HEALTH TIPS

2,643 ಎಕರೆ ಹಿಂತಿರುಗಿಸಲು ಅರ್ಸೆಲರ್‌ ಮಿತ್ತಲ್‌ ನಿರ್ಧಾರ

              ವದೆಹಲಿ: ಕರ್ನಾಟಕದ ಬಳ್ಳಾರಿಯಲ್ಲಿ ಉಕ್ಕಿನ ಸ್ಥಾವರ ಸ್ಥಾಪಿಸಲು ಸ್ವಾಧೀನಪಡಿಸಿಕೊಂಡಿದ್ದ 2,643 ಎಕರೆ ಭೂಮಿಯನ್ನು ಹಿಂದಿರುಗಿಸಲು ನಿರ್ಧರಿಸಲಾಗಿದೆ ಎಂದು ವಿಶ್ವದ ಅತಿದೊಡ್ಡ ಉಕ್ಕು ಉತ್ಪಾದಕ ಅರ್ಸೆಲರ್‌ ಮಿತ್ತಲ್‌ ಇಂಡಿಯಾ ಕಂಪನಿಯು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

              ಸ್ಥಾವರ ಸ್ಥಾಪಿಸಲು ಪಾವತಿಸಿದ ₹250 ಕೋಟಿಗೂ ಹೆಚ್ಚು ಮೊತ್ತವನ್ನು ಬಿಟ್ಟುಕೊಡಲು ಸಿದ್ಧ ಎಂದೂ ತಿಳಿಸಿದೆ.

               ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌ ಹಾಗೂ ಸುಧಾಂಶು ಧುಲಿಯಾ ಅವರ ಪೀಠದ ಎದುರು ಹಿರಿಯ ವಕೀಲ ಎ.ಎಂ. ಸಿಂಘ್ವಿ ನೇತೃತ್ವದ ಕಂಪನಿಯ ವಕೀಲರ ತಂಡವು, 'ಬದಲಾದ ಸನ್ನಿವೇಶದಲ್ಲಿ ಅರ್ಜಿದಾರರು ಭೂಮಿಯನ್ನು ಇಟ್ಟುಕೊಳ್ಳಲು ಬಯಸುವುದಿಲ್ಲ ಮತ್ತು 2,643 ಎಕರೆಗಳ ಸಂಪೂರ್ಣ ಭೂಮಿಯನ್ನು ಹಿಂದಿರುಗಿಸುತ್ತಾರೆ' ಎಂದು ಹೇಳಿತು.

                 'ಈಗಾಗಲೇ ‍ಪಾವತಿಸಿದ ₹267 ಕೋಟಿಯನ್ನು ಸಹ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಮುಟ್ಟುಗೋಲು ಹಾಕಿಕೊಳ್ಳಬಹುದು' ಎಂದು ವಕೀಲರ ತಂಡವು ಮಾಹಿತಿ ನೀಡಿತು.

               ಕಂಪನಿ ಸಲ್ಲಿಸಿದ ರಿಟ್ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ ಪೀಠ, ಕೆಐಎಡಿಬಿಗೆ ನೋಟಿಸ್ ಜಾರಿ ಮಾಡಿತು.

                 ವಿಚಾರಣೆ ವೇಳೆ ನ್ಯಾಯಪೀಠ, ಭೂಮಾಲೀಕರಿಗೆ ಪರಿಹಾರ ಪಾವತಿಸಿದ ನಂತರ ಅಥವಾ ಹಣವನ್ನು ಹಿಂದಿರುಗಿಸಿದ ಬಳಿಕ ಭೂಮಿಯನ್ನು ಉಳಿಸಿಕೊಳ್ಳುತ್ತದೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ಮಂಡಳಿಗೆ ಪ್ರಶ್ನಿಸಿತು.

                  ಮಂಡಳಿಯ ಪರ ಹಾಜರಿದ್ದ ಹಿರಿಯ ವಕೀಲ ಕಿರಣ್ ಸೂರಿ ಅವರು ಪ್ರತಿಕ್ರಿಯೆ ಸಲ್ಲಿಸಲು ಕಾಲಾವಕಾಶ ಕೋರಿದರು. ವಿಚಾರಣೆಯನ್ನು ಅಕ್ಟೋಬರ್ 30ಕ್ಕೆ ಮುಂದೂಡಲಾಗಿದೆ.

ಕೆಐಎಡಿಬಿ 2010ರಲ್ಲಿ ಬಳ್ಳಾರಿಯಲ್ಲಿ ಉಕ್ಕಿನ ಸ್ಥಾವರ ಸ್ಥಾಪನೆಗಾಗಿ ಸ್ವಾಧೀನಪಡಿಸಿಕೊಂಡಿರುವ ಪ್ರತಿ ಎಕರೆಗೆ ಅಲ್ಲಿನ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಲಯ ನಿಗದಿಪಡಿಸಿದಷ್ಟು ಪರಿಹಾರವನ್ನೇ ಕಂಪನಿ ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ ಈ ವರ್ಷದ ಆರಂಭದಲ್ಲಿ ಆದೇಶಿಸಿತ್ತು. ಈ ಆದೇಶದ ಪ್ರಕಾರ ಪ್ರತಿ ಎಕರೆಗೆ ಕಂಪನಿ ₹ 30.20 ಲಕ್ಷ ಪರಿಹಾರ ಪಾವತಿಸಬೇಕಿತ್ತು.

