ನವದೆಹಲಿ: 'ನ್ಯಾಯಾಲಯಗಳು ನೀಡುವ ತೀರ್ಪಿನಲ್ಲಿನ ನ್ಯೂನತೆ ಸರಿಪಡಿಸುವುದಕ್ಕಾಗಿ ಹೊಸ ಕಾನೂನು ರೂಪಿಸುವ ಅಧಿಕಾರ ಶಾಸಕಾಂಗಕ್ಕೆ ಇಲ್ಲ. ಈ ವಿಷಯದಲ್ಲಿ ನೇರವಾಗಿ ಅಧಿಕಾರ ಚಲಾಯಿಸಲು ಅವಕಾಶವಿಲ್ಲ' ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಪ್ರತಿಪಾದಿಸಿದ್ದಾರೆ.
0
samarasasudhi
ನವೆಂಬರ್ 04, 2023
ನವದೆಹಲಿ: 'ನ್ಯಾಯಾಲಯಗಳು ನೀಡುವ ತೀರ್ಪಿನಲ್ಲಿನ ನ್ಯೂನತೆ ಸರಿಪಡಿಸುವುದಕ್ಕಾಗಿ ಹೊಸ ಕಾನೂನು ರೂಪಿಸುವ ಅಧಿಕಾರ ಶಾಸಕಾಂಗಕ್ಕೆ ಇಲ್ಲ. ಈ ವಿಷಯದಲ್ಲಿ ನೇರವಾಗಿ ಅಧಿಕಾರ ಚಲಾಯಿಸಲು ಅವಕಾಶವಿಲ್ಲ' ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಪ್ರತಿಪಾದಿಸಿದ್ದಾರೆ.
ಹಿಂದೂಸ್ಥಾನ್ ಟೈಮ್ಸ್ ಹಮ್ಮಿಕೊಂಡಿದ್ದ ನಾಯಕತ್ವ ಶೃಂಗಸಭೆಯಲ್ಲಿ ಮಾತನಾಡಿದ ಅವರು, 'ತಾವು ನೀಡಿದ ತೀರ್ಪಿನ ಬಗ್ಗೆ ಸಮಾಜ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬ ಬಗ್ಗೆ ನ್ಯಾಯಮೂರ್ತಿಗಳು ಚಿಂತಿಸುವುದಿಲ್ಲ. ಇದು ಚುನಾಯಿತ ಸರ್ಕಾರ ಹಾಗೂ ನ್ಯಾಯಾಂಗದ ನಡುವೆ ಇರುವ ವ್ಯತ್ಯಾಸವಾಗಿದೆ' ಎಂದರು.
ನ್ಯಾಯಾಲಯಗಳು ತೀರ್ಪು ಪ್ರಕಟಿಸಿದ ಬಳಿಕ ಶಾಸಕಾಂಗ ಏನನ್ನು ಮಾಡಬೇಕು ಮತ್ತು ಯಾವುದನ್ನು ಮಾಡಬಾರದು ಎಂಬ ಬಗ್ಗೆ ಸ್ಪಷ್ಟವಾದ ಗೆರೆಯಿದೆ. ನ್ಯಾಯಾಲಯವು ಯಾವುದೇ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಗುರುತಿಸುವ ನ್ಯೂನತೆಯನ್ನು ಸರಿಪಡಿಸಲಷ್ಟೇ ಕಾನೂನು ರೂಪಿಸುವ ಅಧಿಕಾರ ಶಾಸಕಾಂಗಕ್ಕೆ ಇದೆ ಎಂದು ಹೇಳಿದರು.
'ತೀರ್ಪು ತಪ್ಪಾಗಿದೆ ಎಂದು ಸಮರ್ಥಿಸಿಕೊಂಡು ಅದನ್ನು ನೇರವಾಗಿ ರದ್ದುಪಡಿಸುವ ಅಧಿಕಾರ ಶಾಸಕಾಂಗಕ್ಕೆ ಇಲ್ಲ. ಯಾವುದೇ ಪ್ರಕರಣ ಕುರಿತು ನಿರ್ಣಯ ಕೈಗೊಳ್ಳುವಾಗ ಸಂವಿಧಾನದ ನೀತಿ ನಿಯಮಗಳನ್ನಷ್ಟೇ ನ್ಯಾಯಮೂರ್ತಿಗಳು ಅನುಸರಿಸುತ್ತಾರೆ. ಸಾರ್ವಜನಿಕ ನೀತಿನಿಯಮಗಳನ್ನು ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ವರ್ಷಾಂತ್ಯಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಕನಿಷ್ಠ 72 ಸಾವಿರ ಪ್ರಕರಣಗಳನ್ನು ವಿಲೇವಾರಿ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.