. 1971ರಲ್ಲಿ ರೇಮನ್ ಮ್ಯಾಗ್ಸೆಸೆ ಹಾಗೂ 1986ರಲ್ಲಿ ಆಲ್ಬರ್ಟ್ ಐನ್‌ಸ್ಟೀನ್ ವಿಶ್ವ ವಿಜ್ಞಾನ ಪ್ರಶಸ್ತಿಗಳೂ ಅವರಿಗೆ ಸಂದಿವೆ.
ಇವುಗಳೊಂದಿಗೆ ಪದ್ಮ ಶ್ರೀ, ಪದ್ಮ ಭೂಷಣ ಹಾಗೂ ಪದ್ಮ ವಿಭೂಷಣ ಪ್ರಶಸ್ತಿಗಳು ಸ್ವಾಮಿನಾಥನ್ ಅವರಿಗೆ ಸಂದಿವೆ. ಎಚ್.ಕೆ.ಫಿರೋದಿಯಾ ಪ್ರಶಸ್ತಿ, ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಪ್ರಶಸ್ತಿ ಹಾಗೂ ಇಂದಿರಾ ಗಾಂಧಿ ಪ್ರಶಸ್ತಿಗಳೂ ಸ್ವಾಮಿನಾಥನ್ ಅವರಿಗೆ ಲಭಿಸಿವೆ.
ದೇಶದ ಕೃಷಿ ಕ್ಷೇತ್ರದಲ್ಲೇ ಅಲ್ಲದೆ, ಜಾಗತಿಕ ಮಟ್ಟದಲ್ಲಿ ಸ್ವಾಮಿನಾಥನ್ ಅವರ ಕಾರ್ಯ ಹೆಚ್ಚು ಜನಪ್ರಿಯ. ಜಾಗತಿಕ ಮಟ್ಟದ ಹಲವು ಕೃಷಿ ಹಾಗೂ ಪರಿಸರ ಜಾಗೃತಿ ಕುರಿತ ಕಾರ್ಯಕ್ರಮಗಳಲ್ಲಿ ಅವರು ಸಕ್ರೀಯರಾಗಿದ್ದರು. ಟೈಮ್ ನಿಯತಕಾಲಿಕೆ ಪ್ರಕಟಿಸಿದ 20ನೇ ಶತಮಾನದ 20 ಅತ್ಯಂತ ಪ್ರಭಾವಿಗಳ ಪಟ್ಟಿಯಲ್ಲಿ ಸ್ವಾಮಿನಾಥನ್ ಅವರ ಹೆಸರು ಸೇರಿತ್ತು.
ಅವರಿಗೆ ಮೂವರು ಪುತ್ರಿಯರು ಇದ್ದಾರೆ. ಸ್ವಾಮಿನಾಥನ್ ಅವರ ಪತ್ನಿ ಮೀನಾ 2022ರಲ್ಲಿ ನಿಧನರಾಗಿದ್ದಾರೆ.
ಹಸಿರು ಕ್ರಾಂತಿಯ ಹರಿಕಾರನ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.