                ಬಳ್ಳಾರಿ ಜಿಲ್ಲೆಯ ಕುಡಿತಿನಿ ಹಾಗೂ ಹರಗಿನಡೋಣಿ ಗ್ರಾಮಗಳಲ್ಲಿ ಕೈಗಾರಿಕೆ ಸ್ಥಾಪಿಸಲು 4,993 ಎಕರೆಯನ್ನು ಸ್ವಾಧೀನಪಡಿಸಿಕೊಳ್ಳಲು 2010ರ ಫೆಬ್ರುವರಿ 5ರಂದು ಕೆಎಐಡಿಬಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. 4,866 ಎಕರೆ ಭೂಸ್ವಾಧೀನಕ್ಕೆ 2010ರ ಮೇ ತಿಂಗಳಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಭೂಮಿ ಕಳೆದುಕೊಳ್ಳುವವರಿಗೆ ಪ್ರತಿ ಎಕರೆ ₹1.5 ಲಕ್ಷ ನೀಡಲು ವಿಶೇಷ ಭೂಸ್ವಾಧೀನ ಅಧಿಕಾರಿ ಶಿಫಾರಸು ಮಾಡಿದ್ದರು.

                  ಆದರೆ, ಅವೈಜ್ಞಾನಿಕ ದರ ನಿಗದಿ ಮಾಡಲಾಗಿದೆ ಎಂದು ಭೂ ಸಂತ್ರಸ್ತರು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿ ಹೋರಾಟ ನಡೆಸಿದ್ದರು. ಬಳಿಕ ಕೃಷಿ ಭೂಮಿಗೆ ಎಕರೆಗೆ ₹8 ಲಕ್ಷ, ಕೃಷಿಯೇತರ ಭೂಮಿಗೆ ಎಕರೆಗೆ ₹12 ಲಕ್ಷ ನಿಗದಿಪಡಿಸಲಾಗಿತ್ತು. ಈ ಭೂ ದರವನ್ನು ಅನೇಕ ಭೂಮಾಲೀಕರು ಒಪ್ಪಿಕೊಂಡು ಭೂಮಿ ಬಿಟ್ಟುಕೊಡಲು ಕೆಐಎಡಿಬಿ ಜತೆಗೆ ಕರಾರು ಮಾಡಿಕೊಂಡಿದ್ದರು. ಕಡಿಮೆ ದರ ನಿಗದಿ ಮಾಡಲಾಗಿದೆ ಎಂದು ಆರೋಪಿಸಿ ಹಲವು ಭೂಮಿ ಮಾಲೀಕರು ಸಿವಿಲ್‌ ನ್ಯಾಯಾಲಯದ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ, ರಾಷ್ಟ್ರೀಯ ಹೆದ್ದಾರಿಯಿಂದ 500 ಮೀಟರ್‌ನಷ್ಟು ದೂರದಲ್ಲಿರುವ ಭೂಮಿಗೆ ₹32.20 ಲಕ್ಷ ಹಾಗೂ ಅದರ ಆಚೆಗೆ ಇರುವ ಕೃಷಿ ಭೂಮಿಗೆ ₹8 ಲಕ್ಷ ಪರಿಹಾರ ನೀಡಬೇಕು ಎಂದು 2016ರ ಮಾರ್ಚ್‌ 1ರಂದು ಆದೇಶ ನೀಡಿತ್ತು.

               'ಮಂಡಳಿಯ ವಿಶೇಷ ಭೂಸ್ವಾಧೀನ ಅಧಿಕಾರಿಯವರನ್ನು ಮಾತ್ರ ಪ್ರತಿವಾದಿಯನ್ನಾಗಿ ಮಾಡಲಾಗಿದೆ. ಮಂಡಳಿಯನ್ನು ಪ್ರತಿವಾದಿಯನ್ನಾಗಿ ಮಾಡಿಲ್ಲ' ಎಂದು ಆಕ್ಷೇಪಿಸಿ ಕೆಐಎಡಿಬಿಯು ಹೈಕೋರ್ಟ್‌ನ ಧಾರವಾಡ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಬಳ್ಳಾರಿ ನ್ಯಾಯಾಲಯದ ಆದೇಶವನ್ನು 2018ರಲ್ಲಿ ರದ್ದುಪಡಿಸಿದ ಹೈಕೋರ್ಟ್, ಮಂಡಳಿಯನ್ನು ಪ್ರತಿವಾದಿಯನ್ನಾಗಿ ಮಾಡಿಕೊಂಡು ‍ಪ್ರಕರಣದ ವಿಚಾರಣೆ ನಡೆಸಬೇಕು ಎಂದು ಅಧೀನ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು.

ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಬಿ.ರವಿಪ್ರಕಾಶ್‌ ಹಾಗೂ ಇತರರು 2018ರಲ್ಲಿ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries