ನವದೆಹಲಿ: ಪಶ್ಚಿಮ ಬಂಗಾಳದ ಭಾರತ- ಬಾಂಗ್ಲಾದೇಶ ಗಡಿಯಲ್ಲಿ ಕಳ್ಳಸಾಗಣೆದಾರರು ಬೇಲಿ ತುಂಡರಿಸುವುದನ್ನು ತಡೆಯುವ ಸಲುವಾಗಿ ಗಡಿ ಭದ್ರತಾ ಪಡೆಯು (ಬಿಎಸ್‌ಎಫ್) ಜೇನು ಪೆಟ್ಟಿಗೆ ಅಳವಡಿಸುವ ವಿನೂತನ ಪ್ರಯೋಗಕ್ಕೆ ಮೊರೆ ಹೋಗಿದೆ.
0
samarasasudhi
ನವೆಂಬರ್ 06, 2023
ನವದೆಹಲಿ: ಪಶ್ಚಿಮ ಬಂಗಾಳದ ಭಾರತ- ಬಾಂಗ್ಲಾದೇಶ ಗಡಿಯಲ್ಲಿ ಕಳ್ಳಸಾಗಣೆದಾರರು ಬೇಲಿ ತುಂಡರಿಸುವುದನ್ನು ತಡೆಯುವ ಸಲುವಾಗಿ ಗಡಿ ಭದ್ರತಾ ಪಡೆಯು (ಬಿಎಸ್‌ಎಫ್) ಜೇನು ಪೆಟ್ಟಿಗೆ ಅಳವಡಿಸುವ ವಿನೂತನ ಪ್ರಯೋಗಕ್ಕೆ ಮೊರೆ ಹೋಗಿದೆ.
'ಜಾನುವಾರು, ಚಿನ್ನ ಮತ್ತು ಮಾದಕವಸ್ತುಗಳ ಕಳ್ಳಸಾಗಣೆದಾರರು ಬೇಲಿಯನ್ನು ತುಂಡರಿಸುತ್ತಾರೆ' ಎಂದು ಬಿಎಸ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಬಿಎಸ್‌ಎಫ್‌ನ 32ನೇ ಬೆಟಾಲಿಯನ್ ವತಿಯಿಂದ ನಾಡಿಯಾ ಜಿಲ್ಲೆಯ ಗಡಿ ಪ್ರದೇಶದಲ್ಲಿ ಜೇನು ಪೆಟ್ಟಿಗೆಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ. ಇದು ಸ್ಥಳೀಯರ ಜೀವನೋಪಾಯಕ್ಕೂ ಸಹಾಯಕವಾಗಬಲ್ಲುದು ಎಂದು ಬಿಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಎಸ್‌ಎಫ್‌ನ ಈ ಯೋಜನೆಗೆ ಆಯುಷ್ ಸಚಿವಾಲಯವು ಸಹಕಾರ ನೀಡಿದ್ದು, ಲೋಹದ ಸ್ಮಾರ್ಟ್ ಬೇಲಿಗೆ ಜೇನು ಪೆಟ್ಟಿಗೆಗಳನ್ನು ಅಳವಡಿಸುವ ಸಲಕರಣೆಗಳನ್ನು ಮತ್ತು ಜೇನುಪೆಟ್ಟಿಗೆಗಳನ್ನು ಒದಗಿಸಿದೆ.
ಬಿಎಸ್‌ಎಫ್‌ನ 32ನೇ ಬೆಟಾಲಿಯನ್‌ನ ಕಮಾಂಡೆಂಟ್ ಸುಜಿತ್ ಕುಮಾರ್ ಅವರ ಪರಿಕಲ್ಪನೆಯಲ್ಲಿ ಈ ಯೋಜನೆಯು ಮೂಡಿಬಂದಿದೆ.
'ಆಯುಷ್ ಸಚಿವಾಲಯವು ಹೂವು ಬಿಡುವ ಗಿಡಮೂಲಿಕೆ ಸಸ್ಯಗಳನ್ನು ನೀಡಿದ್ದು, ಅವುಗಳನ್ನು ಜೇನು ಪೆಟ್ಟಿಗೆಗಳ ಸಮೀಪ ನೆಡಲಾಗುವುದು' ಎಂದು ಸುಜಿತ್ ಕುಮಾರ್ ತಿಳಿಸಿದ್ದಾರೆ.