ನವದೆಹಲಿ: ವಿದೇಶಿ ವಿಶ್ವವಿದ್ಯಾಲಯಗಳು ಭಾರತದಲ್ಲಿ ತಮ್ಮ ಕ್ಯಾಂಪಸ್ ಸ್ಥಾಪಿಸುವುದು ಹಾಗೂ ಕಾರ್ಯಾಚರಣೆ ನಡೆಸುವುದಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಬುಧವಾರ ಪ್ರಕಟಿಸಿದೆ.
0
samarasasudhi
ನವೆಂಬರ್ 09, 2023
ನವದೆಹಲಿ: ವಿದೇಶಿ ವಿಶ್ವವಿದ್ಯಾಲಯಗಳು ಭಾರತದಲ್ಲಿ ತಮ್ಮ ಕ್ಯಾಂಪಸ್ ಸ್ಥಾಪಿಸುವುದು ಹಾಗೂ ಕಾರ್ಯಾಚರಣೆ ನಡೆಸುವುದಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಬುಧವಾರ ಪ್ರಕಟಿಸಿದೆ.
'ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಸಾರ ಹಾಗೂ ಅದರ ಶಿಫಾರಸುಗಳ ಪ್ರಕಾರ, ಭಾರತದಲ್ಲಿನ ಉನ್ನತ ಶಿಕ್ಷಣಕ್ಕೆ ಅಂತರರಾಷ್ಟ್ರೀಯ ಆಯಾಮ ಒದಗಿಸುವುದಕ್ಕಾಗಿ ವಿದೇಶಿ ಉನ್ನತ ಶಿಕ್ಷಣ ಸಂಸ್ಥೆಗಳು (ಎಫ್‌ಎಚ್‌ಇಐ) ಇಲ್ಲಿ ತಮ್ಮ ಕ್ಯಾಂಪಸ್ ಆರಂಭಿಸುವುದಕ್ಕೆ ಅನುವು ಮಾಡಿಕೊಡುವುದು ಈ ನಿಯಮಗಳ ಉದ್ದೇಶವಾಗಿದೆ' ಎಂದು ಯುಜಿಸಿ ಮುಖ್ಯಸ್ಥ ಎಂ. ಜಗದೀಶಕುಮಾರ್ ತಿಳಿಸಿದ್ದಾರೆ.
ವಿದೇಶಿ ಶಿಕ್ಷಣ ಸಂಸ್ಥೆಗಳು ತಮ್ಮ ಕ್ಯಾಂಪಸ್ ಆರಂಭಿಸುವುದಕ್ಕೆ ಸಂಬಂಧಿಸಿ ಅರ್ಜಿ ಶುಲ್ಕವನ್ನು ಒಂದು ಬಾರಿ ಪಾವತಿಸಬೇಕು. ನಂತರ, ಯುಜಿಸಿಗೆ ಯಾವುದೇ ವಾರ್ಷಿಕ ಶುಲ್ಕಗಳನ್ನು ಪಾವತಿಸುವ ಅಗತ್ಯವಿಲ್ಲ. ತಮ್ಮ ಮೂಲಸೌಕರ್ಯ, ಜಮೀನು, ಭೌತಿಕ ಹಾಗೂ ಮಾನವ ಸಂಪನ್ಮೂಲಗಳನ್ನು ಬಳಸಿಕೊಂಡು ತಮ್ಮ ಕ್ಯಾಂಪಸ್‌ಗಳನ್ನು ಸ್ಥಾಪಿಸಬೇಕು.
ಭಾರತೀಯ ವಿದ್ಯಾರ್ಥಿಗಳಿಗೆ ಅರ್ಹತೆ ಇಲ್ಲವೇ ಅಗತ್ಯತೆ ಆಧಾರದಲ್ಲಿ ಶುಲ್ಕದಲ್ಲಿ ವಿನಾಯಿತಿ ಮತ್ತು ಶಿಷ್ಯವೇತನ ನೀಡಬಹುದು ಎಂಬುದು ಸೇರಿದಂತೆ ಹಲವಾರು ಅಂಶಗಳನ್ನು ಈ ನಿಯಮಾವಳಿಗಳು ಒಳಗೊಂಡಿವೆ.
ವಿದೇಶಿ ಶಿಕ್ಷಣ ಸಂಸ್ಥೆಗಳು ತಮ್ಮ ನೇಮಕಾತಿ ನಿಯಮಗಳ ಅನುಸಾರ ಬೋಧಕ ವರ್ಗ ಹಾಗೂ ಇತರ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಸ್ವಾಯತ್ತತೆ ಹೊಂದಿರುತ್ತವೆ. ಯಾವುದೇ ಹೊಸ ಕೋರ್ಸ್ ಆರಂಭಿಸುವ ಮುನ್ನ ಯುಜಿಸಿಯ ಅನುಮೋದನೆ ಪಡೆಯುವುದು ಕಡ್ಡಾಯ ಎಂದೂ ನಿಯಮಾವಳಿಯಲ್ಲಿ ತಿಳಿಸಲಾಗಿದೆ.