ಆಲಪ್ಪುಳ: ಗಾಳಿಪಟ ಹಾರಿಸಲು ಕಟ್ಟಿದ್ದ ನೈಲಾನ್ ದಾರದಲ್ಲಿ ಸಿಲುಕಿದ್ದ ಕಾಗೆಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ.
ಸ್ಥಳೀಯರು ಅದನ್ನು ರಕ್ಷಿಸಲು ಪ್ರಯತ್ನಿಸಿದರೂ ವಿಫಲವಾಗಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ಶನಿವಾರ ಬೆಳಗ್ಗೆ ಈ ಘಟನೆ ನಡೆದಿದೆ. ಚತ್ತನಾಡು ಸ್ಮಶಾನದ ಬಳಿ ವಿದ್ಯುತ್ ತಂತಿಗೆ ಸುತ್ತಿದ್ದ ನೈಲಾನ್ ದಾರದಲ್ಲಿ ಕಾಗೆ ಸಿಲುಕಿಕೊಂಡಿತ್ತು. ಮಕ್ಕಳ ಗಾಳಿಪಟ ಹರಿದು ಅದರ ದಾರ ವಿದ್ಯುತ್ ತಂತಿಗೆ ಸಿಲುಕಿತ್ತು. ಇದರೊಂದಿಗೆ ಗಾಳಿಪಟ ಮಾಡಲು ಬಳಸುವ ಅಲ್ಯೂಮಿನಿಯಂ ಫಾಯಿಲ್ ನೇತಾಡುತ್ತಿತ್ತು. ಕಾಗೆ ಅಲ್ಯೂಮಿನಿಯಂ ಫಾಯಿಲ್‍ಗೆ ಆಕರ್ಷಿತವಾಯಿತು ಮತ್ತು ನೈಲಾನ್ ದಾರದಲ್ಲಿ ಸಿಕ್ಕಿಹಾಕಿಕೊಂಡಿತು. ನಂತರ ಅಗ್ನಿಶಾಮಕ ದಳ ರಕ್ಷಣೆ ಮಾಡಿದೆ.
ನೈಲಾನ್ ದಾರ, ಅಲ್ಯೂಮಿನಿಯಂ ಫಾಯಿಲ್ ಬಳಸಿ ಗಾಳಿಪಟ ಮಾಡುವುದಕ್ಕೆ ನಿಷೇಧವಿದ್ದರೂ ಮಾರುಕಟ್ಟೆಯಲ್ಲಿ ಲಭಿಸುತ್ತ್ತಿದೆ. ಚತ್ತನಾಡು ಮಾತ್ರವಲ್ಲದೆ ನಗರದ ಹಲವೆಡೆ ಗಾಳಿಪಟದ ದಾರದಲ್ಲಿ ಕಾಗೆ ಸಿಲುಕಿರುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ಅಗ್ನಿಶಾಮಕ ದಳ ಮಾಹಿತಿ ನೀಡಿದೆ.





