ನವದೆಹಲಿ: ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಆದಷ್ಟು ಶೀಘ್ರವಾಗಿ ಶಾಂತಿ ಸ್ಥಾಪಿಸುವ ಅಗತ್ಯವಿದೆ ಎಂಬ ವಿಚಾರದಲ್ಲಿ ಭಾರತವು ಈಜಿಪ್ಟ್ ಜೊತೆ ಸಹಮತ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
0
samarasasudhi
ಅಕ್ಟೋಬರ್ 30, 2023
ನವದೆಹಲಿ: ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಆದಷ್ಟು ಶೀಘ್ರವಾಗಿ ಶಾಂತಿ ಸ್ಥಾಪಿಸುವ ಅಗತ್ಯವಿದೆ ಎಂಬ ವಿಚಾರದಲ್ಲಿ ಭಾರತವು ಈಜಿಪ್ಟ್ ಜೊತೆ ಸಹಮತ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಗಾಜಾ ಪಟ್ಟಿಯಲ್ಲಿ ಮಾನವೀಯ ನೆಲೆಯಲ್ಲಿ ಕದನ ವಿರಾಮ ಘೋಷಿಸಬೇಕು ಎಂಬ ನಿರ್ಣಯಕ್ಕೆ ವಿಶ್ವಸಂಸ್ಥೆಯಲ್ಲಿ ಬೆಂಬಲ ವ್ಯಕ್ತಪಡಿಸದ ಕಾರಣಕ್ಕೆ ಕೇಂದ್ರವು ವಿರೋಧ ಪಕ್ಷಗಳ ಆಕ್ರೋಶಕ್ಕೆ ಗುರಿಯಾಗಿದೆ.
'ಭಯೋತ್ಪಾದನೆ, ಹಿಂಸಾಚಾರ ಮತ್ತು ನಾಗರಿಕರ ಜೀವ ಹಾನಿಯ ವಿಚಾರದಲ್ಲಿ ನಾವು ಸಮಾನ ಕಳವಳ ಹೊಂದಿದ್ದೇವೆ' ಎಂದು ಮೋದಿ ಅವರು, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾ ಎಲ್-ಸಿಸಿ ಅವರ ಜೊತೆ ಶನಿವಾರ ನಡೆಸಿದ ಮಾತುಕತೆಯನ್ನು ಉಲ್ಲೇಖಿಸಿ 'ಎಕ್ಸ್' ವೇದಿಕೆಯಲ್ಲಿ ಬರೆದಿದ್ದಾರೆ.
ವಿಶ್ವಸಂಸ್ಥೆಯ ಮಹಾಸಭೆಯ ನಿರ್ಣಯದ ಮೇಲಿನ ಮತದಾನದಿಂದ ಭಾರತವು ದೂರ ಉಳಿದಿತ್ತು. ಇದಾದ ನಂತರ ಮೋದಿ ಅವರು ಸಿಸಿ ಅವರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು.
ಮತದಾನದಿಂದ ದೂರ ಉಳಿಯುವ ಭಾರತದ ತೀರ್ಮಾನದಿಂದಾಗಿ ಅಸಮಾಧಾನಗೊಂಡಿರುವ ಅರಬ್ ನಾಯಕರನ್ನು ಮತ್ತೆ ವಿಶ್ವಾಸಕ್ಕೆ ತೆಗೆದುಕೊಳ್ಳುವ ಉದ್ದೇಶದಿಂದ ಮೋದಿ ಅವರು ಸಿಸಿ ಅವರಿಗೆ ಕರೆ ಮಾಡಿದ್ದರು ಎನ್ನಲಾಗಿದೆ.
ಪ್ಯಾಲೆಸ್ಟೀನ್ ವಿಚಾರದಲ್ಲಿ ಭಾರತವು ಹಿಂದಿನಿಂದಲೂ ತಾಳಿರುವ, ನೈತಿಕ ನೆಲೆಗಟ್ಟಿನ ನಿಲುವನ್ನು ಮೋದಿ ಅವರು ಸಿಸಿ ಅವರಲ್ಲಿ ಪುನರುಚ್ಚರಿಸಿದ್ದಾರೆ.