HEALTH TIPS

ಸೆಲೆಬ್ರಿಟಿಗಳ ಆಕರ್ಷಣೆ: ಕಾಂಚಾಣದ ಕುಣಿತ!

              ವದೆಹಲಿ: 'ದುಬೈನಲ್ಲಿ ನಡೆದ ವೈಭವೋಪೇತ ಮದುವೆಗೆ ಖಾಸಗಿ ವಿಮಾನದಲ್ಲಿ ತೆರಳಿದ್ದ ರಣಬೀರ್‌ ಕಪೂರ್, ಶ್ರದ್ಧಾ ಕಪೂರ್‌, ಕಪಿಲ್‌ ಶರ್ಮಾ ಹಾಗೂ ಹೀನಾ ಖಾನ್ ಸೇರಿದಂತೆ ಬಾಲಿವುಡ್‌ನ 17 ಸೆಲೆಬ್ರಿಟಿಗಳು ಸಮಾರಂಭದಲ್ಲಿ ಹಾಡಿ-ಕುಣಿದಿದ್ದರು. ಈ ಸೆಲೆಬ್ರಿಟಿಗಳಿಗೆ ಅಕ್ರಮವಾಗಿ ನಗದು ರೂಪದಲ್ಲಿ ಭಾರಿ ಮೊತ್ತದ ಹಣ ಸಂದಾಯ ಮಾಡಲಾಗಿತ್ತು'

            - ಮಹಾದೇವ್‌ ಬೆಟ್ಟಿಂಗ್‌ ಆಯಪ್‌ಗೆ ನಂಟಿರುವ ಹಣದ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ) ತನ್ನ ದೂರಿನಲ್ಲಿ ಉಲ್ಲೇಖಿಸಿರುವ ಮಾಹಿತಿ ಇದು.

ಪತ್ತೇದಾರಿ ಕಥಾಹಂದರದ ರೋಚಕ ಸಿನಿಮಾ ರೀತಿಯಲ್ಲಿ ತೋರುವ ಈ ಪ್ರಕರಣವನ್ನು ಇ.ಡಿ ಭೇದಿಸಿ, ತನಿಖೆ ನಡೆ‌ಸುತ್ತಿದೆ. ಇತ್ತೀಚೆಗೆ ಮಹಾದೇವ್‌ ಬೆಟ್ಟಿಂಗ್‌ ಆಯಪ್‌ಗೆ ಸಂಬಂಧಿಸಿದ 39 ಸ್ಥಳಗಳಲ್ಲಿ ಶೋಧ ಕಾರ್ಯವನ್ನು ಕೈಗೊಂಡಿದೆ. ಚಿನ್ನದ ಗಟ್ಟಿಗಳು, ಆಭರಣಗಳು, ನಗದು ಸೇರಿದಂತೆ ₹ 417 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ ಎಂದು ಆನ್‌ಲೈನ್‌ ಸುದ್ದಿತಾಣ ಎನ್‌ಡಿಟಿವಿ ವರದಿ ಮಾಡಿದೆ.

             ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ. ನಟ ರಣಬೀರ್‌ ಕಪೂರ್‌ ಹಾಗೂ ಶ್ರದ್ಧಾ ಕಪೂರ್‌ ಅವರನ್ನು ಇ.ಡಿ. ವಿಚಾರಣೆಗೆ ಒಳಪಡಿಸಿದೆ.

ಬೆಳಕಿಗೆ ಬಂದ ಬಗೆ:

              ದುಬೈನಲ್ಲಿ ಕಳೆದ ಫೆಬ್ರುವರಿಯಲ್ಲಿ ನಡೆದಿದ್ದ ₹ 200 ಕೋಟಿ ವೆಚ್ಚದ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗೆ ನಗದು ಪಾವತಿ ಮಾಡಲಾಗಿತ್ತು. ಇದರ ಜಾಡು ಹಿಡಿದ ಇ.ಡಿ.ಗೆ ಮಹಾದೇವ್‌ ಆಯಪ್‌ನ ನಂಟಿರುವ ವ್ಯವಹಾರದ ಕುರಿತು ತಿಳಿಯಿತು ಎಂದು ಎನ್‌ಡಿಟವಿ ವರದಿಯಲ್ಲಿ ಹೇಳಲಾಗಿದೆ.


