ಸ್ನಾನ ಗೃಹ ಅಥವಾ ಬಾತ್ ರೂಂ ನಮ್ಮ ಜೀವನದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ನಮ್ಮನ್ನು ನಾವು ಸ್ವಚ್ಛ ಮಾಡೋದಕ್ಕೆ ಸ್ನಾನ ಗೃಹವನ್ನು ಬಳಸುತ್ತೇವೆ. ಆದರೆ ನಾವು ಸ್ನಾನ ಗೃಹದ ಸ್ವಚ್ಛತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದಿಲ್ಲ. ಹೆಚ್ಚಿನವರು ಬಾತ್ ರೂಂ ತುಂಬಾನೇ ಕೊಳಕಾಗುವವರೆಗೂ ಕಾದು ನಂತರ ಸ್ವಚ್ಛಗೊಳಿಸುತ್ತಾರೆ. ಈ ರೀತಿ ಮಾಡುವುದು ತಪ್ಪು. ಬಾತ್ ರೂಂ ನಿಂದಲೇ ಕಾಯಿಲೆಗಳು ನಿಮ್ಮ ದೇಹ ಹೊಕ್ಕುವ ಸಾಧ್ಯತೆಗಳು ಹೆಚ್ಚಿರುತ್ತದೆ.
ಹೀಗಾಗಿ ಸ್ನಾನ ಗೃಹದ ಸ್ವಚ್ಛತೆ ಮಾಡುವುದು ತುಂಬಾನೇ ಮುಖ್ಯವಾಗುತ್ತದೆ. ಕೆಲವರು ಸ್ನಾನ ಗೃಹವನ್ನು ಸ್ವಚ್ಛ ಮಾಡುತ್ತಾರೆ. ಆದರೆ ಅವರಿಗೆ ಸರಿಯಾದ ವಿಧಾನ ಯಾವುದು ಅನ್ನೋದು ಗೊತ್ತಿರೋದಿಲ್ಲ. ಇವತ್ತು ನಾವು ನಿಮಗೆ ಸ್ನಾನ ಗೃಹವನ್ನು ಸ್ವಚ್ಛ ಮಾಡುವ ಸರಿಯಾದ ವಿಧಾನದ ಬಗ್ಗೆ ತಿಳಿಸಿ ಕೊಡ್ತೀವಿ.
ವಿಷಕಾರಿ ರಾಸಾಯನಿಕಗಳನ್ನು ಬಳಸದಿರಿ!
ಹೆಚ್ಚಿನ ಸಂದರ್ಭದಲ್ಲಿ ಬಾತ್ ರೂಂ ಸ್ವಚ್ಛಗೊಳಿಸೋದಕ್ಕಾಗಿ ನಾವು ಕಠಿಣ ರಾಸಾಯನಿಕಗಳನ್ನೇ ಬಳಸುತ್ತೇವೆ. ಈ ರೀತಿ ಕಠಿಣ ರಾಸಾಯನಿಕ ಬಳಸೋದ್ರಿಂದ ಸ್ನಾನದ ಗೃಹದಲ್ಲಿರುವ ಕಠಿಣ ರಾಸಾಯನಿಕಗಳನ್ನು ಸುಲಭವಾಗಿ ತೊಲಗಿಸಬಹುದು ಎಂದು ನಾವು ನಂಬುತ್ತೇವೆ. ಆದರೆ ಆ ನಂಬಿಕೆ ತಪ್ಪು. ಈ ಕಠಿಣ ರಾಸಾಯನಿಕಗಳು ನೆಲದ ಮೇಲೆ ಹಾಕಿರುವ ಟೈಲ್ಸ್ ಗಳನ್ನು ಹಾನಿಗೊಳಿಸುವುದು ಮಾತ್ರವಲ್ಲದೇ, ನಮ್ಮ ಆರೋಗ್ಯದ ಮೇಲೆ ಕೂಡ ಪರಿಣಾಮ ಬೀರುತ್ತದೆ.
ಟ್ಯಾಪ್ ಮತ್ತು ಶವರ್ ಹೆಡ್ ಗಳನ್ನು ಸ್ವಚ್ಛಗೊಳಿಸಿ!
