ತಿರುವನಂತಪುರಂ: ಸರ್ಕಾರಿ ವೈದ್ಯಕೀಯ ಕಾಲೇಜುಗಳ 83 ನರ್ಸಿಂಗ್ ಅಧಿಕಾರಿಗಳು ಅಕ್ರಮ ರಜೆ ಪಡೆದು ಹೊರ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಆರೋಗ್ಯ ಇಲಾಖೆ ಬಗೆಗೆ ಇದೀಗ ಹಲವು ಸಂಶಯಗಳಿಗೆ ಎಡೆಯಾಗಿದೆ. ಬದಲಿ ನೇಮಕಾತಿ ನಡೆಯದ ಕಾರಣ ವೈದ್ಯಕೀಯ ಕಾಲೇಜುಗಳಲ್ಲಿ ನರ್ಸಿಂಗ್ ವಿಭಾಗ ಸ್ಥಗಿತಗೊಂಡಿದೆ.
ಆರ್‍ಟಿಐ ದಾಖಲೆಗಳ ಪ್ರಕಾರ, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿನ ನರ್ಸಿಂಗ್ ಅಧಿಕಾರಿ/ನರ್ಸಿಂಗ್ ಗ್ರೇಡ್ 1 ಹುದ್ದೆಗಳ ವ್ಯಕ್ತಿಗಳು ಅನಧಿಕೃತ ರಜೆಯಲ್ಲಿದ್ದಾರೆ. ರಜೆಯಲ್ಲಿರುವವರ ಸಂಖ್ಯೆ ತ್ರಿಶೂರ್-7, ಕೊಟ್ಟಾಯಂ-29, ತಿರುವನಂತಪುರಂ-18, ಕೋಝಿಕ್ಕೋಡ್-20, ಅಲಪ್ಪುಳ-7 ಮತ್ತು ಕೊಲ್ಲಂ-2. ಎಂಬಂತಿದೆ.
ಅಕ್ರಮ ರಜೆ ಹಾಕುವವರಿಗೆ ನೋಟಿಸ್ ನೀಡಿ ಶಿಸ್ತು ಕ್ರಮ ಜರುಗಿಸಿ ಸೇವೆಯಿಂದ ವಜಾಗೊಳಿಸಬೇಕು ಎಂಬುದು ನಿಯಮ. ನಂತರ ಪಿಎಸ್‍ಸಿಗೆ ವರದಿ ಮಾಡಿ, ಶ್ರೇಣಿ ಪಟ್ಟಿಯಿಂದ ನೇಮಕ ಮಾಡಬೇಕು. 2020 ರಲ್ಲಿ, ಅಕ್ರಮ ರಜೆ ತೆಗೆದುಕೊಂಡ ವೈದ್ಯರು ಸೇರಿದಂತೆ ನಾಲ್ಕು ನೂರಕ್ಕೂ ಹೆಚ್ಚು ಜನರನ್ನು ವಜಾಗೊಳಿಸಲಾಗಿತ್ತು.
ಅಕ್ರಮ ರಜೆ ಹಾಕಿದವರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವಂತೆ ಅಂದಿನ ಆರೋಗ್ಯ ಸಚಿವ ಕೆ. ಶೈಲಜಾ ಸೂಚಿಸಿದ್ದರು. ಆದರೆ ಪ್ರಸ್ತಾವನೆ ಕಡತದಲ್ಲೇ ಬಾಕಿ ಉಳಿದಿದೆ ಎಂದು ತಿಳಿದುಬಂದಿದೆ.