                                   ದುಬೈನಲ್ಲಿದ್ದುಕೊಂಡು ಕಾರ್ಯಾಚರಣೆ:

 ಮಹಾದೇವ್‌ ಆನ್‌ಲೈನ್‌ ಆಯಪ್‌ನ ಕಾರ್ಯಾಚರಣೆಯನ್ನು ದುಬೈನಲ್ಲಿರುವ ಸೌರಭ್‌ ಚಂದ್ರಕರ್ ಮತ್ತು ರವಿ ಉಪ್ಪಲ್‌ ಎಂಬುವವರು ನಡೆಸುತ್ತಿದ್ದಾರೆ. ಇವರು ಮೂಲತಃ ಛತ್ತೀಸಗಢದ ಭಿಲಾಯಿಯವರು.

              ಹೊಸ ವೆಬ್‌ಸೈಟ್‌ಗಳು, ವಾಟ್ಸ್‌ಆಯಪ್‌ನಂತಹ ಚಾಟ್‌ ಆಯಪ್‌ಗಳಲ್ಲಿ ಗ್ರೂಪ್‌ ರಚಿಸಿ, ಅವುಗಳ ಮೂಲಕ ಆಮಿಷ ಒಡ್ಡಿ ಹೊಸ ಗ್ರಾಹಕರನ್ನು ಸೆಳೆಯುತ್ತಿದ್ದರು. ಸಾಮಾಜಿಕ ಮಾಧ್ಯಮಗಳ ಆಯಪ್‌ಗಳಲ್ಲಿ ಜಾಹೀರಾತುಗಳನ್ನು ಕೂಡ ಬಿತ್ತರಿಸುತ್ತಿದ್ದ ಸೌರಭ್‌ ಹಾಗೂ ರವಿ, ತಮ್ಮ ಮೊಬೈಲ್‌ ಸಂಖ್ಯೆಯನ್ನು ಕಳಿಸುವ ಮೂಲಕ ಹಣ ಗಳಿಸಬಹುದು ಎಂದು ಜನರಿಗೆ ಆಮಿಷವೊಡ್ಡುತ್ತಿದ್ದರು ಎಂದು ಇ.ಡಿ ತನ್ನ ದೂರಿನಲ್ಲಿ ವಿವರಿಸಿದೆ.

              ಬಳಕೆದಾರರು ಕಂಪನಿ ಪ್ರತಿನಿಧಿಗಳನ್ನು ವಾಟ್ಸ್‌ಆಯಪ್‌ ಮೂಲಕ ಮಾತ್ರ ಸಂಪರ್ಕಿಸಬೇಕಿತ್ತು ಎಂದು ಇ.ಡಿ ಹೇಳಿದೆ.

             ಹೊಸ ಬಳಕೆದಾರರನ್ನು ಸಂಪರ್ಕಿಸುತ್ತಿದ್ದ ಮಹಾದೇವ್‌ ಆಯಪ್‌ನ 'ಕಸ್ಟಮರ್‌ ಕೇರ್‌' ಸಿಬ್ಬಂದಿ, ಐ.ಡಿ ಸೃಷ್ಟಿಸುವ ಕುರಿತು ಮಾರ್ಗದರ್ಶನ ಮಾಡುತ್ತಿದ್ದರು. ಐ.ಡಿ ಸೃಷ್ಟಿಸುತ್ತಿದ್ದ ‌ಬಳಕೆದಾರರಿಗೆ ಎರಡು ಮೊಬೈಲ್‌ ಸಂಖ್ಯೆಗಳನ್ನು ನೀಡಲಾಗುತ್ತಿತ್ತು.

