ನವದೆಹಲಿ: ಆಡಳಿತ ಪಕ್ಷದ ಸಂಸದ ರಮೇಶ್ ಬಿಧೂಢಿ ಅವರಿಂದ ಅವಹೇಳನಕಾರಿ ಹೇಳಿಕೆಗಳನ್ನು ಎದುರಿಸಿದ ಬಿಎಸ್‌ಪಿ ಸಂಸದ ಡ್ಯಾನಿಷ್ ಅಲಿ ಅವರ 'ಅಸಭ್ಯ' ವರ್ತನೆ ಬಗ್ಗೆಯೂ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ತನಿಖೆ ನಡೆಸಬೇಕು ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೇ ಹೇಳಿದ್ದಾರೆ.
0
samarasasudhi
ಸೆಪ್ಟೆಂಬರ್ 23, 2023
ನವದೆಹಲಿ: ಆಡಳಿತ ಪಕ್ಷದ ಸಂಸದ ರಮೇಶ್ ಬಿಧೂಢಿ ಅವರಿಂದ ಅವಹೇಳನಕಾರಿ ಹೇಳಿಕೆಗಳನ್ನು ಎದುರಿಸಿದ ಬಿಎಸ್‌ಪಿ ಸಂಸದ ಡ್ಯಾನಿಷ್ ಅಲಿ ಅವರ 'ಅಸಭ್ಯ' ವರ್ತನೆ ಬಗ್ಗೆಯೂ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ತನಿಖೆ ನಡೆಸಬೇಕು ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೇ ಹೇಳಿದ್ದಾರೆ.
ಬಿಧೂಢಿ ಹೇಳಿಕೆಗಳನ್ನೂ ಖಂಡಿಸಿರುವ ದುಬೇ, ಯಾವ ಸಭ್ಯ ಸಮಾಜವೂ ಅವರ (ರಮೇಶ್ ಬಿಧೂಢಿ) ಮಾತುಗಳನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಎಸ್‌ಪಿ ಸಂಸದ ಡ್ಯಾನಿಷ್ ಅಲಿ ಅವರ ಬಗ್ಗೆ ಬಿಜೆಪಿಯ ರಮೇಶ್ ಬಿಧೂಢಿ ಅವರು ಸಂಸತ್ತಿನಲ್ಲಿ ಶುಕ್ರವಾರ ನೀಡಿದ್ದ ಹೇಳಿಕೆಯು ಕೋಲಾಹಲ ಎಬ್ಬಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದರು. ಜೊತೆಗೆ ಬಿಧೂಡಿ ಅವರ ಹೇಳಿಕೆಗಳನ್ನು ದಾಖಲೆಗಳಿಂದ ತೆಗೆದು ಹಾಕಿಸಿದರು.
ಈ ಕುರಿತು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿರುವ ದುಬೇ, 'ಡ್ಯಾನಿಷ್ ಅಲಿ ಅವರ ಅಸಭ್ಯ ವರ್ತನೆ ಹಾಗೂ ಹೇಳಿಕೆಗಳ ಬಗ್ಗೆಯೂ ಲೋಕಸಭಾ ಸ್ಪೀಕರ್ ಅವರು ತನಿಖೆ ನಡೆಸಬೇಕು. ಲೋಕಸಭೆ ನಿಯಮಗಳ ಅಡಿಯಲ್ಲಿ, ಮತ್ತೊಬ್ಬ ಸಂಸದರು ತಮಗೆ ನೀಡಲಾದ ಸಮಯದಲ್ಲಿ ಮಾತನಾಡುವುದಕ್ಕೆ ಅಡ್ಡಿಪಡಿಸುವುದು, ಕುಳಿತುಕೊಂಡು ಮಾತನಾಡುವುದು, ನಿರಂತರವಾಗಿ ಹೇಳಿಕೆಗಳನ್ನು ನೀಡುವುದು ಸಹ ತಪ್ಪು' ಎಂದಿದ್ದಾರೆ.
15 ವರ್ಷಗಳಿಂದ ಸಂಸದರಾಗಿರುವುದಾಗಿ ಹೇಳಿಕೊಂಡಿರುವ ದುಬೇ, 'ಇಂತಹ ಘಟನೆಗೆ ಸಾಕ್ಷಿಯಾಗುತ್ತೇನೆ ಎಂದು ಅಂದುಕೊಂಡಿರಲಿಲ್ಲ' ಎಂಬುದಾಗಿ ಬೇಸರ ವ್ಯಕ್ತಪಡಿಸಿದ್ದಾರೆ.