ಬಾತ್ ರೂಂ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ನಾವು ನೆಲದ ಮತ್ತು ಕಾಮಾಡ್ ಸ್ವಚ್ಛತೆ ಬಗ್ಗೆ ಮಾತ್ರ ಗಮನ ಹರಿಸುತ್ತೇವೆ. ಹೆಚ್ಚಿನ ಜನ ಅಷ್ಟನ್ನು ಮಾತ್ರ ಸ್ವಚ್ಛಗೊಳಿಸುತ್ತಾರೆ. ಆದ್ರೆ ಮುಖ್ಯವಾಗಿ ನೀವಿಲ್ಲಿ ಟ್ಯಾಪ್ ಮತ್ತು ಶವರ್ ಹೆಡ್ ಸ್ವಚ್ಛತೆ ಬಗ್ಗೆ ಗಮನ ಹರಿಸುವುದು ತುಂಬಾನೇ ಮುಖ್ಯ. ಅದ್ರಲ್ಲೂ ಕೂಡ ತುಂಬಾನೇ ಕೀಟಾನುಗಳಿರುತ್ತವೆ. ಇದ್ರಿಂದ ಕೂಡ ರೋಗ ಹರಡುವ ಅಪಾಯಗಳು ಹೆಚ್ಚಾಗಿದೆ.
ಕನ್ನಡಿಯ ಮೇಲಿನ ಕೊಳೆಯನ್ನು ನಿರ್ಲಕ್ಷಿಸಬೇಡಿ!
ಬಾತ್ ರೂಂ ಕನ್ನಡಿಯನ್ನು ಸ್ವಚ್ಛಗೊಳಿಸುವುದು ಕೂಡ ತುಂಬಾನೇ ಮುಖ್ಯವಾಗುತ್ತದೆ. ಹಚ್ಚಿನ ಸಂದರ್ಭದಲ್ಲಿ ಬಾತ್ ರೂಂ ಕನ್ನಡಿ ತುಂಬಾನೇ ಕೊಳಕಾಗಿರುತ್ತದೆ. ಅದರ ಸ್ವಚ್ಛತೆ ಬಗ್ಗೆ ನಾವು ಹೆಚ್ಚಾಗಿ ತಲೆ ಕೆಡಿಸಿಕೊಳ್ಳೋದಿಲ್ಲ. ಹೆಚ್ಚನವರು ಬಾತ್ ರೂಂ ನಲ್ಲಿ ಮೇಕ್ ಅಪ್ ಮಾಡಿಕೊಳ್ತಾರೆ. ಇನ್ನೂ ಪುರುಷರು ಶೇವಿಂಗ್ ಮಾಡುತ್ತಾರೆ. ಹೆಚ್ಚಿನ ಸಂದರ್ಭದಲ್ಲಿ ಅವುಗಳನ್ನು ಸ್ವಚ್ಛಗೊಳಿಸದೇ ಹಾಗೆಯೇ ಬಿಟ್ಟು ಬಿಡುತ್ತಾರೆ. ಆದರೆ ವಾರಕ್ಕೆ ಒಮ್ಮೆಯಾದರೂ ಬಾತ್ ರೂಂ ನಲ್ಲಿರುವ ಕನ್ನಡಿಯನ್ನು ಸ್ವಚ್ಛಗೊಳಿಸುವುದನ್ನು ಮರೀಬೇಡಿ.
ಎಕ್ಸಾಸ್ಟ್ ಫ್ಯಾನ್ ಅನ್ನು ಸ್ವಚ್ಛಗೊಳಿಸಬೇಕು!
ಎಕ್ಸಾಸ್ಟ್ ಫ್ಯಾನ್ ಸ್ನಾನಗೃಹದ ಗಾಳಿಯ ಗುಣಮಟ್ಟವನ್ನು ನಿರ್ವಹಿಸುತ್ತದೆ. ಮತ್ತು ಅದರ ತೇವಾಂಶವನ್ನು ತೆಗೆದುಹಾಕುವಂತಹ ಪ್ರಮುಖ ಕಾರ್ಯಗಳನ್ನು ಸಹ ಮಾಡುತ್ತದೆ. ಹೀಗಾಗಿ ಇದರ ಶುಚಿಗೊಳಿಸುವಿಕೆಯನ್ನು ನಿರ್ಲಕ್ಷಿಸುವುದರಿಂದ ನಿಮ್ಮ ಸ್ನಾನದ ಕೋಣೆಯಲ್ಲಿ ಶಿಲೀಂಧ್ರದ ಅಪಾಯವನ್ನು ಹೆಚ್ಚಿಸಬಹುದು. ಅದಕ್ಕಾಗಿಯೇ ನೀವು ತಿಂಗಳಿಗೊಮ್ಮೆ ಎಕ್ಸಾಸ್ಟ್ ಫ್ಯಾನ್ ಅನ್ನು ಸ್ವಚ್ಛಗೊಳಿಸಬೇಕು.
ಬಾತ್ ರೂಂ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಈ ವಿಚಾರಗಳ ಬಗ್ಗೆಯೂ ಕೂಡ ಮುಖ್ಯವಾಗಿ ಗಮನಹರಿಸಿ. ಇಲ್ಲವಾದರೆ ನೀವು ಕಾಯಿಲೆಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.