                ಬಳಕೆದಾರರು ಒಂದು ಸಂಖ್ಯೆಯನ್ನು ಬಳಸಿ ಬೆಟ್ಟಿಂಗ್‌ ಆಯಪ್‌ನ ತಮ್ಮ ಖಾತೆಯಲ್ಲಿ ಹಣ ಠೇವಣಿ ಇಟ್ಟು, ಬೆಟ್ಟಿಂಗ್‌ ಮಾಡಬಹುದಿತ್ತು. ಮತ್ತೊಂದು ಸಂಖ್ಯೆಯನ್ನು ಗ್ರಾಹಕರ ಸೇವಾ ಕೇಂದ್ರ ಸಂ‌ಪರ್ಕಿಸಲು ಹಾಗೂ ತಮ್ಮ ಖಾತೆಗಳಲ್ಲಿ ಸಂಗ್ರಹವಾದ ಪಾಯಿಂಟ್‌ಗಳ ನಗದೀಕರಣಕ್ಕಾಗಿ ಬಳಸಬೇಕಿತ್ತು ಎಂದು ಇ.ಡಿ ವಿವರಿಸಿದೆ.

           ಈ ಖಾತೆಗಳೆಲ್ಲ ಬೇನಾಮಿ ಖಾತೆಗಳಾಗಿರುತ್ತಿದ್ದವು. ಆರಂಭದಲ್ಲಿ ಒಂದಿಷ್ಟು ಲಾಭ ಪಡೆಯುತ್ತಿದ್ದ ಹೊಸ ಬಳಕೆದಾರರು ನಂತರ ಹೆಚ್ಚಿನ ಹಣ ಗಳಿಸುವ ಆಸೆಯಿಂದ ದೊಡ್ಡ ಮೊತ್ತವನ್ನು ಆಯಪ್‌ನಲ್ಲಿನ ತಮ್ಮ ಖಾತೆಗಳಲ್ಲಿ ಠೇವಣಿ ಇಡುತ್ತಿದ್ದರು. ಕೆಲ ದಿನಗಳ ನಂತರ, ಅವರು ತಮ್ಮ ಎಲ್ಲಾ ಹಣವನ್ನು ಕಳೆದುಕೊಳ್ಳುತ್ತಿದ್ದರು.

                                    ಕಾಲ್‌ ಸೆಂಟರ್‌ಗಳ ಜಾಲ:

            ಕಂಪನಿಯ ಬ್ಯಾಂಕ್‌ ಖಾತೆಗಳು ಮಾತ್ರ ಅಕ್ರಮವಾಗಿರದೇ, ಅದು ಸ್ಥಾಪಿಸಿದ್ದ ಕಾಲ್‌ ಸೆಂಟರ್‌ಗಳು ಕೂಡ ಅಕ್ರಮವಾಗಿವೆ.

             ಭಾರತವಲ್ಲದೇ, ಮಲೇಷ್ಯಾ, ಥಾಯ್ಲೆಂಡ್‌ ಹಾಗೂ ಯುಎಇಯಲ್ಲಿ ನೂರಾರು ಕಾಲ್‌ ಸೆಂಟರ್‌ಗಳನ್ನು ಸ್ಥಾಪಿಸಿರುವ ಕಂಪನಿ, ಅವುಗಳ ಮೂಲಕ ಹತ್ತಾರು ಆಯಪ್‌, ವೆಬ್‌ಸೈಟ್‌ಗಳನ್ನು ಅಭಿವೃದ್ಧಿಪಡಿಸಿ, ಗ್ರಾಹಕರೊಂದಿಗೆ ಸಂಪರ್ಕ ಸಾಧಿಸುತ್ತಿತ್ತು ಎಂದೂ ಇ.ಡಿ ಹೇಳಿದೆ.

                ಈ ಬೆಟ್ಟಿಂಗ್‌ ಮೂಲಕ ನಿತ್ಯವೂ ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರ ನಡೆಯುತ್ತಿತ್ತು. ಪ್ರತಿನಿತ್ಯ ಕಂಪನಿಯು ₹ 200 ಕೋಟಿಯಷ್ಟು ಲಾಭ ಗಳಿಸುತ್ತಿತ್ತು ಎಂದೂ ಇ.ಡಿ ಹೇಳಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

 ಶ್ರದ್ಧಾ ಕಪೂರ್ ಕಪಿಲ್‌ ಶರ್ಮಾ ಹೀನಾ ಖಾನ್

ಪೊಲೀಸರು ಅಧಿಕಾರಿಗಳು ಹಾಗೂ ರಾಜಕಾರಣಿಗಳ ನಂಟು

                 ದುಬೈನಿಂದಲೇ ಮಹಾದೇವ್‌ ಬೆಟ್ಟಿಂಗ್‌ ಆಯಪ್‌ನ ನಿರ್ವಹಣೆ ಕಾರ್ಯಾಚರಣೆ ನಡೆಯುತ್ತಿದ್ದರೂ 'ಶಾಖೆಗಳು/ಗುಂಪು'ಗಳು ಎಂಬ ಫ್ರಾಂಚೈಸಿಗಳ ಮೂಲಕವೇ ಹೆಚ್ಚು ಕಾರ್ಯಾಚರಣೆ ನಡೆಯುತ್ತಿತ್ತು. ಬಂದ ಲಾಭವನ್ನು 70:30 ಅನುಪಾತದಲ್ಲಿ ಹಂಚಿಕೊಳ್ಳಲಾಗುತ್ತಿತ್ತು ಎಂಬ ವಿವರವೂ ತನಿಖೆಯಿಂದ ತಿಳಿದುಬಂದಿದೆ ಎಂದು ಇ.ಡಿ ಹೇಳಿದೆ. ಈ ಕಾರ್ಯದಲ್ಲಿ ಪೊಲೀಸರು ರಾಜಕಾರಣಿಗಳು ಹಾಗೂ ಅಧಿಕಾರಿಗಳನ್ನು ಒಳಗೊಂಡ 'ಸಿಂಡಿಕೇಟ್‌' ಕೂಡ ಸಕ್ರಿಯವಾಗಿತ್ತು. ಇವರಿಗೂ ಲಾಭದಲ್ಲಿ ಪಾಲು ನೀಡಲಾಗುತ್ತಿತ್ತು. ಈ ಎಲ್ಲ ವ್ಯವಹಾರಗಳನ್ನು ಸೌರಭ್‌ ಮತ್ತು ರವಿ ಅವರ ಆಪ್ತರಾದ ಅನಿಲ್‌ ದಮ್ಮಾನಿ ಹಾಗೂ ಸುನಿಲ್‌ ದಮ್ಮಾನಿ ಎಂಬುವವರು ನೋಡಿಕೊಳ್ಳುತ್ತಿದ್ದರು. ದಮ್ಮಾನಿ ಸಹೋದರರನ್ನು ಇ.ಡಿ ಈಗಾಗಲೇ ಬಂಧಿಸಿದೆ. 'ಹವಾಲಾ' ಮೂಲಕ ಬಂದ ಹಣವನ್ನು ಪೊಲೀಸರಿಗೆ ರಾಜಕಾರಣಿಗಳಿಗೆ ಹಾಗೂ ಅಧಿಕಾರಿಗಳಿಗೆ ತಲುಪಿಸುವ ಜವಾಬ್ದಾರಿಯನ್ನು ಅನಿಲ್‌ ನಿಭಾಯಿಸುತ್ತಿದ್ದರು. ಈ 'ಸಿಂಡಿಕೇಟ್‌' ಆಯಪ್‌ನ ವ್ಯವಹಾರ ಜಾರಿ ನಿರ್ದೇಶನಾಲಯದ ಕಣ್ಣಿಗೆ ಬೀಳದಂತೆ ನೋಡಿಕೊಳ್ಳುತ್ತಿತ್ತು ಎಂದೂ ದೂರಿನಲ್ಲಿ ವಿವರಿಸಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries