ಇಂಫಾಲ್: ಮಣಿಪುರದ ಕುಕಿ ಬುಡಕಟ್ಟು ಸಮುದಾಯದ ಸಂಘಟನೆಯಾದ ಸ್ಥಳೀಯ ಟ್ರೈಬಲ್ ಲೀಡರ್ಸ್ ಫೋರಂ (ಐಟಿಎಲ್‌ಎಫ್) ಚುರಾಚಂದಪುರದಲ್ಲಿ ಎರಡು ದಿನಗಳ ಹಿಂದೆ ಆರಂಭಿಸಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಮಂಗಳವಾರ ವಾಪಸ್ ಪಡೆದಿದೆ.
0
samarasasudhi
ಅಕ್ಟೋಬರ್ 04, 2023
ಇಂಫಾಲ್: ಮಣಿಪುರದ ಕುಕಿ ಬುಡಕಟ್ಟು ಸಮುದಾಯದ ಸಂಘಟನೆಯಾದ ಸ್ಥಳೀಯ ಟ್ರೈಬಲ್ ಲೀಡರ್ಸ್ ಫೋರಂ (ಐಟಿಎಲ್‌ಎಫ್) ಚುರಾಚಂದಪುರದಲ್ಲಿ ಎರಡು ದಿನಗಳ ಹಿಂದೆ ಆರಂಭಿಸಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಮಂಗಳವಾರ ವಾಪಸ್ ಪಡೆದಿದೆ.
ಇಬ್ಬರ ಹತ್ಯೆ ಪ್ರಕರಣದಲ್ಲಿ ತಮ್ಮ ಸಮುದಾಯದವರನ್ನು ಸಿಬಿಐ ಮತ್ತು ಎನ್‌ಐಎ ಬಂಧಿಸಿರುವುದನ್ನು ವಿರೋಧಿಸಿ ಐಟಿಎಲ್‌ಎಫ್ ಮುಷ್ಕರ ಆರಂಭಿಸಿತ್ತು.
'ಸೂಕ್ಷ್ಮ ಅವಲೋಕನದ ನಂತರ ಮುಷ್ಕರವನ್ನು ಮಂಗಳವಾರ ಸಂಜೆ 6 ಗಂಟೆಗೆ ಕೊನೆಗೊಳಿಸಲು ನಿರ್ಧರಿಸಲಾಗಿದೆ. ತೀವ್ರ ತರದ ಚಳವಳಿಯ ಅಗತ್ಯವಿದೆಯೇ ಎಂದು ಮುಂದೆ ತೀರ್ಮಾನಿಸಲಾಗುತ್ತದೆ' ಎಂದು ಸಂಘಟನೆಯು ಹೇಳಿಕೆಯಲ್ಲಿ ತಿಳಿಸಿದೆ.
ಐಟಿಎಲ್‌ಎಫ್ ಮಹಿಳಾ ಘಟಕ ನಡೆಸುತ್ತಿರುವ ಧರಣಿಯನ್ನು ಮುಂದಿನ ವಾರದಿಂದ ಮತ್ತೆ ಆರಂಭಿಸಲಾಗುತ್ತದೆ ಎಂದೂ ಹೇಳಿದೆ.
ಜುಲೈ 6ರಂದು ಯುವಕ ಹಾಗೂ ಯುವತಿ ನಾಪತ್ತೆಯಾಗಿದ್ದರು. ಅವರ ಮೃತದೇಹಗಳ ಚಿತ್ರಗಳು ಸೆ.25ರಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ಬಳಿಕ ಇಂಫಾಲ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಅಪಹರಣ ಮತ್ತು ಕೊಲೆ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ.
ಮಣಿಪುರದಲ್ಲಿ ಮೇ 3ರಿಂದ ಹಿಂಸಾಚಾರ ಆರಂಭವಾಗಿದ್ದು, ಈವರೆಗೆ 180ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದಾರೆ.