ಅಲುವಾ: ಕೇರಳದ ಶಿಕ್ಷಣ ಕ್ಷೇತ್ರದಲ್ಲಿ ವಿಶ್ವದರ್ಜೆಯ ಗುಣಮಟ್ಟವನ್ನು ಖಾತ್ರಿಪಡಿಸುವುದಾಗಿ ಸಚಿವೆ ಡಾ. ಆರ್ ಬಿಂದು ಹೇಳೀರುವರು. ಆಲುವಾದ ಸೇಂಟ್ ಕ್ಸೇವಿಯರ್ಸ್ ಕಾಲೇಜಿನಲ್ಲಿ ರಾಷ್ಟ್ರೀಯ ಉಚ್ಚತಾರ್ ಶಿಕ್ಷಾ ಅಭಿಯಾನ (ರೂಸಾ) ಯೋಜನೆಯ ಭಾಗವಾಗಿ ನಿರ್ಮಿಸಲಾದ ಕಟ್ಟಡ ಮತ್ತು ನವೀಕರಣ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಸಚಿವರು ಮಾತನಾಡಿದರು.
ವಿಶ್ವವಿದ್ಯಾನಿಲಯ ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳ ಉನ್ನತಿಗಾಗಿ ರಾಜ್ಯ ಸರ್ಕಾರ ಹಲವಾರು ಚಟುವಟಿಕೆಗಳನ್ನು ಜಾರಿಗೊಳಿಸುತ್ತಿದೆ. ಶಿಕ್ಷಣ ಕ್ಷೇತ್ರದ ಸುಧಾರಣೆಯ ಭಾಗವಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿಧಾನದಲ್ಲಿ ಗುಣಾತ್ಮಕ ಬದಲಾವಣೆಯಾಗಲಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಇನ್ನಷ್ಟು ಸುಧಾರಿಸಲು ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳಲಾಗುವುದೆಂದು ಸಚಿವರು ಹೇಳಿದರು.
ರೂಸಾ ರಾಜ್ಯ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಹಣಕಾಸಿನ ನೆರವು ನೀಡಲು 2013 ರಲ್ಲಿ ಪ್ರಾರಂಭಿಸಲಾದ ಕೇಂದ್ರೀಯ ಯೋಜನೆಯಾಗಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಜಂಟಿ ಆಶ್ರಯದಲ್ಲಿ ಈ ಯೋಜನೆ ಜಾರಿಯಲ್ಲಿದೆ. ಯೋಜನೆಯ ಪಾಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ 60:40 ಆಗಿದೆ. ಯೋಜನೆಯ ಭಾಗವಾಗಿ ಕಾಲೇಜಿಗೆ ರೂ.ಒಂದು ಕೋಟಿ ಅನುದಾನದ ಮೂಲಕ ಮೂರು ತರಗತಿ ಕೊಠಡಿಗಳು, ಕಾನ್ಫರೆನ್ಸ್ ಹಾಲ್ ಸೇರಿದಂತೆ ಎಂಟು ಕೊಠಡಿಗಳು ಮತ್ತು ವಾಶ್ ರೂಂಗಳ ಹೊಸ ಕಟ್ಟಡವನ್ನು ನಿರ್ಮಿಸಲಾಗಿದೆ. ಉಳಿದ ಮೊತ್ತವನ್ನು ಕಾಲೇಜಿನ ಅಸ್ತಿತ್ವದಲ್ಲಿರುವ ಕಟ್ಟಡಗಳ ನವೀಕರಣ ಮತ್ತು ಸೋಲಾರ್ ಪ್ಯಾನಲ್‍ಗಳ ಅಳವಡಿಕೆಗೆ ಬಳಸಲಾಗುವುದು ಎಂದು ಸಚಿವರು ಹೇಳಿದರು.
ಶಾಸಕ ಅನ್ವರ್ ಸಾದತ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ಬೆನ್ನಿ ಬಹನಾನ್ ಮುಖ್ಯ ಅತಿಥಿಯಾಗಿದ್ದರು. ಆಲುವಾ ನಗರಸಭೆ ಅಧ್ಯಕ್ಷ ಎಂ.ಒ.ಜಾನು, ಕೌನ್ಸಿಲರ್ ಕೆ.ಜಯಕುಮಾರ್, ರಾಜ್ಯ ನಿರ್ಮಾಣ ಕೇಂದ್ರದ ಎಂಜಿನಿಯರ್ ಡಾ.ರಾಬರ್ಟ್ ವಿ.ಥಾಮಸ್, ವ್ಯವಸ್ಥಾಪಕಿ ಸಿಸ್ಟರ್ ಚಾಲ್ರ್ಸ್, ಪ್ರಾಂಶುಪಾಲ ಪ್ರೊ. ಮಿಲನ್ ಫ್ರಾನ್ಸ್, ಜೇಮ್ಸ್ ಸೆಬಾಸ್ಟಿಯನ್, ಸಿಸ್ಟರ್ ಕೆ.ಎ.ಸ್ಟೆಲ್ಲಾ ಮತ್ತಿತರರು ಭಾಗವಹಿಸಿದ್ದರು.





